BPL: ಎಪಿಎಲ್‌ಗೆ ವರ್ಗಾವಣೆಯಾಗಿದ್ರೆ, ಬಿಪಿಎಲ್ ಎಂದು ಸಾಬೀತುಪಡಿಸಿಕೊಳ್ಳಬೇಕೇ?: ಇಲ್ಲಿದೆ ಮಹತ್ವದ ಮಾಹಿತಿ
BPL Card: ರಾಜ್ಯದಲ್ಲಿ ಸದ್ಯ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಹಿಸುವ ಕಾರ್ಯ ನಡೆಯುತ್ತಿದೆ. ಈ ನಡುವೆಯೇ ಇದೀಗ ಬಿಪಿಎಲ್ ಎಂದು ಸಾಬೀತುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಇದರ ಸಮಯ ಕೊನೇ ಘಟಕ್ಕೆ ಬಂದು ತಲುಪಿದೆ. ಹಾಗಾದ್ರೆ ಇನ್ನೆಷ್ಟು ದಿನ ಇದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಬಿಪಿಎಲ್ ಕಾರ್ಡ್‌ಗಳನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುತ್ತದೆ. ಆದರೆ, ಶ್ರೀಮಂತರು ಅಂದರೆ ಅನರ್ಹರು ಕೂಡ ಈ ಕಾರ್ಡ್‌ಗಳನ್ನು ಪಡೆದುಕೊಂಡಿದ್ದು, ಇಂತಹವರನ್ನು ಎಪಿಎಲ್‌ಗೆ ವರ್ಗಾವಣೆ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ಅನರ್ಹರ ಬಳಿಯ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸುವ ಕಾರ್ಯವನ್ನು ಆಹಾರ ಇಲಾಖೆ ಮಾಡುತ್ತಿದೆ. ಈ ವೇಳೆ ಅರ್ಹರ ಬಳಿಯ ಬಿಪಿಎಲ್ ಕಾರ್ಡ್‌ಗಳನ್ನು ಸಹ ರದ್ದುಪಡಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಬಳಿಕ ಸರ್ಕಾರ ಇದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಫಲಾನುಭವಿಗಳಿಗೆ ಪ್ರಮುಖ ಸಲಹೆಯನ್ನು ನೀಡಿತ್ತು.
ಯಾರೆಲ್ಲಾ ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಹಿಸಲಾಗಿದೆಯೋ ಅಂತಹವರು ನಿಮ್ಮ ತಾಲ್ಲೂಕಿನ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಈ ಬಗ್ಗೆ ಅರ್ಜಿ ಸಲ್ಲಿಸಬಹುದು. ಬಳಿಕ ಪರಿಶೀಲನೆ ವೇಳೆ ಅರ್ಹರೆಂದು ಗೊತ್ತಾದ್ರೆ, ಅಂತಹರಿಗೆ ಮತ್ತೆ ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿತ್ತು. ಈ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿತ್ತು.
ಬಿಪಿಎಲ್ ಪಡಿತರ ಪರಿಷ್ಕರಣೆಗೆ ಆಕ್ಷೇಪ ಸಲ್ಲಿಕೆಗೆ ಇನ್ನೂ ಎರಡು ದಿನ ಮಾತ್ರ ಬಾಕಿಯಿದೆ. ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಆಗಿರುವ ಕಾರ್ಡ್‌ದಾರರು ಆಕ್ಷೇಪಣೆಗೆ ದಾಖಲಾತಿ ಸಲ್ಲಿಕೆ ಮಾಡುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರು ಎಂದು ಸಾಬೀತು ಮಾಡಿಕೊಳ್ಳದಿದ್ದರೆ, ಕಾರ್ಡ್ ಎಪಿಎಲ್ ಆಗಿಯೇ ಉಳಿಯಲಿದೆ.
ಯಾವುದೇ ತೆರಿಗೆ ಪಾವತಿಸುತ್ತಿಲ್ಲ, ಜಮೀನು ಇಲ್ಲ, ಸ್ವಂತ ಮನೆಯೂ ಇಲ್ಲ. ಆದರೂ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ ಎಂದು ಫಲಾನುಭವಿಗಳು ಆಕ್ರೋಶ ಹೊರಹಾಕಿದ್ದರು. ಬಳಿಕ ಎಚ್ಚೆತ್ತ ಸರ್ಕಾರ ದಾಖಲಾತಿ ಸಲ್ಲಿಸಿ ನಾವು ಬಿಪಿಎಲ್ ಮಾನದಂಡದ ಒಳಗಡೆ ಇದ್ದೇವೆ ಎಂದು ದೃಢಪಡಿಸಲು 45 ದಿನಗಳ ಕಾಲಾವಕಾಶ ನೀಡಿ ಕಳೆದ ಅಕ್ಟೋಬರ್ 30 ರಿಂದ ಪರಿಷ್ಕರಣೆ ಕಾರ್ಯವನ್ನು ಆರಂಭ ಮಾಡಿತ್ತು.
ಇದೀಗ ಈ ಡೆಡ್‌ಲೈನ್ ಮುಗಿಯುತ್ತಾ ಬರುತ್ತಿದ್ದು, ಈ ವೇಳೆಯೇ ನಾಯಬೆಲೆ ಅಂಗಡಿಗಳತ್ತ ಸಾವಿರಾರು ಸಂಖ್ಯೆಯಲ್ಲಿ ಕಾರ್ಡ್‌ದಾರರು ಆಗಮಿಸುತ್ತಿದ್ದಾರೆ. ರಾಜ್ಯಾದ್ಯಂತ 7,00,000ಕ್ಕೂ ಅಧಿಕ ಪಡಿತ ಚೀಟಿಗಳು ಪರಿಷ್ಕರಣೆಯಾಗುತ್ತಿದೆ. ತೆಗೆದುಹಾಕಲಾಗಿರುವ ಕಾರ್ಡ್‌ದಾರರು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ದಾಖಲಾತಿ ನೀಡಬೇಕು. ಅವರು ದಾಖಲಾತಿ ಸಂಗ್ರಹಿಸಿ ಆಹಾರ ಇಲಾಖೆಗೆ ಕಳುಹಿಸುತ್ತಾರೆ. ಒಂದು ವೇಳೆ ಅಹಾರ ಇಲಾಖೆಗೆ ನೀಡಿರುವ ದಾಖಲೆ ಸರಿ ಇದ್ದರೆ ಮಾತ್ರ ಬಿಪಿಎಲ್ ಕಾರ್ಡ್ ದೊರೆಯಲಿದೆ.
ರಾಜ್ಯದಲ್ಲಿ ಅನರ್ಹರು ಕೂಡ ಬಿಪಿಎಲ್ ಕಾರ್ಡ್‌ಗಳನ್ನು ಪಡದುಕೊಂಡಿದ್ದರು. ಇನ್ನೂ ಜಿಲ್ಲಾವಾರು ಬಡವರ ಸಂಖ್ಯೆಗಿಂತಲೂ ಹೆಚ್ಚು ಕಾರ್ಡ್‌ಗಳ ಹಂಚಿಕೆಯಾಗಿದ್ದವು. ಆದ್ದರಿಂದ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದ್ದು, ಈ ವೇಳೆ ಅನರ್ಹರ ಬಳಿಯ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುತ್ತಾ ಬಂದಿದೆ. ಮತ್ತೊಂದೆಡೆ ಈ ವೇಳೆ ಅರ್ಹರ ಬಳಿಯ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದರೆ, ಅವರು ಮತ್ತೆ ತಾವು ಬಿಪಿಎಲ್ ಪಡೆಯಲು ಸರ್ಕಾರ ಒಂದು ಅವಕಾಶ ನೀಡಿತ್ತು. ಬಿಪಿಎಲ್ ಎಂದು ಸಾಬೀತುಪಡಿಸಿಕೊಳ್ಳಲು ಇನ್ನೂ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ.
ಯಾರೆಲ್ಲಾ ಬಿಪಿಎಲ್ ಕಾರ್ಡ್‌ಗೆ ಅನರ್ಹರು?
* ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಗಿಂತ ಹೆಚ್ಚಿರುವವರು
* ವೈಟ್ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಉಳ್ಳವರು
* ಆದಾಯ ತೆರಿಗೆ ಪಾವತಿಸುವವರು
* 3 ಹೆಕ್ಟೇರ್‌ಗೂ ಅಧಿಕ ಭೂಮಿ ಹೊಂದಿರುವವರು
* ನಗರ ಪ್ರದೇಶಗಳಲ್ಲಿ1,000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು
* ಸರ್ಕಾರಿ, ದೊಡ್ಡ ಕಂಪನಿಗಳಲ್ಲಿ ಉದ್ಯೋಗದಲ್ಲಿ ಇರುವವರು












Click it and Unblock the Notifications