ಬಾಬಾಗೌಡ ವಾಪಸ್, ಯಡಿಯೂರಪ್ಪ ಬಿಜೆಪಿಗೆ ಟಾನಿಕ್
ದೊಡ್ಡಬಳ್ಳಾಪುರ, ಫೆ.27- 10 ದಿನಗಳ ಹಿಂದೆ ಕರ್ನಾಟಕಕ್ಕೆ ಬಂದುಹೋಗಿದ್ದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮೂರನೆಯ ಬಾರಿಗೆ ರಾಜ್ಯಕ್ಕೆ ನಾಳೆ ಬರುತ್ತಿದ್ದಾರೆ. ಫೆ. 28ರಂದು ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ 'ಭಾರತ ಗೆಲ್ಲಿಸಿ' ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಮಧ್ಯೆ, ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ನಿನ್ನೆ ದೊಡ್ಡಬಳ್ಳಾಪುರ ಮತ್ತು ಶಿವಮೊಗ್ಗಕ್ಕೆ ಬಂದುಹೋಗಿದ್ದಾರೆ. ಒಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಭಾರತ ಗೆಲ್ಲಿಸಿ' ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಇದರ ಹಿಂದಿನ ಶಕ್ತಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಇನ್ನೂ ಪ್ರಧಾನಿ ಅಭ್ಯರ್ಥಿ ಘೋಷಣೆಗೆ ಮುಂದಾಗಿಲ್ಲ. ಆದರೆ ಜಾಹೀರಾತುಗಳಲ್ಲಿ ಮಾತ್ರ ರಾಹುಲ್ ಗಾಂಧಿಯ ಭಾವಚಿತ್ರ ರಾರಾಜಿಸುತ್ತಿದೆ. ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಒಳಗಿನ ಮನಸ್ಸು ತುಡಿಯುತ್ತಿದ್ದರೂ ಆತ ಬಲಿಪಶು ಆಗಬಹುದು ಎಂಬ ಆತಂಕದಿಂದ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಪಕ್ಷವು ಹಿಂದೇಟು ಹಾಕುತ್ತಿದೆ.
ಆದರೆ ಬಿಜೆಪಿ ಹಾಗಲ್ಲ. ಚುನಾವಣಾ-ಮುಖಿಯಾಗಿರುವ ಪಕ್ಷವು ತನ್ನ ಪ್ರಧಾನಿ ಅಭ್ಯರ್ಥಿಯನ್ನು ಈಗಾಗಲೇ ಘೋಷಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸೋಲು ಖಚಿತ ಎಂದು ಅವರು ಲೇವಡಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಆರ್ ಆಶೋಕ್, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಅನೇಕ ರಾಜ್ಯ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಿಜೆಪಿಗೆ 'ಬಾಬಾ'ಗೌಡ: ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರು ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಾಬಾಗೌಡ ಪಾಟೀಲ್ ಅವರು ಕಾಲಾಂತರದಲ್ಲಿ ವಾಜಪೇಯಿ ಮತ್ತು ಅಡ್ವಾಣಿ ಅವರುಗಳಿಗೆ ಹೇಳದೆಯೇ ಬಿಜೆಪಿಯನ್ನು ತೊರೆದಿದ್ದರು. ಬೆಳಗಾವಿಯ ಬಾಬಾಗೌಡರು ಆನಂತರ ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷವನ್ನು ಸೇರಿದ್ದರು.
ಮತ್ತೆ ಚುನಾವಣಾ ಟಿಕೆಟ್ ಬಯಸಿ ನಾನು ಬಿಜೆಪಿ ಸೇರಿಲ್ಲ. ಕೇಂದ್ರದಲ್ಲಿ ಕೃಷಿ ಪ್ರಾಧಿಕಾರ ರಚನೆಯಾಗಬೇಕು ಎಂದು ಹೇಳಿದ್ದೆ. ಅಧಿಕಾರಕ್ಕೆ ಬಂದರೆ ಬಿಜೆಪಿ ಇದನ್ನು ರಚಿಸಲು ಒಪ್ಪಿದೆ. ಹೀಗಾಗಿ ನರೇಂದ್ರ ಮೋದಿ ಪ್ರಧಾನಿಯಾದರೆ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂಬ ಉದ್ದೇಶದಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ' ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಕೇಂದ್ರದಲ್ಲಿ ಕೃಷಿ ಪ್ರಾಧಿಕಾರ ರಚನೆಯಾಗಬೇಕು ಎಂಬ ಷರತ್ತಿನೊಂದಿಗೆ ಬಿಜೆಪಿಗೆ ರಿಎಂಟ್ರಿ ಕೊಟ್ಟಿರುವ ಬಾಬಾಗೌಡ ಅವರು ಕೇಂದ್ರದಲ್ಲಿ ಮೋದಿ ಸರಕಾರ ರಚನೆಯಾಗಿ ಕೃಷಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ ತಾವೇ ಅದರ ಅಧ್ಯಕ್ಷರಗಾಗುವ ಮನದಿಂಗಿತ ಹೊಂದಿದ್ದಾರೆ.












Click it and Unblock the Notifications