ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಚೈತ್ರಾ ಸೇರಿ ಇಬ್ಬರಿಗೆ ಜಾಮೀನು ಮಂಜೂರು
ಬೆಂಗಳೂರು, ಡಿಸೆಂಬರ್ 5: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಹಿಂದೂ ವಾಗ್ಮಿ ಚೈತ್ರಾ ಸೇರಿ ಇಬ್ಬರಿಗೆ ಜಾಮೀನು ಮಂಜೂರಾಗಿದೆ.
ಮೇ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಕುಂದಾಪುರದ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿ ಜೈಲುಪಾಲಾಗಿದ್ದ ಹಿಂದುತ್ವಪರ ಭಾಷಣಗಾರ್ತಿ ಚೈತ್ರಾಗೆ ಕೊನೆಗೂ ಜಾಮೀನು ಸಿಕ್ಕಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೋಮವಾರ ಇಬ್ಬರಿಗೆ ಜಾಮೀನು ನೀಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಭರವಸೆ ನೀಡಿ ವಂಚಿಸಿದ ಆರೋಪದ ಮೇಲೆ ಚೈತ್ರಾ ಮತ್ತು ಇತರ ಎಂಟು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.
ಉದ್ಯಮಿ ಸೆಪ್ಟೆಂಬರ್ 8 ರಂದು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಅವರು, ಪ್ರಸಾದ್ ಎಂಬ ಸಂಘ ಸ್ವಯಂಸೇವಕ ಮೂಲಕ ತನಗೆ ಚೈತ್ರಾ ಪರಿಚಯವಾಯಿತು ಎಂದು ಹೇಳಿದ್ದರು. ಚೈತ್ರಾ ಅವರು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡಿದ್ದು, ಪೂಜಾರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರು. ಭರವಸೆಯನ್ನು ಈಡೇರಿಸಲು ಸಾಧ್ಯವಾಗದಿದ್ದಾಗ ನಂತರ ಆರೋಪಿಗಳು ಪೂಜಾರಿ ಅವರಿಗೆ ಬೆದರಿಕೆ ಹಾಕಿದ್ದರು.
ಪಟ್ಟಣದ ಹೆಸರನ್ನು ಬಳಸುವುದರಿಂದ ಪಟ್ಟಣದ ಖ್ಯಾತಿಗೆ ಧಕ್ಕೆಯಾಗುತ್ತಿದೆ ಎಂಬ ದೂರಿನ ನಂತರ ಮಾಧ್ಯಮಗಳು ವರದಿಗಳಲ್ಲಿ ಚೈತ್ರಾ ಅವರ ಉಪನಾಮವನ್ನು ಬಳಸದಂತೆ ಸೆಷನ್ಸ್ ನ್ಯಾಯಾಲಯವು ಈ ಹಿಂದೆ ನಿರ್ಬಂಧಿಸಿತ್ತು. ಕಳೆದ ವಿಧಾನಸಭೆಗೂ ಮುನ್ನ ಆರೇಳು ತಿಂಗಳ ಹಿಂದೆ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ, ಹೊಸಪೇಟೆಯ ಅಭಿನವ ಹಾಲಶ್ರೀ ಸ್ವಾಮಿ ಮತ್ತು ಗ್ಯಾಂಗ್ 4 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿತ್ತು.
ಈಗ ಚೈತ್ರಾ ಹಾಗೂ ವಂಚನೆ ಪ್ರಕರಣದ 7ನೇ ಆರೋಪಿ ಶ್ರೀಕಾಂತ್ ಮಂಗಳವಾರ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ. ಪ್ರಕರಣದಲ್ಲಿ ಸಿಸಿಬಿ ಪೊಲೀಸರು, ಚೈತ್ರಾ, ಗಗನ್ ಕಡೂರು, ಹೊಸಪೇಟೆಯ ಹಾಲಶ್ರೀ ಸ್ವಾಮೀಜಿ, ಚನ್ನನಾಯ್ಕ, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಸೇರಿ 9 ಮಂದಿಯನ್ನು ಬಂಧಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ನ್ಯಾಯಾಲಯವು ಚೈತ್ರಾ ಮತ್ತು ಶ್ರೀಕಾಂತ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಎರಡು ಲಕ್ಷ ಬಾಂಡ್ ಪಡೆದು, ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಸೂಚನೆ ನೀಡಿದು ಜಾಮೀನು ಮಂಜೂರು ಮಾಡಲಾಗಿದೆ.












Click it and Unblock the Notifications