ಮುಂದೊಂದು ದಿನ ರಾಮಮಂದಿರದ ಮೇಲೆ ಬಾಂಬ್ ಹಾಕಿ ಮುಸ್ಲಿಮರನ್ನು ದೂಷಿಸಲಿದೆ ಬಿಜೆಪಿ: ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್
ಬೆಂಗಳೂರು, ಸೆಪ್ಟೆಂಬರ್ 26: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಹಿಂದೂಗಳ ಮತಗಳನ್ನು ಸೆಳೆಯಲು ಬಿಜೆಪಿ ಯಾವ ಮಟ್ಟಕ್ಕಾದರೂ ಇಳಿಯಬಹುದು. ರಾಮಮಂದಿರದ ಮೇಲೆ ಬಾಂಬ್ ಹಾಕಿ, ಅದನ್ನು ಮುಸ್ಲಿಮರ ತಲೆಗೆ ಕಟ್ಟಬಹುದು ಎಂದು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಬಿಆರ್ ಪಾಟೀಲ್ ಮಾತನಾಡಿರುವ ವಿಡಿಯೊವೊಂದನ್ನು ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ, 'ಹಿಂದೂ ಧರ್ಮದ ಬುನಾದಿಯನ್ನೇ ಪ್ರಶ್ನಿಸಲು ಹೊರಟ ಕಾಂಗ್ರೆಸ್ಸಿಗರು ಈಗಲೇ ರಾಮಮಂದಿರದ ಮೇಲೆ ಕಾಕದೃಷ್ಟಿ ಬೀರಿದ್ದಾರೆ. ರಾಮಮಂದಿರವನ್ನೇ ಅಲುಗಾಡಿಸಿ ಹಿಂದೂ-ಮುಸ್ಲಿಂ ದಂಗೆಯೆಬ್ಬಿಸಿ ಅದನ್ನು ಸರ್ಕಾರದ ತಲೆಗೆ ಕಟ್ಟಲು ಕಾಂಗ್ರೆಸ್ ಈಗಾಗಲೇ ಸಜ್ಜಾಗಿರುವ ವಿಚಾರವನ್ನು ಸಚಿವರಾದ ಬಿ ಆರ್ ಪಾಟೀಲರು ಬಾಯಿ ತಪ್ಪಿ ಹೇಳಿದ್ದಾರೆ' ಎಂದು ತಿಳಿಸಿದೆ.

ಕಾಂಗ್ರೆಸ್ ಪಕ್ಷವು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಕರ್ನಾಟಕದಲ್ಲಿ ಅಕ್ರಮ ಚಟುವಟಿಕೆಗಳು ಮಿತಿ ಮೀರುತ್ತಿವೆ
ಕರ್ನಾಟಕದಲ್ಲಿ ಅಕ್ರಮ ಚಟುವಟಿಕೆಗಳು ಮಿತಿ ಮೀರುತ್ತಿವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. 'ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ಚಟುವಟಿಕೆಗಳು ಮಿತಿ ಮೀರುತ್ತಿವೆ.ಬೆಂಗಳೂರಿನ ಶಿವಾಜಿನಗರಕ್ಕೆ ಕಳೆದ ನಾಲ್ಕು ತಿಂಗಳಿಂದ ಗೋಮಾಂಸ ಸಾಗಣೆ ನಿರಂತರವಾಗಿದೆ ಎಂಬ ಖಚಿತ ಮಾಹಿತಿ ಪಡೆದ ಹಿಂದೂಪರ ಸಂಘಟನೆಗಳು 15 ಟನ್ ಗೋಮಾಂಸವನ್ನು ಪತ್ತೆ ಹಚ್ಚಿ ದಂಧೆಕೋರರನ್ನು ಬಯಲಿಗೆಳೆದಿದೆ' ಎಂದು ತಿಳಿಸಿದೆ.
ಆದರೆ, ಸಿದ್ದರಾಮಯ್ಯ ಅವರ ತುಘಲಕ್ ಸರ್ಕಾರ ಅಕ್ರಮ ಗೋಮಾಂಸ ಸಾಗಣೆದಾರರನ್ನು ರಕ್ಷಣೆ ಮಾಡುವುದಕ್ಕಾಗಿ ದುಷ್ಕೃತ್ಯ ಬಯಲಿಗೆಳೆದವರನ್ನೇ ಬಂಧಿಸಿ ತುಷ್ಟೀಕರಣ ರಾಜಕೀಯ ಮಾಡುತ್ತಿದೆ.! ಈ ಅಹಂಕಾರಿ ಸರ್ಕಾರ ಅವಸಾನ ದೂರವಿಲ್ಲ! ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ವ ಜನಾಂಗದ ಶಾಂತಿಯ ತೋಟ ಕಳಚಿ ಕರ್ನಾಟಕ ಆಶಾಂತಿಯ ಬೀಡು ಆಗುತ್ತಿದೆ. ಕಾಂಗ್ರೆಸ್ಸಿನ ವಿಪರೀತ ತುಷ್ಟೀಕರಣ ರಾಜಕೀಯದಿಂದಾಗಿ ಇದೀಗ ಮಂಗಳೂರಿನಲ್ಲಿ ಮೀನು ವ್ಯಾಪಾರ ಮಾಡದಂತೆ ದೊಡ್ಡ ಮಟ್ಟದ ಫ್ಲೆಕ್ಸ್ ಹಾಕಿ ಫತ್ವಾ ಹೊರಡಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಮಾನ್ಯ ಗೃಹ ಸಚಿವ ಡಾ ಜಿ ಪರಮೇಶ್ವರ ಅವರೇ, ತಕ್ಷಣವೇ ಈ ಫತ್ವಾಸುರರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಿ. ಇಲ್ಲದಿದ್ದರೆ ಈ ಫತ್ವಾ ರಾಜ್ಯಾದ್ಯಂತ ಅನ್ವಯಿಸುತ್ತದೆ ಎನ್ನುವಂತಹ ಕಾನೂನಿಗೆ ನಿಮ್ಮ ಸರ್ಕಾರದ ನೇರ ಬೆಂಬಲವಿದೆ ಎನ್ನುವುದನ್ನು ಒಪ್ಪಿಕೊಳ್ಳಿ..! ಎಂದು ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications