ದೆಹಲಿಯಲ್ಲಿ ಅಮಿತ್ ಶಾ, ಕರ್ನಾಟಕದಲ್ಲಿ ಯಡಿಯೂರಪ್ಪ ಮುಂದುವರಿಕೆ
ಬೆಂಗಳೂರು, ಜೂನ್ 18 : ನಿರೀಕ್ಷೆಯಂತೆ ಅಮಿತ್ ಶಾ ಅವರು ವರ್ಷಾಂತ್ಯದ ತನಕ ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಇದೇ ವೇಳೆ ಬದಲಾವಣೆ ನಿರೀಕ್ಷೆ ಹೊಂದಿದ್ದ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೂ ತಡೆ ಬಿದ್ದಿದೆ. ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್ ಯಡಿಯೂರಪ್ಪ ಅವರು ನವೆಂಬರ್ ತಿಂಗಳ ತನಕ ಮುಂದುವರೆಯುವುದು ಖಚಿತವಾಗಿದೆ.
ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಹಲವಾರು ಚುನಾವಣೆಗಳಲ್ಲಿ ಜಯ ಸಾಧಿಸಿದೆ. ಅವರು ಗೃಹ ಸಚಿವರಾದ ಕಾರಣ ಬೇರೆಯವರಿಗೆ ಸ್ಥಾನ ನೀಡುವಂತೆ ತಿಳಿಸಿದ್ದರು. ಆದರೆ, ಅವರನ್ನೇ ಅಧ್ಯಕ್ಷರಾಗಿ ಮುಂದುವರೆಸಲು ತೀರ್ಮಾನಿಲಾಗಿದೆ. ಜೆ.ಪಿ. ನಡ್ಡಾ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಮುಂಬರುವ ಮಹಾರಾಷ್ಟ್ರ, ಹರ್ಯಾಣ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ಬಗ್ಗೆ ಪಕ್ಷ ಗಮನ ಹರಿಸಬೇಕಿದೆ. ಮೋದಿ ಸರ್ಕಾರ್ 2.0ರಲ್ಲಿ ಇದು ಮೊದಲ ಚುನಾವಣೆಯಾಗಿದ್ದು, ಸದ್ಯ ಈ ಬಗ್ಗೆ ಕಾರ್ಯ ತಂತ್ರ ರೂಪಿಸಲು ಅಮಿತ್ ಶಾ ಮುಂದಾಗಿದ್ದಾರೆ.
ಏಪ್ರಿಲ್ ತಿಂಗಳಿನಲ್ಲೇ ಯಡಿಯೂರಪ್ಪ ಅವರ ಅಧಿಕಾರ ಅವಧಿ ಮುಕ್ತಾಯವಾಗಿದೆ. ಹೀಗಾಗಿ, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಸುದ್ದಿ ಹಬ್ಬಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ 13 ಆಕಾಂಕ್ಷಿಗಳಿದ್ದಾರೆ. ಸಿಟಿ ರವಿ, ಆರ್ ಆಶೋಕ್, ಅರವಿಂದ್ ಲಿಂಬಾವಳಿ, ಬಿ ಶ್ರೀರಾಮುಲು ಹೆಸರು ಮುಂಚೂಣಿಯಲ್ಲಿವೆ. ಈ ಬಾರಿ ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಯಿದೆ. ಲಿಂಗಾಯತ ವೀರಶೈವ ಮುಖಂಡರು, ಕುರುಬ ಹೀಗೆ ಜಾತಿ ಲೆಕ್ಕಾಚಾರ ಕೂಡಾ ನಡೆಯುತ್ತಿದೆ. ಆದರೆ, ಎಲ್ಲವನ್ನು ಮೀರಿ, ಮುಂದಿನ ಅವಧಿಯಲ್ಲಿ ಅಧಿಕಾರ ಸ್ಥಾಪನೆ ಮಾಡಲು ಬಿಜೆಪಿಗೆ ಬಲ ತುಂಬಬಲ್ಲಂಥವರನ್ನು ಮಾತ್ರ ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿದೆ.












Click it and Unblock the Notifications