ಚುನಾವಣಾ ಪ್ರಚಾರ; ಬಿಎಸ್‌ವೈ ಪ್ರವಾಸ ಮಾಡಿದ್ದು 4 ಸಾವಿರ ಕಿ. ಮೀ.!
ಬೆಂಗಳೂರು, ಡಿಸೆಂಬರ್ 04 : 15 ಕ್ಷೇತ್ರಗಳ ಉಪ ಚುನಾವಣೆಗೆ ಒಂದು ದಿನ ಬಾಕಿ ಇದೆ. ಮಂಗಳವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಚುನಾವಣಾ ಪ್ರಚಾರಕ್ಕಾಗಿ ವಿವಿಧ ಪಕ್ಷಗಳ ನಾಯಕರು ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಉಪ ಚುನಾವಣೆ ಮಹತ್ವದ್ದಾಗಿದೆ. ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಬಹುಮತ ಪಡೆದುಕೊಳ್ಳಲು ಈ ಉಪ ಚುನಾವಣೆಯಲ್ಲಿ 7 ಸ್ಥಾನಗಳನ್ನು ಗೆಲ್ಲಲೇಬೇಕಾಗಿದೆ. ಆದ್ದರಿಂದ, 15 ಕ್ಷೇತ್ರದಲ್ಲಿಯೂ ಯಡಿಯೂರಪ್ಪ ಪ್ರಚಾರ ಮಾಡಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಬಿಜೆಪಿ ಸರ್ಕಾರದ ವಿವಿಧ ಸಚಿವರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಸುಮಾರು ಒಂದು ತಿಂಗಳಕಾಲ ವಿವಿಧ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಹಲವು ವಿರೋಧಗಳ ನಡುವೆಯೇ ಅನರ್ಹ ಶಾಸಕರನ್ನು ಬಿಜೆಪಿಗೆ ಸೇರಿಕೊಂಡ ಯಡಿಯೂರಪ್ಪ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು. 15 ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಎರಡು ಸುತ್ತಿನ ಪ್ರಚಾರ ನಡೆಸಿ ಮತಬೇಟೆಯಾಡಿದ್ದಾರೆ.

ಯಡಿಯೂರಪ್ಪ ಪ್ರವಾಸ
76 ವರ್ಷ ವಯಸ್ಸಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉಪ ಚುನಾವಣೆ ಪ್ರಚಾರಕ್ಕಾಗಿ 4,567 ಕಿ. ಮೀ. ಪ್ರವಾಸ ಮಾಡಿದ್ದಾರೆ. ಅನರ್ಹರನ್ನು ಗೆಲ್ಲಿಸಲು ಪ್ರತಿ ಕ್ಷೇತ್ರಕ್ಕೆ ಹೋಗಿ ಮತಯಾಚನೆ ಮಾಡಿದ್ದಾರೆ. ಕೇವಲ 14 ದಿನದಲ್ಲಿ ಯಡಿಯೂರಪ್ಪ 4,567 ಕಿ. ಮೀ. ಪ್ರವಾಸ ಮಾಡಿ ಮತ ಕೇಳಿದ್ದಾರೆ.

ರೋಡ್ ಶೋ, ಸಾರ್ವಜನಿಕ ಸಭೆ
ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಕ್ರಿಯರಾಗಿದ್ದರು. 15 ವಿಧಾನಸಭಾ ಕ್ಷೇತ್ರದಲ್ಲಿ 25 ಸಾರ್ವಜನಿಕ ಸಭೆ, 10 ರೋಡ್ ಶೋಗಳನ್ನು ಅವರು ನಡೆಸಿ ಮತಯಾಚನೆ ಮಾಡಿದ್ದಾರೆ. ಹಲವು ಸಭೆಗಳನ್ನು ಪಕ್ಷದ ನಾಯಕರ ಜೊತೆ ನಡೆಸಿದ್ದಾರೆ.

ಉಪ ಚುನಾವಣೆ ಘೋಷಣೆ
ಉಪ ಚುನಾವಣೆ ಘೋಷಣೆಗೆ ಮುನ್ನವೇ ಯಡಿಯೂರಪ್ಪ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದರು. ಅಭ್ಯರ್ಥಿ ಆಯ್ಕೆ ಬಗ್ಗೆ ಬೆಂಗಳೂರು, ಹುಬ್ಬಳ್ಳಿಯಲ್ಲಿ ಸಭೆಗಳನ್ನು ನಡೆಸಿದ್ದರು. ಚುನಾವಣಾ ಅಧಿಸೂಚನೆ ಪ್ರಕಟವಾದ ಬಳಿಕ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿ ಪ್ರಚಾರ ಮಾಡಿದ್ದಾರೆ. ಜನರ ತೀರ್ಪು ಏನು ಎಂಬುದು ಡಿಸೆಂಬರ್ 9ರಂದು ತಿಳಿಯಲಿದೆ.

ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ
ಅನರ್ಹ ಶಾಸಕರು ಉಪ ಚುನಾವಣೆ ಕಣಕ್ಕಿಳಿಯಬಹುದೇ? ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಸುಪ್ರೀಂಕೋರ್ಟ್ ಆದೇಶ ಬಂದ ಬಳಿಕ ರಾಜ್ಯ ಬಿಜೆಪಿ ಕಚೇರಿ ಮುಂದೆ ಯಡಿಯೂರಪ್ಪ ಅವರೇ ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ಅವರನ್ನು ಗೆಲ್ಲಿಸುವ ಹೊಣೆಯನ್ನು ಅವರೇ ಹೊತ್ತುಕೊಂಡಿದ್ದರು.












Click it and Unblock the Notifications