ರಾಜ್ಯದ ರೈತರಿಗೆ ಕೂಡಲೇ ಪರಿಹಾರ ನೀಡಲಿ ಇಲ್ಲ ರಾಜೀನಾಮೆ ಕೊಡಲಿ: ರಾಜ್ಯಪಾಲರಿಗೆ ಬಿಜೆಪಿ ಆಗ್ರಹ
ಬೆಂಗಳೂರು, ಜನವರಿ 09: ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಕರ್ನಾಟಕ ರಾಜ್ಯ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ಮಧ್ಯೆ ಬರಗಾಲದ ಪರಿಹಾರ ವಿತರಣೆ ವಿಳಂಬ ಕುರಿತು ವಾಗ್ವಾದಗಳು ಮುಂದುವರಿದಿದೆ. ಪರಿಹಾರ ನೀಡದಿದ್ದರೆ ರಾಜಿನಾಮೆ ನೀಡುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಈ ಸಂಬಂಧ ವಿಪಕ್ಷ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯಪಾಲ ಥಾವರ್‌ಚೆಂದ್ ಗೆಲ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ರಾಜ್ಯದ ಬರಗಾಲ ಪರಿಸ್ಥಿತಿ ಕುರಿತು ತಿಳಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತಿತರ ಮುಖಂಡರು ಜೊತೆಗಿದ್ದರು.

ಬಿಜೆಪಿ ಸರ್ಕಾರ ವಿತರಿಸಿದಂತೆಯೇ ತ್ವರಿತವಾಗಿ ರಾಜ್ಯ ಸರ್ಕಾರಕ್ಕೆ ಪರಿಹಾರ ವಿತರಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗವು ಮನವಿ ಮಾಡಿದೆ.
ರಾಜಭವನದಿಂದ ಹೊರ ಬಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಒಂದು, ಎರಡು ತಿಂಗಳಲ್ಲಿ ರೈತರಿಗೆ ಪ್ರವಾಹ ಹಾನಿ ಪರಿಹಾರ ವಿತರಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಕೂಡಲೇ ಪರಿಹಾರ ವಿತರಿಸಲಿ, ಇಲ್ಲವಾದರೆ ಎಲ್ಲರೂ ರಾಜೀನಾಮೆ ನೀಡಲಿ ಎಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸವಾಲೆಸೆದರು.
ರೈತರ ಬಗ್ಗೆ ಕಾಳಜಿಯೇ ಇಲ್ಲ
ರಾಜ್ಯದಲ್ಲಿ ಸುಮಾರು 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಕಡೆಗೆ ಸರ್ಕಾರ ತಿರುಗಿಯೂ ನೋಡುತ್ತಿಲ್ಲ. ಅಧಿಕಾರಿಗಳು ಸಾಂತ್ವನ ಹೇಳಿಲ್ಲ, ಸಚಿವರು ಕೂಡ ರೈತರ ಬಳಿ ಹೋಗಿಲ್ಲ. ಉತ್ತರ ಕರ್ನಾಟಕದಲ್ಲಿ ವಲಸೆ ಆರಂಭವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಬರಗಾಲ ಶುರುವಾಗಿ ಐದು ತಿಂಗಳಾದರೂ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ. ಎರಡು ಸಾವಿರ ರೂಪಾಯಿ ಪರಿಹಾರ ನೀಡುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಇದುವರೆಗೆ ರೈತರಿಗೆ ಹಣ ತಲುಪಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದ ಲಾಲಸೆಯಿಂದಾಗಿ ರೈತರನ್ನು ಅನಾಥರನ್ನಾಗಿಸಿದೆ. ಏನೇ ಕೇಳಿದರೂ ಕೇಂದ್ರ ಸರ್ಕಾರ ನೆರವಿಗೆ ಬರುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯಿಂದ ತ್ವರಿತ ಪರಿಹಾರ ವಿತರಣೆ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರದ ನೆರವಿಗೆ ಕಾಯದೆ ರಾಜ್ಯ ಸರ್ಕಾರದಿಂದಲೇ ಪರಿಹಾರ ನೀಡಲಾಗಿತ್ತು. ಹಿಂದೆ ಕಾಂಗ್ರೆಸ್ ಇದ್ದಾಗ ಪರಿಹಾರ ನೀಡಲು ಏಳೆಂಟು ತಿಂಗಳು ತಡ ಮಾಡುತ್ತಿದ್ದರು. ಬಿಜೆಪಿ ಅವಧಿಯಲ್ಲಿ ಮೊದಲ ಬಾರಿಗೆ ಡಿಬಿಟಿ ಮುಖಾಂತರ ರೈತರಿಗೆ 3 ಸಾವಿರ ಕೋಟಿ ರೂ.ಗೂ ಅಧಿಕ ಪರಿಹಾರ ನೀಡಿತ್ತು.
ಆದರೆ ಈಗಿನ ಸರ್ಕಾರ ಕೇವಲ 100 ಕೋಟಿ ರೂ. ಪರಿಹಾರ ನೀಡಲಿದೆ. ಬಿಜೆಪಿ ಇದ್ದಾಗ ರಾಜ್ಯದಿಂದ ಪರಿಹಾರ ನೀಡಿದ ಬಳಿಕ ಕೇಂದ್ರದಿಂದ ಪರಿಹಾರ ಬಂದಿತ್ತು. ನಮ್ಮ ಸರ್ಕಾರ ದುಪ್ಪಟ್ಟು ಪರಿಹಾರ ನೀಡಿತ್ತು. ಉದಾಹರಣೆಗೆ, 18 ಸಾವಿರ ರೂ. ಇದ್ದರೆ 10 ಸಾವಿರ ರೂ. ಸೇರಿಸಿ 28 ಸಾವಿರ ರೂ. ಪರಿಹಾರ ನೀಡಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದೆ, ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದೆ. ಬರಗಾಲ ಬರಲು ರೈತರು ಕಾಯುತ್ತಿದ್ದಾರೆ ಎಂದು ಸಚಿವರೇ ಹೇಳುತ್ತಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.
ಪರಿಹಾರ ನೀಡಲಿ ಇಲ್ಲ ರಾಜೀನಾಮೆ ಕೊಡಲಿ
ಈ ಮೇಲಿನ ಕಾರಣಗಳಿಂದಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರದ ಬೇಜವಾಬ್ದಾರಿತನದ ಬಗ್ಗೆ ವಿವರಿಸಿದ್ದೇವೆ. ಈ ಸರ್ಕಾರ ರೈತರಿಗೆ ಪರಿಹಾರ ನೀಡದೆ ಬೊಗಳೆ ಬಿಡುತ್ತಿದೆ. ಹಿಂದಿನ ನಮ್ಮ ಬಿಜೆಪಿ ಸರಕಾರ ಒಂದು, ಎರಡು ತಿಂಗಳಲ್ಲಿ ಪರಿಹಾರ ನೀಡಿರುವಾಗ ಈಗಿನ ಸರ್ಕಾರ ಕೂಡ ಅದೇ ರೀತಿ ಪರಿಹಾರ ಕೊಡಲಿ, ಇಲ್ಲವಾದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದೇವೆ.












Click it and Unblock the Notifications