ಶತ್ರುಗಳ ರೀತಿ ನೋಡ್ತಾರೆ; ಮತ್ತೆ ಸಿದ್ದರಾಮಯ್ಯ ವಿರುದ್ದ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಬಿ ಕೆ ಹರಿಪ್ರಸಾದ್!
ಬೆಂಗಳೂರು, ಆಗಸ್ಟ್ 21: ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಿದ್ದರಾಮಯ್ಯ ವಿರುದ್ದ ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ.
ಹೌದು, ನನಗೆ ಸಿಎಂ ಮಾಡುವುದು ನನಗೆ ಗೊತ್ತಿದೆ. ಅವರನ್ನು ಕೆಳಕ್ಕೆ ಇಳಿಸುವುದು ಗೊತ್ತಿದೆ ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿ.ಕೆ ಹರಿಪ್ರಸಾದ್ ಟಾಂಗ್ ನೀಡಿದ್ದಾರೆ.ಆದರೆ, ಇದೀಗ ತಮ್ಮನ್ನು ವಿರೋಧಿಸಿದ್ದಾರೆ ಎಂದರೆ ಶತ್ರುಗಳಂತೆ ನೋಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಕಿಡಿಕಾಡಿರಿದ್ದಾರೆ.

ಈ ಕುರಿತು ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ದೇವರಾಜ ಅರಸು ಧೀಮಂತ ನಾಯಕ. ನಾನು, ರೇವಣ್ಣ, ಬೋಸ್‌ರಾಜು, ಕೆ.ಎಂ.ನಾಗರಾಜು, ನಝೀರ್ ಅಹ್ಮದ್, ಸಲೀಂ ಅಹ್ಮದ್ ಒಟ್ಟಾಗಿ ಬಂದವರು. ನಾವು ವಿರೋಧಿ ಗುಂಪಿನಲ್ಲಿ ಇದ್ದರೂ ಅರಸು ಅವರು ನಮ್ಮನ್ನು ಕರೆಸಿ ಮಾತನಾಡುತ್ತಿದ್ದರು ಎಂದು ಹೇಳಿದರು.
ಇನ್ನೂ ನೀವೆಲ್ಲ ಕಪಿ ಸೈನ್ಯದ ಕಪಿಗಳು. ತುಂಬಾ ಚೇಷ್ಟೆ ಮಾಡಬೇಡಿ. ಚೇಷ್ಟೆ ಮಾಡಿದರೆ ವಿರೋಧ ಪಕ್ಷದವರು ಗಲಾಟೆ ಮಾಡುತ್ತಾರೆ. ನೀವು ನನ್ನ ವಿರೋಧಿ ಗುಂಪಿನಲ್ಲಿದ್ದರೂ ನಾನು ನಿಮ್ಮ ರಕ್ಷಣೆಗೆ ಇರುತ್ತೇನೆ ಎಂದು ಅರಸು ದೊಡ್ಡತನ ತೋರಿಸುತ್ತಿದ್ದರು. ಆದರೆ ಈಗ ಅದು ಇಲ್ಲವೇ ಇಲ್ಲ. ಯಾರಾದರೂ ವಿರೋಧಿಗಳ ಸಾಲಿನಲ್ಲಿ ಇದ್ದರೆ ಶತ್ರುಗಳ ಥರ ನೋಡುತ್ತಾರೆ ಎಂದು ಪರೋಕ್ಷವಾಗಿ ಅಸಮಾಧಾನವನ್ನ ಹೊರಹಾಕಿದ್ದಾರೆ.
ಇನ್ನೂ ಪರೋಕ್ಷವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ದ ಅಸಮಾಧಾನ ಹೊರಹಾಕಿದ ಬಿ ಕೆ ಹರಿಪ್ರಸಾದ್, ಕೆಲವು ಭಾಗದಲ್ಲಿ ಸಣ್ಣಸಣ್ಣ ಸಮುದಾಯಗಳು ಇರುತ್ತವೆ. ಅವರನ್ನ ಕರೆದು ನಿಗಮ, ಮಂಡಳಿ ಸ್ಥಾನ ನೀಡುವ ಕೆಲಸವನ್ನು ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಮಾಡಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬರುವ ಮೊದಲು ಮಾತು ಕೊಟ್ಟಂತೆ ವಿಶ್ವವಿದ್ಯಾಲಯಗಳಲ್ಲಿ ಚುನಾವಣೆಗಳನ್ನು ನಡೆಸಬೇಕು. ಚುನಾವಣೆಗಳು ನಡೆದಾಗ ಮಾತ್ರ ನಿಜವಾದ ನಾಯಕರು ಬರುತ್ತಾರೆ. ಇಲ್ಲದಿದ್ದರೆ ನಾಯಕರ ಬಳಿ ಬ್ಯಾಗ್ ಹಿಡಿದು ಓಡಾಡುವರು ನಾಯಕರಾಗುತ್ತಾರೆ ಎಂದು ಹೇಳಿದರು.
ಇನ್ನೂ ಡಿ ಕೆ ಶಿವಕುಮಾರ್ ಮಾತನಾಡಿ, ಹಿಂದಿನ ಸರ್ಕಾರಕ್ಕೆ ಅಧಿಕಾರ ವಿಕೇಂದ್ರಿಕರಣದಲ್ಲಿ ನಂಬಿಕೆ ಇಲ್ಲದ ಕಾರಣಕ್ಕೆ ಚುನಾವಣೆಗಳನ್ನೇ ನಡೆಸಿರಲಿಲ್ಲ, ನಾವೀಗ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆದಷ್ಟು ಬೇಗ ನಡೆಸುತ್ತೇವೆ. ಬಿಬಿಎಂಪಿ ಚುನಾವಣೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಪಕ್ಷಕ್ಕೆ ಬಲ ನೀಡುವಂತಹ ನಾಯಕರಿಗೆ ನಿಗಮ ಮಂಡಳಿ ಸೇರಿದಂತೆ ಇತರೇ ಅಧಿಕಾರಗಳನ್ನು ಕೊಡಿ ಎಂದು ಸಲಹೆ ನೀಡಿದ್ದಾರೆ. ಅದರಂತೆ ಶೀಘ್ರದಲ್ಲೇ ಎಲ್ಲರ ಜೊತೆ ಚರ್ಚೆ ಮಾಡಿ, ನಿಯಮಾವಳಿ ರೂಪಿಸಿ ಪಕ್ಷದ ಎಲ್ಲಾ ಘಟಕಗಳ ಸದಸ್ಯರಿಗೆ ಸಮಾನವಾದ ಅವಕಾಶ ನೀಡಲಾಗುವುದು. ಈ ಬಾರಿಯ ಚುನಾವಣಾ ಫಲಿತಾಂಶದ ಹಿಂದಿನ ದಿನವೂ ಒಂದಷ್ಟು ಜನ ಸಲಹೆ ಕೊಡುತ್ತಾ ಇದ್ದರು, ಅವರನ್ನ, ಇವರನ್ನ, ದಳದವರ ಸಹಾಯ ಕೇಳಿ ಎಂದು. ಅದಕ್ಕೆ "ನಾನು ಹೇಳಿದೆ. ಹೊಲವನ್ನು ಉತ್ತಿ, ಬಿತ್ತಿ, ಗೊಬ್ಬರ ಹಾಕಿದವರಿಗೆ ಗೊತ್ತು ಏನು ಫಲ ಬರುತ್ತದೆ ಎಂದರು.
ಎರಡು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಕ್ರಮ ಬೆಳಗಾವಿಯಲ್ಲೇ ನಡೆದಿದ್ದಾವೆ. ಆದ ಕಾರಣ ಗೃಹಲಕ್ಷ್ಮೀ ಯೋಜನೆಯನ್ನು ಬೇರೆ ಕಡೆ ನಡೆಸಿ ಎಂದು ಸಲಹೆ ನೀಡಿದರು. ಅದರಂತೆ ಆ.30 ರಂದು ಮೈಸೂರಿನಲ್ಲಿ ಭಾಗ್ಯದ ಲಕ್ಷ್ಮಿ ಮನೆಗೆ ಬರುವುದು ಎಂದು ತಿಳಿಸಿದರು.












Click it and Unblock the Notifications