'ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್'
ಬೆಂಗಳೂರು, ಮಾರ್ಚ್ 07: ಹಣಕಾಸು ಖಾತೆಯನ್ನು ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೇ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸೊ, ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು 2025-26ನೇ ಸಾಲಿನ ರಾಜ್ಯ ಬಜೆಟ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಸಮಧಾನ ಹೊರಹಾಕಿದ್ದಾರೆ.
ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್, ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಕೊಡುಗೆ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಕೈಗಾರಿಕೆಗಳಿಗೆ ಉತ್ತೇಜನವೇ ಇಲ್ಲ. ವಿಶೇಷವಾಗಿ ಕೃಷಿ ವಲಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ರೈತರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಿದೆ. ದಿನೇ ದಿನೇ ಗ್ರಾಮೀಣ ಪ್ರದೇಶಗಳಿಂದ ಗುಳೇ ಹೋಗುವ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ, ಅದನ್ನು ತಡೆಯುವ ಯಾವುದೇ ಕಾರ್ಯಕ್ರಮವನ್ನೂ ಪ್ರಕಟಿಸಿಲ್ಲ. ಹಾಗಾಗಿ ಇದು ಗ್ರಾಮೀಣ ಹಾಗೂ ರೈತ ವಿರೋಧಿ ಬಜೆಟ್ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಶಾಲೆಗಳ ಕಟ್ಟಡಗಳ ವಿಸ್ತರಣೆ ಹಾಗೂ ನವೀಕರಣಕ್ಕೆ ಬಜೆಟ್‌ನಲ್ಲಿ ಯಾವುದೇ ಹಣ ನೀಡದೇ, ಕೇವಲ 5,000 ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವುದಾಗಿ ಘೋಷಿಸಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲ ಸೌಕರ್ಯದತ್ತ ದೃಷ್ಟಿ ಹರಿಸದೆ ಕೈ ತೊಳೆದುಕೊಳ್ಳಲಾಗಿದೆ. ಸಾಂಸ್ಕೃತಿಕ ವಲಯ ಹಾಗೂ ಪ್ರವಾಸೋದ್ಯಮವನ್ನು ಬಹುವಾಗಿ ವಿಸ್ತರಿಸುವ ನಿರ್ದಿಷ್ಟವಾದ ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಕಟಿಸದೇ ಈ ಕ್ಷೇತ್ರಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಪೊಳ್ಳು ಭರವಸೆ ನೀಡಲಾಗಿದೆ.
ಪರಿಶಿಷ್ಟರು ಹಾಗೂ ಹಿಂದುಳಿದವರ ಜಪ ಮಾಡಿ ರಾಜಕೀಯವಾಗಿ ಬೆಳೆದು ಬಂದ ಸಿದ್ದರಾಮಯ್ಯನವರು ಪರಿಶಿಷ್ಟ,ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮುದಾಯಗಳ ಏಳಿಗೆಗೆ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ, ವಿವಿಧ ಹಿಂದುಳಿದ ವರ್ಗಗಳ ನಿಗಮಗಳಿಗೆ ಈ ಹಿಂದಿನ ಬಜೆಟ್ ನಲ್ಲಿ ಘೋಷಣೆಯಾದ ಪೂರ್ಣ ಪ್ರಮಾಣದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಕುಲಕಸುಬು ಆಧಾರಿತ ಸಮುದಾಯಗಳ ಬದುಕು ರಕ್ಷಿಸಲು ಯಾವುದೇ ಕಾರ್ಯಕ್ರಮಗಳನ್ನು ಕೊಡದೇ ಕೇವಲ ಅಧಿಕಾರಕ್ಕೆ ಬರಲು ಮಾತ್ರ ದಲಿತ, ಹಿಂದುಳಿದವರ ಜಪ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ವಿಜಯೇಂದ್ರ ಅಸಮಾಧಾನ ಹೊರಹಾಕಿದ್ದಾರೆ.

ಅಭಿವೃದ್ಧಿಯಲ್ಲಿ ಹಿಂದುಳಿದ ಸಮುದಾಯಗಳ ಕಷ್ಟದ ತಾಪವನ್ನು ಕಡಿಮೆ ಮಾಡುವ ಯಾವುದೇ ಯೋಜನೆ ಪ್ರಕಟಿಸದೇ ಒಬಿಸಿ ಸಮುದಾಯಗಳ ಹಿತಾಸಕ್ತಿಯನ್ನು ಪೂರ್ಣ ಕಡೆಗಣಿಸಲಾಗಿದೆ. ಶಿಕ್ಷಣ ತರಬೇತಿ ಪಡೆದು ಉದ್ಯೋಗಕ್ಕಾಗಿ ಕಾದು ಕುಳಿತಿರುವ ಶಿಕ್ಷಕ ಸಮುದಾಯವನ್ನು ಸಂಪೂರ್ಣ ನಿರಾಸೆಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಗಟ್ಟಿಗೊಳಿಸುವಲ್ಲಿ ತನ್ನ ನಿರಾಸಕ್ತಿಯನ್ನು ಮುಖ್ಯಮಂತ್ರಿ ಬಜೆಟ್ ಮೂಲಕ ತೋರಿಸಿದ್ದಾರೆ.
ಕೆಳ ಮಧ್ಯಮ ವರ್ಗಗಳ ಅಭ್ಯುದಯ ಕೇಂದ್ರೀಕರಿಸುವ ಯಾವ ಯೋಜನೆಯೂ ಇಲ್ಲ. ವಸತಿ ಸಮಸ್ಯೆ ನೀಗಿಸಲು ಈ ಬಜೆಟ್ ನಲ್ಲಿ ಯಾವುದೇ ಯೋಜನೆ ಪ್ರಕಟಿಸಿಲ್ಲದಿರುವುದು ಈ ಸರ್ಕಾರ ಕೇವಲ ಬಡವರ ವಿರೋಧಿ ಅಷ್ಟೇ ಅಲ್ಲ, ಮಧ್ಯಮ ಹಾಗೂ ಕೆಳವರ್ಗಗಳ ವಿರೋಧಿ ಎನ್ನುವುದನ್ನು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ತೋರಿಸಿದ್ದಾರೆ.
ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳು ಕೇವಲ ಕಾಗದದಲ್ಲೇ ಉಳಿಯುವ ಸಾಧ್ಯತೆ ಗೋಚರವಾಗುತ್ತಿದೆ. 'ಹೇಳುವುದು ಒಂದು ಮಾಡುವುದು ಇನ್ನೊಂದು' ಎಂಬಂತೆ ಈ ಬಜೆಟ್ ಆಗಬಾರದು, ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿದ್ದವೆಲ್ಲವೂ ಘೋಷಣೆಯಾಗಿಯೇ ಉಳಿದಿದೆ, ಈ ಬಜೆಟ್ ಗೂ ಅದೇ ಗತಿ ಆಗುವ ಸಾಧ್ಯತೆಯೇ ಹೆಚ್ಚು ಎನ್ನುವುದು ರಾಜ್ಯದ ದಯನೀಯ ಆರ್ಥಿಕ ಪರಿಸ್ಥಿತಿ ಹೇಳುತ್ತಿದೆ.
ತನ್ನ ತೆರಿಗೆ ಪಾಲನ್ನು ಪಡೆಯುವಲ್ಲಿ ಎಡವಿ ಬಿದ್ದಿರುವ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವ ಅಂಶಗಳನ್ನು ಸೇರಿಸಿಕೊಂಡು ರಾಜ್ಯದ ಆರ್ಥಿಕ ಸ್ಥಿತಿಯ ನಿರ್ವಹಣೆಯ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೊರಟಿದ್ದಾರೆ.
ತಾವು ಘೋಷಿಸಿರುವ ಹೊಸ ಕಾರ್ಯಕ್ರಮಗಳಿಗೆ ಹಾಗೂ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಸಂಪನ್ಮೂಲ ಕ್ರೋಡೀಕರಣದ ಮೂಲಗಳನ್ನು ಸ್ಪಷ್ಟವಾಗಿ ಎಲ್ಲಿಯೂ ವಿವರಿಸಿಲ್ಲ, ಅ ಮೂಲಕ ಇದೊಂದು ತೋರಿಕೆಯ ಹಾಗೂ ಜನರ ಕಿವಿಗೆ ಹೂ ಮುಡಿಸುವ ಬಜೆಟ್ ಆಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕೃಷಿಕರು, ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಎನ್.ಹೆಚ್.ಎಂ ನೌಕರರು ಸೇರಿದಂತೆ ಶ್ರಮಿಕ ವರ್ಗಗಳನ್ನು ಕಡೆಗಣಿಸಿ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯಾವುದೇ ಅಂಶಗಳನ್ನು ಬಜೆಟ್‌ನಲ್ಲಿ ಕಾರ್ಯಗತಗೊಳಿಸಲು ಯಾವುದೇ ಹೊಸ ಭರವಸೆಯ ಹೆಜ್ಜೆ ಇಡದೇ ಕೊಟ್ಟ ಮಾತು ತಪ್ಪಿದ ಜನ ವಿರೋಧಿ ಬಜೆಟ್ ಸಿದ್ದರಾಮಯ್ಯನವರು ಮಂಡಿಸಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.












Click it and Unblock the Notifications