ಸಿದ್ದರಾಮಯ್ಯ ನ್ಯಾಯಾಂಗ ತನಿಖೆಗೆ ಕೊಡಬೇಕಾದ ಪ್ರಕರಣಗಳ ಪಟ್ಟಿ!
ಬೆಂಗಳೂರು, ಅಕ್ಟೋಬರ್ 19: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ಬಿಜೆಪಿ ಟ್ವೀಟ್ ಮೂಲಕ ಟೀಕೆಗಳನ್ನು ಮುಂದುವರೆಸಿದೆ. 'ನಾವು ಮಜವಾದಿಯಲ್ಲ ಸಮಾಜವಾದಿ ಎಂದಾದರೂ ತೋರಿಸಿ..!' ಎಂದು ಸವಾಲು ಹಾಕಿದೆ.
ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, 'ವಿರೋಧ ಪಕ್ಷದಲ್ಲಿದ್ದಾಗ ಸುಳ್ಳು ಆರೋಪಗಳನ್ನು ಮಾಡಿ ನ್ಯಾಯಾಂಗ ತನಿಖೆ ಆಗಬೇಕೆಂದು ಆಗ್ರಹಿಸುತ್ತಿದ್ದ ಸಿದ್ದರಾಮಯ್ಯ ಅವರು ಇಂದು ನ್ಯಾಯಾಂಗ ತನಿಖೆಗೆ ಕೊಡಬೇಕಾದ ಪ್ರಕರಣಗಳ ಪಟ್ಟಿ' ಎಂದು ಹಲವು ಪ್ರಕರಣಗಳನ್ನು ಉಲ್ಲೇಖಿಸಿದೆ.

ಬಿಜೆಪಿ ಟ್ವೀಟ್ ಹೀಗಿದೆ.
* ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು..!
* ಶ್ಯಾಡೋ ಸಿಎಂ ವರ್ಗಾವಣೆ ದಂಧೆ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು..!
* ಹಣ ಸಂಗ್ರಹಿಸಿ ಸಿಕ್ಕಿಬಿದ್ದಿರುವ #ATMSarkara ದ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!
* ಕಾಸಿಗಾಗಿ ಪೋಸ್ಟಿಂಗ್ ಮಾಡಿರುವ ಕಾಂಗ್ರೆಸ್ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!
* ಚುನಾವಣೆ ವೇಳೆ ಕುಕ್ಕರ್, ಇಸ್ತ್ರಿ ಪಟ್ಟಿಗೆ ಹಂಚಿರುವ ಸಿದ್ದರಾಮಯ್ಯ ಅವರ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!
'ಸಿದ್ದರಾಮಯ್ಯ ಅವರು ಶುದ್ಧ ಹಸ್ತರು, ಸಾಚಾಗಳು ಎಂದು ಸಾಬೀತುಪಡಿಸಲೇ ಬೇಕಾದ ಸಮಯ ಬಂದಿದೆ. ಕೈಯಲ್ಲಿ ಅಧಿಕಾರವಿದೆ ನ್ಯಾಯಾಂಗ ತನಿಖೆ ಕೊಟ್ಟು ನಾವು ಮಜವಾದಿಯಲ್ಲ ಸಮಾಜವಾದಿ ಎಂದಾದರೂ ತೋರಿಸಿ..!' ಎಂದು ಬಿಜೆಪಿ ಸವಾಲು ಹಾಕಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರದ ಹಿಂದಿನ ಹಗರಣಗಳ ತನಿಖೆಗೆ ಮುಂದಾಗಿದೆ. ಈಗಾಗಲೇ ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ನಡೆಸಲಾಗುತ್ತಿದೆ.
ಬಿಜೆಪಿ ಸರ್ಕಾರದ ವೇಳೆ ಭಾರೀ ಚರ್ಚೆಗೆ ಕಾರಣವಾಗಿದ್ದ ಶೇ 40% ಕಮೀಷನ್ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಸರ್ಕಾರ ನಿರ್ಧರಿಸಿದೆ. ಅಲ್ಲದೇ 545 ಪಿಎಸ್‌ಐ ನೇಮಕಾತಿ ಹಗರಣದ ನ್ಯಾಯಾಂಗ ತನಿಖೆಗೆ ಸಹ ಕಾಂಗ್ರೆಸ್ ಸರ್ಕಾರ ಆದೇಶ ನೀಡಿದೆ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಡೆದ ಶಿವಮೊಗ್ಗದ ಕಲ್ಲು ತೂರಾಟ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸುತ್ತಿದೆ. ಈಗ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆ ಮುಂತಾದ ವಿಚಾರ ಮುಂದಿಟ್ಟುಕೊಂಡು ನ್ಯಾಯಾಂಗ ತನಿಖೆಯ ಕುರಿತು ಟ್ವೀಟ್ ಮಾಡಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಚಿವರು ಕಾಣೆಯಾಗಿದ್ದಾರೆ ಎಂಬ ಅಭಿಯಾನವನ್ನು ನಡೆಸುತ್ತಿದೆ. ಬುಧವಾರ, 'ಡಿಯರ್ ಕರ್ನಾಟಕ ಕಾಂಗ್ರೆಸ್ ಸದಾ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುವ ಸತ್ಯ ಸಂಶೋಧನಾ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಅವರು ಕಾಣೆಯಾಗಿದ್ದಾರೆ' ಎಂದು ಪೋಸ್ಟರ್ ಹಾಕಿತ್ತು.
'ಕಾಂಗ್ರೆಸ್‌ನ ದುರಾಡಳಿತಕ್ಕೆ ಬೇಸತ್ತ ಗ್ರಾಮವಾಸಿಗರು ಗ್ರಾಮೀಣಾಭಿವೃದ್ಧಿ ಸಚಿವರ ಶೋಧನೆಯಲ್ಲಿ ತೊಡಗಿದ್ದು, ಇವರು ಸೇರಿಕೊಂಡಿರುವ ಜಾಗದ ಖಚಿತ ಮಾಹಿತಿಗಾಗಿ ಕಾದು ಕೂತಿದ್ದಾರೆ. ದಯವಿಟ್ಟು ಹುಡುಕಿ ಕೊಡಿ!' ಎಂದು ಮನವಿ ಮಾಡುವ ಮೂಲಕ ವ್ಯಂಗ್ಯ ಮಾಡಿತ್ತು.
ಬೆಂಗಳೂರಿನಲ್ಲಿ ಐಟಿ ದಾಳಿಯಲ್ಲಿ 42 ಕೋಟಿ ರೂ. ಸಿಕ್ಕ ಬಳಿಕ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ಹೆಚ್ಚಿಸಿದೆ. ಪಂಚ ರಾಜ್ಯಗಳ ಚುನಾವಣೆಗೆ ಖರ್ಚಿಗೆ ಕರ್ನಾಟಕದಿಂದ ಹಣ ಕಲೆಕ್ಷನ್ ಮಾಡಲಾಗುತ್ತಿದೆ ಎಂದು ಆರೋಪ ಮಾಡುತ್ತಿದೆ.
ಬಿಜೆಪಿ ಟ್ವೀಟ್ ಮಾಡಿ, '600 ಕೋಟಿ ಬಿಡುಗಡೆ ಮಾಡಿದ್ದರಲ್ಲೇ 102 ಕೋಟಿಯಷ್ಟು ಕಮಿಷನ್ ಪಾಲು ಪತ್ತೆಯಾಗಿದೆ! ಬೆಂಗಳೂರು ಅಭಿವೃದ್ಧಿಯ 'ಹೆಸರಿನಲ್ಲಿ' ಈಗಾಗಲೇ ಸಾವಿರಾರು ಕೋಟಿಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿರುವ ಸಿದ್ದರಾಮಯ್ಯ ಅವರು ಪಂಚರಾಜ್ಯ ಮತ್ತು ಲೋಕಸಭೆ ಚುನಾವಣೆಗಾಗಿ ಹೈ ಕಮಾಂಡ್‌ಗೆ ಕಳಿಸಬೇಕಿರುವ ಮೊತ್ತ ಕೇಳಿದರೆ ನೀವು ಕೂತಲ್ಲೇ ಹೌಹಾರಬಹುದು' ಎಂದು ಹೇಳಿದೆ.
'ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರ ತಾಳಕ್ಕೆ ಕುಣಿದು ಕರ್ನಾಟಕ ಕಾಂಗ್ರೆಸ್ ಪ್ರಚಾರದ ಟೂಲ್‌ಕಿಟ್‌ಗಾಗಿ ಸುಳ್ಳು ಸುಳ್ಳು ಆರೋಪ ಮಾಡಿದ್ದ ಗುತ್ತಿಗೆದಾರ ಸಂಘದ ಕೆಂಪಣ್ಣ ಅವರು ಈಗ ಕಾಂಗ್ರೆಸ್ಸಿನ ಭ್ರಷ್ಟಾಚಾರದ ಅಸಲಿ ರುಚಿ ಸವಿದಿದ್ದಾರೆ. ಅಸಲಿಗೆ ಪರ್ಸಂಟೇಜ್ ಜಾರಿಗೆ ತಂದಿರುವುದು #ATMSarkara ಎನ್ನುವುದು ಈಗ ಕಾಂಗ್ರೆಸ್ ಕೃಪಾಪೋಷಿತ ಗುತ್ತಿಗೆದಾರರ ಅರಿವಿಗೆ ಕೊನೆಗೂ ಬಂದಿದೆ' ಎಂದು ದೂರಿದೆ.












Click it and Unblock the Notifications