ಬಜೆಟ್; ನರೇಂದ್ರ ಮೋದಿ ಭಾಷಣ ಜಿಲ್ಲೆ, ತಾಲೂಕುಗಳಲ್ಲಿ ನೇರ ಪ್ರಸಾರ
ಬೆಂಗಳೂರು, ಫೆಬ್ರವರಿ 01; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 11 ಗಂಟೆಗೆ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಭಾಷಣ ಪೂರ್ಣಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಕರ್ನಾಟಕ ಬಿಜೆಪಿ ಘಟಕ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನೇರ ಪ್ರಸಾರ ಮಾಡಲಿದೆ. ಇದಕ್ಕಾಗಿ ವಿಶೇಷ ಸ್ಕ್ರೀನ್‌ಗಳ ವ್ಯವಸ್ಥೆ ಮಾಡಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಈ ಕುರಿತು ಮಾಹಿತಿ ನೀಡಿದರು, "ಬಜೆಟ್ ನಂತರ ನರೇಂದ್ರ ಮೋದಿ ಮಾಡುವ ಭಾಷಣದ ನೇರ ಪ್ರಸಾರಕ್ಕಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ" ಎಂದರು.

ಬಿಜೆಪಿ ವತಿಯಿಂದ ಫೆಬ್ರವರಿ 5 ರಿಂದ 15ರ ತನಕ ವಿವಿಧ ಸೆಮಿನಾರ್, ಮಾಧ್ಯಮ ಗೋಷ್ಠಿಗಳನ್ನು ಬಜೆಟ್ ಕುರಿತಂತೆ ಆಯೋಜನೆ ಮಾಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಇವುಗಳು ನಡೆಯಲಿವೆ.
ವಾಣಿಜೋದ್ಯಮಿಗಳು, ಛೇಂಬರ್ ಆಫ್ ಕಾಮರ್ಸ್ ಸದಸ್ಯರು, ಆರ್ಥಿಕ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ವರ್ಗದ ಜನರ ಜೊತೆಯೂ ಪಕ್ಷದ ಸಂವಾದ ಏರ್ಪಡಿಸಿದೆ.
ಬಜೆಟ್ ಭಾಷಣದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಕೇಂದ್ರ ಸಚಿವರು ಫೆಬ್ರವರಿ 5ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಬಜೆಟ್ ಕುರಿತು ಮಾತನಾಡಲಿದ್ದಾರೆ.












Click it and Unblock the Notifications