ವರುಣಾದಲ್ಲಿ ಸಿದ್ದು ಕಟ್ಟಿ ಹಾಕಲು ಬಿಜೆಪಿ ಪ್ಲಾನ್! ಬಿಜೆಪಿಯ ಹಿರಿಯ ನಾಯಕರನ್ನ ಕಣಕ್ಕಿಳಿಸಲು ವರಿಷ್ಠರು ಸಜ್ಜು! ಯಾರು ಆ ನಾಯಕ?
ಮೈಸೂರು, ಏಪ್ರಿಲ್6: ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನ ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ನಡೆಸಿದೆ.
ಈಗಾಗಲೇ ಹೈಕಮಾಂಡ್ ಸೂಚನೆಯಂತೆ ವರುಣಾ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧೆಗೆ ರೆಡಿಯಾಗಿದ್ದು, ಈ ಬಾರೀ ಶತಾಯಗತಾಯ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ತವರು ನೆಲದಲ್ಲೇ ಹಿಮ್ಮೆಟ್ಟಿಸಬೇಕೆಂದು ಬಿಜೆಪಿ ರಣತಂತ್ರ ರೂಪಿಸಿದೆ.

ಹೈಕಮಾಂಡ್ ನಿರ್ಧಾರಕ್ಕೆ ಒಪ್ಪಿ ಸಿದ್ದರಾಮಯ್ಯ ವರುಣಾದಲ್ಲೇ ಸ್ಪರ್ಧೆ ಗೆ ರೆಡಿಯಾಗಿದ್ರೆ, ಇತ್ತ ಸಿದ್ದರಾಮಯ್ಯ ವಿರುದ್ದ ಮಾಜಿ ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ಅವರನ್ನ ಕಣಕ್ಕಿಳಿಸಲ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿತ್ತು. ಆದರೆ ವಿಜಯೇಂದ್ರ ಸ್ಪರ್ಧೆ ಕುರಿತು ಯಡಿಯೂರಪ್ಪ ಅವರು ಹೈಕಮಾಂಡ್ ನಾಯಕರ ಜೊತೆಗೆ ಮಾತನಾಡಿದ್ದು, ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ವಿಜಯೇಂದ್ರ ಅವರು ವರುಣಾದಲ್ಲಿ ಸ್ಪರ್ಧೆ ನಡೆಸಲ್ಲ ಎಂಬ ಮಾಹಿತಿ ತಿಳಿದಿದ್ದು, ಸಿದ್ದರಾಮಯ್ಯ ವಿರುದ್ದ ಹಿರಿಯ ಲಿಂಗಾಯತ ನಾಯಕನನ್ನ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಸತಿ ಸಚಿವ ವಿ ಸೋಮಣ್ಣ ಅವರ ಹೆಸರನ್ನ ಹೈಕಮಾಂಡ್ ನಾಯಕರಿಗೆ ಶಿಫಾರಸ್ಸು ಮಾಡಿದ್ದು, ಸೋಮಣ್ಣ ಅವರಿಗೆ ಹೈಕಮಾಂಡ್ ನಾಯಕರು ಕರೆ ಮಾಡಿ ಸ್ಪರ್ಧೆಗೆ ರೆಡಿಯಾಗುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಸೋಮಣ್ಣ. ಲಿಂಗಾಯತ ಮಠಗಳ ಜೊತೆಗೆ ಉತ್ತಮ ಒಡನಾಟ ಹೊಂದಿದ್ದು, ಇದೇ ಕಾರಣಕ್ಕೆ ಸಿದ್ದರಾಮಯ್ ವಿರುದ್ದ ಪ್ರಬಲ ಎದುರಾಳಿಯನ್ನ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.
ಈ ಹಿಂದೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಿದ್ದ ಸಿದ್ದರಾಮಯ್ಯ ಅವರು, ಈ ಬಾರೀ ಎರಡು ಕ್ಷೇತ್ರದಲ್ಲಿ ಆಯ್ಕೆ ಮಾಡಿಕೊಳ್ಳಲ್ಲು ಸಾಕಷ್ಟು ಪ್ರಯತ್ನ ನಡೆಸಿದ್ದ, ವರುಣಾ ಕ್ಷೇತ್ರದಿಂದ ಈಗಾಗಲೇ ಹೈಕಮಾಂಡ್ ಟಿಕೆಟ್ ನೀಡಿದೆ. ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಕಟ್ಟಿ ಹಾಕಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಹೀಗಾಗಿ ವರುಣಾದಿಂದ ವಿ ಸೋಮಣ್ಣ ಅವರನ್ನ ಕಣಕ್ಕಿಳಿಸಪಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ವರುಣಾ ಕ್ಷೇತ್ರ ಕಾಂಗ್ರೆಸ್‍ನ ಭದ್ರಕೋಟೆ ಎಂದು ಹೇಳಿದರೂ ಈ ಕ್ಷೇತ್ರದಲ್ಲಿ ಲಿಂಗಾಯಿತ ಸೇರಿದಂತೆ ಬೇರೆ ಬೇರೆ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ರಾಜ್ಯಾದ್ಯಂತ ಸಿದ್ದರಾಮಯ್ಯ ಪ್ರವಾಸ ನಡೆಸದೆ ವರುಣಾ ಕ್ಷೇತ್ರಕ್ಕೆ ಸೀಮಿತಗೊಳಿಸುವ ನಿಟ್ಟಿನಲ್ಲಿ ಲಿಂಗಾಯತ ನಾಯಕರಾದ ಸೋಮಣ್ಣ ಅವರನ್ನ ಅಖಾಡಕ್ಕಿಳಿಸಲು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸಿದೆ.
ಕೇವಲ ವರುಣಾ ಕ್ಷೇತ್ರ ಮಾತ್ರವಲ್ಲದೆ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಲಿಂಗಾಯಿತ ಮತಗಳನ್ನು ಸೆಳೆಯುವುದು ಹಾಗೂ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ತವರು ಜಿಲ್ಲೆಯಲ್ಲಿ ಸೋಲಿನ ರುಚಿ ತೋರಿಸಬೇಕೆಂಬುದು ಬಿಜೆಪಿ ರೂಪಿಸಿರುವ ರಣತಂತ್ರ ಎನ್ನಲಾಗಿದೆ.
ಇನ್ನೂ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಸಚಿವ ವಿ. ಸೋಮಣ್ಣ ಗುರುವಾರ ಹೇಳಿದ್ದು, ಗೋವಿಂದರಾಜನಗರ ಕ್ಷೇತ್ರದಿಂದಲೇ ಸ್ಪರ್ಧೆ ನಡೆಸುತ್ತಾರಾ ಅಥವಾ ವರುಣಾ ದಿಂದ ಸ್ಪರ್ಧೆ ನಡೆಸುತ್ತಾರಾ ಎಂಬ ಬಗ್ಗೆ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ಕುರಿತು ಕೇಶವ ಕೃಪದಲ್ಲಿ ಆರ್ ಎಸ್ ಎಸ್ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications