Winter Session: ಡಿಸೆಂಬರ್ 9ರಂದು ಸುವರ್ಣಸೌಧಕ್ಕೆ ಬಿಜೆಪಿ ಮುತ್ತಿಗೆ: ವಿಜಯೇಂದ್ರ ಹೇಳಿದ್ದೇನು?
ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು, ಉತ್ತರ ಕರ್ನಾಟಕದ ರೈತರ ಸಮಸ್ಯೆಗಳನ್ನ ಸದನದಲ್ಲಿ ಧ್ವನಿ ಎತ್ತುತ್ತೇವೆ. ಸುಮಾರು 15-20 ಸಾವಿರ ರೈತರ ಜೊತೆ ಸುವರ್ಣಸೌಧ ಮುತ್ತಿಗೆ ಹಾಕುತ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸಜ್ಜಾಗುತ್ತಿದ್ದು, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ಮುಂದಾಗಿದೆ. ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆ, ಕಾಂಗ್ರೆಸ್ ಆಡಳಿತ ವೈಫಲ್ಯ ಮತ್ತು ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ. ಆದರೆ ಸರ್ಕಾರ ಕಾಟಾಚಾರಕ್ಕಾಗಿ ಅಧಿವೇಶನ ನಡೆಸಲು ಮುಂದಾಗಿರುವಂತಿದೆ. ಕಾಂಗ್ರೆಸ್ ಸರ್ಕಾರದ ನಿರ್ಲಜ್ಜತನದ ವಿರುದ್ಧ ಡಿಸೆಂಬರ್ 9ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ರೈತರು ರಾಜ್ಯಾದ್ಯಂತ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಯುತ್ತಿರುವಾಗ ಖರೀದಿ ಕೇಂದ್ರ ತೆರೆಯದ ಸಿದ್ದರಾಮಯ್ಯ ಸರ್ಕಾರ, ಈಗ ಕೇವಲ 5 ಲಕ್ಷ ಮೆಟ್ರಿಕ್ ಟನ್ ಖರೀದಿಸುತ್ತೇವೆಂದು ಆದೇಶ ನೀಡಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ರೈತರ ಹಿತಾಸಕ್ತಿಗೆ ಶ್ರಮಿಸಿದಂತೆ ಈಗಿನ ಕಾಂಗ್ರೆಸ್ ಸರ್ಕಾರ ರೈತಪರ ಆಡಳಿತ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು, ಉತ್ತರ ಕರ್ನಾಟಕದ ರೈತರ ಸಮಸ್ಯೆಗಳನ್ನ ಸದನದಲ್ಲಿ ಧ್ವನಿ ಎತ್ತುತ್ತೇವೆ. ಸುಮಾರು 15-20 ಸಾವಿರ ರೈತರ ಜೊತೆ ಸುವರ್ಣಸೌಧ ಮುತ್ತಿಗೆ ಹಾಕುತ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಬಿಇಒ ಕಚೇರಿಗಳಲ್ಲಿ ಲಂಚ ವಸೂಲಿ
ಕರ್ನಾಟಕದ ಬಿಇಒ ಕಚೇರಿಗಳನ್ನು ಲಂಚ ವಸೂಲಿ ಕೇಂದ್ರಗಳಾಗಿ ಮಾರ್ಪಡಿಸಿದ್ದೆ, ಕನ್ನಡ ಓದಲು ಬರೆಯಲು ಬಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಎರಡುವರೆ ವರ್ಷದ ಏಕೈಕ ಸಾಧನೆ ಎಂದು ಬಿಜೆಪಿ ದೂರಿದೆ. ಬಿಇಒ ಕಚೇರಿಗಳಲ್ಲಿ ಫೋನ್ ಪೇ ಮೂಲಕ ರಾಜಾರೋಷವಾಗಿ ಲಂಚ ಪಡೆಯುತ್ತಿದ್ದು, ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡುವ ಲ್ಯಾಪ್‌ಟಾಪ್ ಹಾಗೂ ಇನ್ನಿತರ ಉಪಕರಣಗಳ ಖರೀದಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ. ಕೂಡಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಸಚಿವ ಮಧು ಬಂಗಾರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಸರ್ಕಾರಿ ಶಾಲೆಗಳಲ್ಲಿ ಸಮರ್ಪಕ ಶಿಕ್ಷಕರಿಲ್ಲದೆ ಅತಿಥಿ ಶಿಕ್ಷಕರು ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಎಂಬುದು ಕನಸಿನ ಮಾತು. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ಶಾಲೆಗಳಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ಸಿದ್ದರಾಮಯ್ಯ ಸರ್ಕಾರಕ್ಕೆ ಶಿಕ್ಷಣ ಕ್ಷೇತ್ರದ ಮೇಲಿನ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ಅಸಮರ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಂದ ಮಕ್ಕಳ ಭವಿಷ್ಯಕ್ಕೆ ಕುತ್ತು ಬಂದಿದೆ. ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿಯಿದ್ದರೂ, ನೇಮಕಾತಿ ಆರಂಭಿಸದೆ ಸರ್ಕಾರ ಮಾತ್ರ ಕುಂಭಕರ್ಣ ನಿದ್ರೆಗೆ ಜಾರಿದಂತಿದೆ ಎಂದು ಟೀಕಿಸಿದೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಹಳ್ಳ ಹಿಡಿದಿವೆ. ಗೃಹಲಕ್ಷ್ಮಿ ಬಂದ್ ಆದಂತೆಯೇ ಶಕ್ತಿ ಯೋಜನೆಗೂ ಗ್ರಹಣ ಬಡಿಯುತ್ತಿದೆ. ಬಸ್ ವ್ಯವಸ್ಥೆ ಕಲ್ಪಿಸದ ಕಾರಣ ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ದಿನನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾನ್ಯ ಸಚಿವರೇ, ನಿಮ್ಮ ಬಸ್ಸುಗಳ ಸ್ಟೇರಿಂಗ್ ಗ್ರಾಮೀಣ ಭಾಗದತ್ತ ತಿರುಗುತ್ತದೆಯೇ? ಅಥವಾ ಬೆಂಗಳೂರಿನಲ್ಲೇ ಗಿರಕಿ ಹೊಡೆಯುತ್ತದೆಯೇ? ಎಂದು ವ್ಯಂಗ್ಯವಾಡಿದೆ.












Click it and Unblock the Notifications