ಬಿಎಸ್ ಯಡಿಯೂರಪ್ಪಗೆ ಗೃಹ ಸಚಿವಾಲಯದಿಂದ ಝಡ್ ಕೆಟಗರಿ ಭದ್ರತೆ
ಬೆಂಗಳೂರು, ಅಕ್ಟೋಬರ್ 26: ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ)ವು ಬಿಜೆಪಿ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ Z ಕೆಟಗರಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತೆಯನ್ನು ನೀಡಿದೆ.
ಯಡಿಯೂರಪ್ಪ ಅವರಿಗೆ ಕರ್ನಾಟಕದಲ್ಲಿ ಮಾತ್ರ ಭದ್ರತೆ ಒದಗಿಸಲಾಗುವುದು. ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಶೀಘ್ರದಲ್ಲೇ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಯಡಿಯೂರಪ್ಪ ಅವರಿಗೆ ಕೇಂದ್ರ ಭದ್ರತಾ ರಕ್ಷಣೆಯು ಇಂಟೆಲಿಜೆನ್ಸ್ ಬ್ಯೂರೋ ಬೆದರಿಕೆ ಗ್ರಹಿಕೆ ವರದಿಯನ್ನು ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ಹಂಚಿಕೊಂಡಿದೆ.

ಮೂಲಗಳ ಪ್ರಕಾರ, ಕರ್ನಾಟಕದ ಮೂಲಭೂತವಾದಿ ಗುಂಪುಗಳಿಂದ ಯಡಿಯೂರಪ್ಪ ಅವರಿಗೆ ಅಪಾಯವಿದೆ. ಸಿಆರ್‌ಪಿಎಫ್ ಕಮಾಂಡೋಗಳು ಹಿರಿಯ ಬಿಜೆಪಿ ನಾಯಕನಿಗೆ ಕರ್ನಾಟಕದಲ್ಲಿ ಇರುವಾಗ ಮತ್ತು ರಾಜ್ಯಾದ್ಯಂತ ಅವರು ಸಂಚಾರಿಸುವ ಸಮಯದಲ್ಲಿ ಭದ್ರತೆಯನ್ನು ಒದಗಿಸುತ್ತಾರೆ.
ಯಡಿಯೂರಪ್ಪ ಅವರಿಗೆ ಝಡ್ ಕೆಟಗರಿ ಭದ್ರತೆ ಒದಗಿಸುವ ಎಂಎಚ್‌ಎ ಆದೇಶವನ್ನು ಸಿಆರ್‌ಪಿಎಫ್‌ಗೆ ಕಳುಹಿಸಲಾಗಿದೆ. ಇತ್ತೀಚೆಗೆ ಯಡಿಯೂರಪ್ಪ ಅವರು ಇತರ ರಾಜ್ಯ ಬಿಜೆಪಿ ನಾಯಕರೊಂದಿಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಉದ್ದೇಶದಿಂದ ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರವಾಸವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. 2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷ ಬಲಪಡಿಸಲು ಸಂಚಾರ ಕೈಗೊಳ್ಳಲಿದ್ದಾರೆ.
ಬಿಎಸ್‌ವೈ ಎಂದೇ ಖ್ಯಾತರಾಗಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಸುಮಾರು ಐದು ದಶಕಗಳಿಂದ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ರಾಜ್ಯದ ಪ್ರಮುಖ ಮತ ಬ್ಯಾಂಕ್‌ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಲಿಂಗಾಯತ ಸಮುದಾಯದ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ತಮ್ಮ ಮಗ ಬಿವೈ ವಿಜಯೇಂದ್ರ ಅವರನ್ನು ನೇಮಿಸುವಂತೆ ಈಗಾಗಲೇ ಬಿಎಸ್ ಯಡಿಯೂರಪ್ಪ ಲಾಭಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನೂತನ ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳಾದರೂ ಇನ್ನೂ ವಿರೋಧ ಪಕ್ಷದ ನಾಯಕನನ್ನು ನೇಮಿಸಿದಿರುವ ಬಗ್ಗೆ ಕೂಡ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ.
ವಿಜಯದಶಮಿ ದಿನ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮಾತನಾಡಿ ನಾನು ಕೂಡ ಬಿಜೆಪಿ ರಾಜ್ಯಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದೇನೆ. ಬಿಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಗಿರಬಹುದು. ಆದರೆ ಇನ್ನು ಅವರ ವರ್ಚಸ್ಸು ಕಡಿಮೆಯಾಗಿಲ್ಲ. ಅವರಿಗೆ ಮತ್ತೆ ಸ್ಥಾನ ನೀಡಬಹುದು ಎಂದು ಹೇಳಿದ್ದರು.












Click it and Unblock the Notifications