B. Sriramulu: ಬಿ. ಶ್ರೀರಾಮುಲುಗೆ ಬಂತು ಕರೆ, ಕುತೂಹಲ ಮೂಡಿಸಿದ ನಡೆ
ಬೆಂಗಳೂರು, ಜನವರಿ 23: ಕರ್ನಾಟಕ ಬಿಜೆಪಿ ಘಟಕ ಹಲವು ಕಾರಣಕ್ಕೆ ಸುದ್ದಿಯಲ್ಲಿದೆ. ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ ಮಾಜಿ ಸಚಿವ ಬಿ. ಶ್ರೀರಾಮುಲು ಸುದ್ದಿಯಲ್ಲಿದ್ದಾರೆ. ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ನಡುವಿನ ಜಟಾಪಟಿ ರಾಜ್ಯ ರಾಜಕೀಯದ ಗಮನ ಸೆಳೆದಿದೆ. ಬಿಜೆಪಿ ಬಿಡುವ ಕುರಿತು ಶ್ರೀರಾಮುಲು ಮಾತನ್ನಾಡಿದ್ದಾರೆ ಎಂಬುದು ಸದ್ಯದ ಸುದ್ದಿ.
ಗುರುವಾರ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸುವ ಮೂಲಕ ರಾಜ್ಯ ರಾಜಕೀಯದ ಗಮನ ಸೆಳೆದರು. ಬಳ್ಳಾರಿಯ ಕುಚಿಕು ಗೆಳೆಯರ ವಾಕ್ಸಮರ ಈಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಳಿಕ ಬಳ್ಳಾರಿಯಲ್ಲಿ ಏನಾಗುತ್ತಿದೆ? ಎಂಬ ಸುದ್ದಿ ಹಬ್ಬಿದೆ.

ಬಿ. ಶ್ರೀರಾಮುಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಜೊತೆ ಕೋರ್ ಕಮಿಟಿ ಸಭೆಯಲ್ಲಿಯೇ ಅಸಮಾಧಾನ ಹೊರಹಾಕಿದ್ದಾರೆ ಎಂಬುದು ಚರ್ಚೆಯ ವಿಷಯವಾಗಿದೆ.
ಜೆ. ಪಿ. ನಡ್ಡಾ ಕರೆ: ಮಾಜಿ ಸಚಿವ ಬಿ. ಶ್ರೀರಾಮುಲು ಬಿಜೆಪಿ ಬಿಡುವ ಮಾತನಾಡಿದ್ದಾರೆ. ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿಗೆ ಕೌಂಟರ್ ನೀಡಲು ಅವರು ಬಳ್ಳಾರಿಯಲ್ಲಿ ಗುರುವಾರ ಶ್ರೀರಾಮುಲು ಮಾಧ್ಯಮಗಳ ಜೊತೆ ಮಾತನಾಡಿದರು. ಬಳಿಕ ಸ್ಥಳೀಯ ನಾಯಕರ ಜೊತೆ ಸಭೆಯನ್ನು ನಡೆಸಿದರು.
ಬಿ. ಶ್ರೀರಾಮುಲು ಬಿಜೆಪಿ ಬಿಡುವ ಬಗ್ಗೆ ಆಡಿದ ಮಾತು ಹೈಕಮಾಂಡ್ ನಾಯಕರ ಕಿವಿಗೆ ಬಿದ್ದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬಿ. ಶ್ರೀರಾಮುಲುಗೆ ಕರೆ ಮಾಡಿ ಮಾತನಾಡಿದ್ದಾರೆ. ದೆಹಲಿಗೆ ಬರುವಂತೆ ಸೂಚನೆಯನ್ನು ನೀಡಿದ್ದಾರೆ.
ಜೆ. ಪಿ. ನಡ್ಡಾ ಕರೆ ಮಾಡಿದಾಗ ಬಿ. ಶ್ರೀರಾಮುಲು ರಾಧಾಮೋಹನ್ ದಾಸ್ ಅಗರ್ವಾಲ್ ಜೊತೆ ಕೋರ್ ಕಮಿಟಿ ಸಭೆಯಲ್ಲಿಯೇ ಆದ ಅವಮಾನದ ಕುರಿತು ವಿವರಣೆ ನೀಡಿದ್ದಾರೆ. ಆಗ ನಡ್ಡಾ ಅವರು ದೆಹಲಿಯಲ್ಲಿ ಕುಳಿತು ಮಾತನಾಡೋಣ ಬನ್ನಿ ಎಂದು ಆಹ್ವಾನಿಸಿದ್ದಾರೆ. ಇದಕ್ಕೆ ಬಿ. ಶ್ರೀರಾಮುಲು ಸಹ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಆದ್ದರಿಂದ ಮಾಜಿ ಸಚಿವ ಬಿ. ಶ್ರೀರಾಮುಲು ವಿಚಾರ ಈಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ದೂರವಾಣಿ ಕರೆಯಲ್ಲಿ ಬಿ. ಶ್ರೀರಾಮುಲು ವಿವರಣೆ ಕೇಳಿದ ಜೆ. ಪಿ. ನಡ್ಡಾ ಅವರು ದೆಹಲಿಗೆ ಬರುವಂತೆ ಹೇಳಿದ್ದಾರೆ. ಶ್ರೀರಾಮುಲು ಯಾವಾಗ ದೆಹಲಿಗೆ ಭೇಟಿ ನೀಡಲಿದ್ದಾರೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಬಿ. ಶ್ರೀರಾಮುಲು ಸಿಡಿದೆದ್ದಿದ್ದಾರೆ. ಬಳ್ಳಾರಿ ರಾಜಕೀಯವನ್ನು ಹತೋಟಿಗೆ ಪಡೆಯುವ ವಿಚಾರದಲ್ಲಿ ಬಿ. ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ವಿರುದ್ಧ ಜಟಾಪಟಿ ನಡೆಯುತ್ತಿದೆ ಎಂಬ ಮಾಹಿತಿಯೂ ಇದೆ. ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಬಳಿಕ ಸಂಡೂರು ಉಪ ಚುನಾವಣೆ ನಡೆದಿತ್ತು. ಆದರೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು.












Click it and Unblock the Notifications