ಕೃಷಿ ಕಾರ್ಮಿಕರಿಗೆ ಗುಳೆ ಗ್ಯಾರೆಂಟಿ ಕೊಟ್ಟ ಸರ್ಕಾರ: ಶೂಚನೀಯ ಪರಿಸ್ಥಿತಿ ವಿವರಿಸಿದ ಆರ್.ಅಶೋಕ್
ಬೆಂಗಳೂರು, ಜನವರಿ 07: ಬರ ಮತ್ತು ಸಾಲಬಾಧೆಯಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕದ ರೈತರಿಗೆ ತಮ್ಮ ಜೀವ ಉಳಿಸಿಕೊಳ್ಳಲು ಈಗ ಊರು ಬಿಡುವುದೊಂದೇ ದಾರಿ ಎಂಬ ಶೋಚನೀಯ ಪರಿಸ್ಥಿತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತಂದಿಟ್ಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.
ಸದಾ ಬಣ ರಾಜಕೀಯದಲ್ಲಿ ನಿರತವಾಗಿರುವ ಕಾಂಗ್ರೆಸ್ ಮಂತ್ರಿಗಳು ಹಾಗೂ ಶಾಸಕರು, ಎಷ್ಟು ಜನ ಉಪಮುಖ್ಯಮಂತ್ರಿಗಳಿರಬೇಕು ಎಂದು ಲೆಕ್ಕಾಚಾರ ಹಾಕುವ ಬದಲು ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಏನು ಮಾಡಬೇಕು ಎಂದು ಯೋಚಿಸಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

ಪಂಚ ರಾಜ್ಯಗಳ ಚುನಾವಣೆಗೆ ಕಲೆಕ್ಷನ್ ಮಾಡುವಲ್ಲಿರುವ ಆಸಕ್ತಿಯಲ್ಲಿ, ತೆಲಂಗಾಣ ಚುನಾವಣೆಗೆ ಪ್ರಚಾರ ಮಾಡುವಲ್ಲಿರುವ ಉತ್ಸಾಹದಲ್ಲಿ ಕೊಂಚವಾದರೂ ರಾಜ್ಯದ ರೈತರ ಬಗ್ಗೆ ಇದ್ದಿದ್ದರೆ, ಕೃಷಿ ಕಾರ್ಮಿಕರು ಇಂದು ಮನೆ ಮಠ ಬಿಟ್ಟು ಗುಳೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಕುಟುಕಿದರು.
ಗುಳೆ ಹೋಗುವುದನ್ನು ತಪ್ಪಿಸಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮಲ್ಲಿ ನಿಜಕ್ಕೂ ಮಾನವೀಯತೆ ಇದ್ದರೆ, ರಾಜ್ಯದ ಕೃಷಿ ಕಾರ್ಮಿಕರು, ದಲಿತರು, ಪರಿಶಿಷ್ಟ ಪಂಗಡದವರು, ಹಿಂದುಳಿದವರ ಮೇಲೆ ಕಾಳಜಿ ಇದ್ದರೆ ಮೊದಲು ರಾಜ್ಯದ ಜನತೆ ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದರು.
ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುವುದೇ ನಿಮ್ಮ ಸಾಧನೆಯಾಗಿಬಿಟ್ಟಿದೆ. ರೈತರ ನೆರವಿಗೆ ಬರಲು ನಿಮ್ಮ ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಒತ್ತಾಯಿಸಿದರು.

ಇಷ್ಟು ವಿಳಂಬ ಬಳಿಕ ₹105 ಕೋಟಿ ಬಿಡುಗಡೆ
ಕಳೆದ ವರ್ಷ ಜೂನ್ ನಲ್ಲಿ ಮುಂಗಾರು ಮಳೆ ಕೈಕೊಟ್ಟಾಗ ಶುರುವಾದ ಬರಕ್ಕೆ 7 ತಿಂಗಳು ಕಾಲ ಕೊಡಲೋ ಬೇಡವೋ ಎಂದು ಮೀನ-ಮೇಷ ಎಣಿಸಿ ಕಡೆಗೆ 'ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ' ಕೇವಲ ₹105 ಕೋಟಿ ಬಿಡುಗಡೆ ಮಾಡಿದೆ ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ.
ನಾನು ಕಂದಾಯ ಸಚಿವನಾಗಿದ್ದಾಗ 2022 ನೇ ಸಾಲಿನಲ್ಲಿ 13,09,421 ಹೆಕ್ಟೇರ್ ಕೃಷಿ ಜಮೀನಿನಲ್ಲಿ ಬೆಳೆ ಹಾನಿಯಾಗಿತ್ತು. ಆಗ 14.62 ಲಕ್ಷಕ್ಕೂ ಹೆಚ್ಚು ರೈತರಿಗೆ 2031.15 ಕೋಟಿ ರೂಪಾಯಿ ನೀಡಲಾಯಿತು.
ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ 6,800 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6,800 ರೂ. ಸೇರಿಸಿ, ಒಟ್ಟು 13,600 ರೂ. ನೀಡಲಾಯಿತು. ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 13,500 ರೂ. ಮಾರ್ಗಸೂಚಿ ದರವಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ 11,500 ರೂ. ಸೇರಿಸಿ ಒಟ್ಟು 25,000 ರೂ. ನೀಡಲಾಯಿತು. ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ 10,000 ರೂ. ಸೇರಿಸಿ ಒಟ್ಟು 28,000 ರೂ. ನೀಡಲಾಗಿತ್ತು.
ಆದರೆ ಇಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನವರ ಸರ್ಕಾರ ಕೇವಲ ₹105 ಕೋಟಿ ನೀಡಿ ರೈತರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದರು.












Click it and Unblock the Notifications