"ಕರುನಾಡನ್ನು ಪರಮೇಶ್ವರ್ ಅಲ್ಲ, ಪರಮಾತ್ಮನೇ ಕಾಪಾಡಬೇಕು"
ಭಯೋತ್ಪಾದಕರ ಪರ ಮೃದು ಧೋರಣೆ ಹೊಂದಿರುವ ಕಾಂಗ್ರೆಸ್ ಸರ್ಕಾರ ವಿಧ್ವಂಸಕ ಕೃತ್ಯ ನಡೆಸಿ ಜೈಲು ಪಾಲಾಗಿರುವ ಲಷ್ಕರ್ ಉಗ್ರನ ಕೈಗೆ ಮೊಬೈಲ್ ಹಾಗೂ ರಾಜಾತಿಥ್ಯ ನೀಡಿ ಸಾಕುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಅಲ್ಲದೆ ಕರುನಾಡನ್ನು ಗೃಹಸಚಿವ ಪರಮೇಶ್ವರ್ ಅಲ್ಲ, ಪರಮಾತ್ಮನೇ ಕಾಪಾಡಬೇಕು ಎಂದು ವ್ಯಂಗ್ಯವಾಗಿ ಹೇಳಿದೆ. ಸೆರೆಮನೆಯನ್ನೇ ಉಗ್ರನಿಗಾಗಿ ಅರಮನೆಯಾಗಿ ಪರಿರ್ವತಿಸಿರುವುದು ಕಾಂಗ್ರೆಸ್‌ನ ಓಲೈಕೆ ರಾಜಕಾರಣ ದೇಶದ ಭದ್ರತೆಗೆ ಗಂಡಾಂತರಕಾರಿ ಆಗಿದೆ. ಜೈಲು ಇರುವುದು ಅಪರಾಧಿಗಳಿಗೆ ಶಿಕ್ಷೆ ನೀಡಲು ಹೊರತು ಐಷಾರಾಮಿ ಜೀವನ ನಡೆಸುವುದಕ್ಕೆ ಅಲ್ಲ ಎಂದು ವಾಗ್ದಾಳಿ ನಡೆಸಿದೆ.
'ಗೊತ್ತಿಲ್ಲʼ ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಜೈಲಿನಲ್ಲಿರುವ ಸಮಾಜಘಾತುಕರು, ಉಗ್ರಗಾಮಿಗಳಿಗೆ ಸಿಗುತ್ತಿರುವ ರಾಜಾತಿಥ್ಯದ ಕುರಿತು ತಮಗೆ ಮಾಹಿತಿ ಇದೆಯೇ? ಯಾರ ಕೃಪಾಕಟಾಕ್ಷದಿಂದ ಅಪರಾಧಿಗಳಿಗೆ ರೆಸಾರ್ಟ್ ಸೌಲಭ್ಯ ಸಿಗುತ್ತಿದೆ? ರಾಜ್ಯದ ಸುರಕ್ಷತೆಯ ಜವಾಬ್ದಾರಿ ಕುರಿತು ತಾವುಅರಿತುಕೊಳ್ಳುವುದು ಯಾವಾಗ? ಗೊತ್ತಿಲ್ಲ ಗೃಹ ಸಚಿವ ಅವರ ನಿರ್ಲಕ್ಷ್ಯದ ಕಾರ್ಯವೈಖರಿಯಿಂದ ರಾಜ್ಯದಲ್ಲಿ ಹೈಡ್ರೋ ಗಾಂಜಾ ದಂಧೆ ತಲೆ ಎತ್ತಿದೆ. ಸರ್ಕಾರದ ದುರಾಡಳಿತದಿಂದ ಕರುನಾಡು ಅಮಲಿನಲ್ಲಿ ತೇಲಾಡುತ್ತಿದೆ ಎಂದು ಆರೋಪ ಮಾಡಿದೆ.

ಕರುನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವುದಾಗಿ ಅಧಿಕಾರ ಹಿಡಿದ ಲೂಟಿಕೋರ ಕಾಂಗ್ರೆಸ್ ಸರ್ಕಾರ, ರಾಜ್ಯವನ್ನು ಡ್ರಗ್ಸ್ ಅಡ್ಡೆಯನ್ನಾಗಿ ಮಾಡಿದೆ. ದಿನ ಬೆಳಗಾದರೆ ಗಾಂಜಾ, ಡ್ರಗ್ಸ್ ಜಫ್ತಿ ಪ್ರಕರಣಗಳು ಮಾಮೂಲಿ ಆಗುತ್ತಿವೆ. ಉಡ್ತಾ ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲಿ ಡ್ರಗ್ಸ್ ದಂಧೆಯ ಬೇರುಗಳು ಗಟ್ಟಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಿಎಂ ಸಿದ್ದರಾಮಯ್ಯನವರೇ, ಅಮಲಿನ ಘಾಟು ನಾಡೆಲ್ಲಾ ಆವರಿಸುವ ಮುನ್ನ ಹೈಡ್ರೋ ಗಾಂಜಾ ದಂಧೆಗೆ ಬ್ರೇಕ್ ಹಾಕಿ ಹಾಗೇ ಕೆಲಸಕ್ಕೆ ಬಾರದ ಗೃಹ ಸಚಿವರ ರಾಜೀನಾಮೆ ಪಡೆದು ಮನೆಗೆ ಕಳುಹಿಸಿ ಎಂದು ಒತ್ತಾಯಿಸಿದೆ.
ಕಾರಾಗೃಹಗಳು ಉಗ್ರರಿಗೆ ಸ್ಲೀಪರ್ ಸೆಲ್
ಮನಃಪರಿವರ್ತನ ಕೇಂದ್ರಗಳಾಗಬೇಕಾಗಿದ್ದ ಕಾರಾಗೃಹಗಳು ಉಗ್ರರಿಗೆ ಸ್ಲೀಪರ್ ಸೆಲ್‌ಗಳಾಗಿ ಪರಿವರ್ತನೆಯಾಗುತ್ತಿರುವುದು ನಿಜಕ್ಕೂ ದಿಗ್ಭ್ರಮೆ ತಂದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೇ ಭಯವಿಲ್ಲದೆ ಮೊಬೈಲುಗಳು, ಮಾಂಸದೂಟ ಸೇರಿದಂತೆ ಇತರ ಚಟುವಟಿಕೆಗಳು ನಡೆಯುತ್ತಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ದೇಶದ ಐಕ್ಯತೆಗೆ, ಸಮಗ್ರತೆಗೆ ಕಂಟಕವಾಗಿರುವ ಐಸಿಸ್ ಉಗ್ರರ ಬಳಿ ಮೊಬೈಲ್ ಫೋನ್ ಇರುವುದು ಕಳವಳಕಾರಿಯಾದ ಸಂಗತಿ ಎಂದಿದ್ದಾರೆ.
ಕಾರಾಗೃಹವು ನೆಟ್‌ವರ್ಕ್ ಸೆಂಟರ್ ಆಗಿರುವುದು ಕಾರಾಗೃಹ, ಗೃಹ ಇಲಾಖೆಯ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದನ್ನು ತೋರಿಸುತ್ತದೆ. ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ಮೊಬೈಲ್ ಕೊಟ್ಟಿದ್ದು ಯಾರು? ಎಂದು ಸರ್ಕಾರ ತನಿಖೆ ಮಾಡಿ, ತಪ್ಪಿತಸ್ಥರನ್ನು ಸೇವೆಯಿಂದ ತೆಗೆದು ಹಾಕಲಿ. ಹಾಗೆಯೇ, ಕರ್ನಾಟಕ ರಾಜ್ಯ ಕಂಡಿರುವ ಅತ್ಯಂತ ದುರ್ಬಲ ಗೃಹ ಮಂತ್ರಿಗಳು ತಕ್ಷಣವೇ ನೈತಿಕ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆಯನ್ನು ನೀಡಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications