ಚಿಕ್ಕಮಗಳೂರು: ಯುವತಿಗೆ ಸಾವು ತಂದ ಸುವಾಸನೆ!
ಚಿಕ್ಕಮಗಳೂರು, ನ.18: ಸಾವಿಗೆ ಸಾವಿರ ದಾರಿ ಅಂತಾರೆ. ಆದರೆ, ಆಯಸ್ಸು ಮುಗಿದಿದ್ರೆ ಹೇಗೆ ಬೇಕಾದ್ರೂ ಅನಿರೀಕ್ಷಿತವಾಗಿ ಸಾವು ಬರಬಹುದು. ಹಗ್ಗವೇ ಹಾವಾಗಬಹುದು. ಸುವಾಸನೆಯೇ ಸಾವು ತರಬಹುದು. ಇಲ್ಲೊಬ್ಬಳು ಯುವತಿ ಪಾಲಿಗೆ ಪರಿಮಳ ಸೂಸುವ ಬಾಡಿ ಸ್ಪ್ರೇ ಮಾರಕವಾಗಿ ಪರಿಣಮಿಸಿದೆ.
ಯಾವುದನ್ನು ಎಲ್ಲಿ, ಹೇಗೆ ಬಳಸಬೇಕು ಎಂಬುದರ ಅರಿವಿಲ್ಲದಿದ್ದರೆ ಏನೆಲ್ಲ ಅನಾಹುತ ಆಗುತ್ತದೆ ಎಂಬುದಕ್ಕೆ ಈ ಯುವತಿಯ ಸಾವು ನಿದರ್ಶನ. ಯುವತಿಯ ಸಾವು ಇತರರಿಗೆ ಪಾಠವಾಗಬೇಕಿದೆ. [ಚಿಕ್ಕಮಗಳೂರಿನ ನೂರು ಸ್ಥಳಗಳಲ್ಲಿ ವೈ ಫೈ ಹಾಟ್ ಸ್ಪಾಟ್]
ಚಿಕ್ಕಮಗಳೂರು ತಾಲೂಕು ವಸ್ತಾರೆ ಗ್ರಾಮದ ವಿ.ಟಿ ದಯಾನಂದ ಅವರ ಪುತ್ರಿ 19 ವರ್ಷದ ಯುವತಿ ವಿ.ಡಿ.ಸುಧಾ ಬಟ್ಟೆಗೆ ಹಾಕಿಕೊಳ್ಳಬೇಕಾದ ಸ್ಪ್ರೇಯನ್ನು ಬಾಯಿಗೆ ಹಾಕಿಕೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ನ.13 ರಂದು ಮೇಕಪ್ ಮಾಡಿಕೊಂಡು ಹೊರಗೆ ಹೋಗಲು ತಯಾರಿ ನಡೆಸುತ್ತಿದ್ದ ಸುಧಾ ಬಟ್ಟೆಗೆ ಹಾಕಿಕೊಳ್ಳುವ ಬಾಡಿ ಸ್ಪ್ರೇಯನ್ನು ಬಾಯಿಗೆ ಸ್ಪ್ರೇ ಮಾಡಿಕೊಂಡಿದ್ದಳು. ಬಾಯಿಯೂ ಸುವಾಸನೆ ಬೀರಲಿ ಎಂಬ ಯುವತಿಯ ದೂ(ದು)ರಾಲೋಚನೆ ಆಕೆಗೆ ದುರ್ಮರಣವನ್ನೇ ತಂದಿಟ್ಟಿತು.
ಬಾಯಿ ಮೂಲಕ ಸ್ಪ್ರೇ ಹೊಟ್ಟೆ ಸೇರಿದ್ದು ಕ್ಷಣಮಾತ್ರದಲ್ಲೇ ತಡೆಯಲಾರದ ಹೊಟ್ಟೆನೋವು ಆರಂಭವಾಗಿದೆ. ಸುಧಾ ಕಿರುಚಾಡುವುದನ್ನು ಕೇಳಿಸಿಕೊಂಡು ಓಡಿಬಂದ ಹೆತ್ತವರು ಹೊತ್ತು ತಂದು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಸೇರಿಸಿದ್ರು. ಚಿಕಿತ್ಸೆಗೆ ಯುವತಿ ಸ್ಪಂದಿಸಲಿಲ್ಲ. ನಗರದ ಫಾದರ್ ಮುಲ್ಲರ್ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ.
ಯುವತಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದ ಹೆತ್ತವರಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ಹೊತ್ತೊಯ್ದರು. ಆದರೆ, ಸುಧಾ ಸಾವಿನ ದವಡೆಯಿಂದ ಪಾರಾಗಲು ಸಾಧ್ಯವೇ ಆಗಲಿಲ್ಲ. ಚಿಕಿತ್ಸೆ ಫಲಿಸದೆ ಸೋಮವಾರ ರಾತ್ರಿ ಸುಧಾ ಕೊನೆಯುಸಿರೆಳೆದಳು. ಅಸಹಜ ಪ್ರಕರಣ ದಾಖಲಿಸಿಕೊಂಡಿರುವ ಆಲ್ದೂರು ಠಾಣೆ ಪೊಲೀಸರು ಈ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು. ಸುವಾಸನೆಯೇ ಸಾವು ತಂದ ಈ ಘಟನೆ ಸುಧಾಳ ಕುಟುಂಬವನ್ನು ಕಂಬನಿಗರೆಯುವಂತೆ ಮಾಡಿದೆ.












Click it and Unblock the Notifications