BJP: ಬಿಜೆಪಿಗರಿಗೆ ಕೇಸ್ ಹಾಕದೆ ಮುದ್ದು ಮಾಡಿ, ಲಾಲಿ ಹಾಡುತ್ತಾ ಮಲಗಿಸಬೇಕೆ: ಸಚಿವ ಪ್ರಿಯಾಂಕ್ ಖರ್ಗೆ
ಬಿಜೆಪಿಗರಿಗೆ ಕೇಸ್ ಹಾಕದೆ ಮುದ್ದು ಮಾಡಿ, ಲಾಲಿ ಹಾಡುತ್ತಾ ಮಲಗಿಸಬೇಕೆ ಎಂದು ಕೇಂದ್ರ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ. ಸಮಾಜಘಾತುಕತನವನ್ನು ಕಣಕಣದಲ್ಲೂ ಮೈಗೂಡಿಸಿಕೊಂಡಿರುವ ಬಿಜೆಪಿಗರಿಗೆ ಕೇಸ್ ಹಾಕದೆ ಮುದ್ದು ಮಾಡಿ, ಲಾಲಿ ಹಾಡುತ್ತಾ ಮಲಗಿಸಬೇಕೆ? ಸಮಾಜದಲ್ಲಿ ದ್ವೇಷದ ವಿಷ ತುಂಬಲು ಪ್ರಯತ್ನಿಸುವ ಯಾರೇ ಆದರೂ ಕಾನೂನು ಕ್ರಮಕ್ಕೆ ಒಳಪಡಲೇಬೇಕು. ಕಾನೂನು ಪಾಲನೆ ಮಾಡುವ ಪೊಲೀಸರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತನಾಡಿದ ಭರತ್ ಶೆಟ್ಟಿ ಬಿಜೆಪಿಯ "ಸುಸಂಸ್ಕೃತ" ಪರಂಪರೆಯ ರಾಯಭಾರಿಯಾಗಿ ಮಾತನಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಸಿ.ಟಿ ರವಿ, ಯಶ್ ಪಾಲ್ ಸುವರ್ಣ ಬಿಜೆಪಿ ಸಂಸ್ಕೃತಿಯ ರಾಯಭಾರಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವಾಗಲೇ ಭರತ್ ಶೆಟ್ಟಿಯವರೂ ನಾನೇನೂ ಕಮ್ಮಿ ಇಲ್ಲ ಎಂದು ಅಖಾಡಕ್ಕೆ ಇಳಿದಿದ್ದಾರೆ! ಶಾಸಕ, ಸಂಸದರಂತಹ ಎಷ್ಟೇ ಪ್ರಭಾವಿ ಸ್ಥಾನದಲ್ಲಿದ್ದರೂ ಕಾನೂನು ಪಾಲನೆಯ ಕರ್ತವ್ಯ ಮಾಡಿದ ಪೊಲೀಸರನ್ನು ಜನತೆ ಶ್ಲಾಘಿಸುತ್ತಿದ್ದಾರೆ, ನಿಂದನೆಗೆ ಇಳಿದಿರುವ ಬಿಜೆಪಿಗರಿಗೆ ತಿಳಿದಿರಲಿ, ಪೊಲೀಸರು ಖಾಕಿ ಹಾಕಿಕೊಂಡು ಕಾನೂನು ಪಾಲನೆ ಮಾಡುತ್ತಿದ್ದಾರೆಯೇ ಹೊರತು ಬಿಜೆಪಿಗರಂತೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜಘಾತುಕ ಕೆಲಸಗಳನ್ನು ಮಾಡುತ್ತಿಲ್ಲ.

ಬಿಜೆಪಿಗರು ತಾವು ಸಂವಿಧಾನ, ಕಾನೂನು, ನಿಯಮಗಳಿಗೆ ಅತೀತರು ಎಂದು ಭಾವಿಸಿಕೊಂಡಿದ್ದಾರೆ, ಈ ಭ್ರಮೆಯಿಂದ ಹೊರಬಂದು ಸಭ್ಯರಾಗದೇ ಇದ್ದಲ್ಲಿ ಕಾನೂನು ತನ್ನ ಕೆಲಸವನ್ನು ಮಾಡುತ್ತದೆ, ಇದಕ್ಕೆ ಯಾರೂ ಹೊರತಲ್ಲ. ಬಿಜೆಪಿ ನಾಯಕರಾಗಲಿ, ಕಾರ್ಯಕರ್ತರೇ ಆಗಿರಲಿ, ಕಾನೂನು ಕ್ರಮ ಜರುಗಿಸಬಾರದು ಎಂದರೆ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ತಮ್ಮ ಮಾತು ಮತ್ತು ಕೃತಿಗಳನ್ನು ನಿರ್ವಹಿಸಬೇಕು. ಬಿಜೆಪಿ ಕರ್ನಾಟಕ ನಾಯಕರು ಕರ್ನಾಟಕದ ಪೊಲೀಸರನ್ನು ನಾಯಿಗೆ ಹೋಲಿಸುವ ಮಾತುಗಳು ಅವರ ದುರಹಂಕಾರದ ಪರಮಾವಧಿಯನ್ನು ಸೂಚಿಸುತ್ತದೆ. ನಮ್ಮ ಅಧಿಕಾರಿಗಳ ನೈತಿಕ ಸ್ಥೈರ್ಯ ಕಸಿಯುವ ಯಾವುದೇ ಪ್ರಯತ್ನಗಳನ್ನೂ ನಾನು ಸಹಿಸುವುದಿಲ್ಲ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಚ್ಚರಿಕೆ ನೀಡಿದ್ದಾರೆ.
ಸುಳ್ಳು ವಿಜೃಂಭಿಸಬಹುದು, ಆದರೆ ಸತ್ಯವನ್ನು ಅಳಿಸಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕರ ತೇಜೋವಧೆಗೆ ಬಿಜೆಪಿ ಬಳಸಿದ ವಾಮಮಾರ್ಗಗಳು ಒಂದೆರಡಲ್ಲ, ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲದಿದ್ದರೂ, ಸುಳ್ಳು ಸೃಷ್ಟಿಸುವ ಅನಾಹುತಗಳು ಭೀಕರ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
2ಜಿ ಸ್ಪೆಕ್ಟ್ರಂ ವಿಷಯದಲ್ಲಿ ಬಿಜೆಪಿ ಮಾಡಿದ ಆರೋಪಗಳು ನಿರಾಧಾರ ಎಂಬುದು ನ್ಯಾಯಾಲಯದಲ್ಲಿ ನಿರೂಪಿತವಾಗಿದ್ದು ಈಗ ಇತಿಹಾಸ, ಅಂತೆಯೇ ಕಲ್ಲಿದ್ದಲು ಹಂಚಿಕೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಬಿಜೆಪಿ ಹೊರಿಸಿದ್ದ ಆರೋಪದಲ್ಲೂ ಈಗ ಸತ್ಯದ ಅನಾವರಣವಾಗಿದೆ. ದೇಶ ಕಂಡಂತಹ ಸುಶಿಕ್ಷಿತ, ಸಭ್ಯ ಹಾಗೂ ಸೌಮ್ಯ ಸ್ವಭಾವದ ಮನಮೋಹನ್ ಸಿಂಗ್ ಅವರ "ಪ್ರಾಮಾಣಿಕತೆ"ಗೆ ಬಿಜೆಪಿ ಇಟ್ಟಿದ್ದ ಕಪ್ಪು ಚುಕ್ಕೆಗೆ ಈಗ ಮುಕ್ತಿ ಸಿಕ್ಕಿದೆ. ಆದರೆ ಅವರಂತಹ ಮೇಧಾವಿ ಆಡಳಿತಗಾರರನ್ನು ಕಳೆದುಕೊಂಡ ದೇಶ ಈಗ ದುಷ್ಟರ ಪರಿಣಾಮಗಳನ್ನು ಎದುರಿಸುತ್ತಿದೆ. ಬಿಜೆಪಿಗರು ಕಟ್ಟುವ ಸುಳ್ಳುಗಳ ಮಹಲು ಹೆಚ್ಚು ದಿನ ನಿಲ್ಲುವುದಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ ಎಂದಿದ್ದಾರೆ.


Click it and Unblock the Notifications
