'ಬಿಜೆಪಿಯವರು ದುಂಡಕ್ಕೆ-ಕೆಂಪಗೆ ಚೆನ್ನಾಗಿರುತ್ತಾರೆ ಆದ್ರೆ...'

'ಬಿಜೆಪಿಯವರು ನೋಡಲು ಚೆನ್ನಾಗಿರುತ್ತಾರೆ. ಕೆಂಪಕೆಂಪಗೆ ಇರುತ್ತಾರೆ. ಆದರೆ, ಧರ್ಮ, ಜಾತಿ ಹೆಸರಲ್ಲಿ ಸಮಾಜವವನ್ನು ಒಡೆಯುತ್ತಾರೆ' ಎಂದು ಸಿಎಂ ಸಿದ್ದು ವಿಷಾದಿಸಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ಸ್ವಕ್ಷೇತ್ರ ವರುಣದ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಅವರು ಮಂಗಳವಾರ ನಂಜನಗೂಡು ತಾಲೂಕು ಬಿಳಿಗೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭ ಮಾತನಾಡುತ್ತಾ ತಮ್ಮ ಅಭಿಪ್ರಾಯವನ್ನು ಹೀಗೆ ಹಂಚಿಕೊಂಡರು.
ಮುಂದುವರಿದು ಮಾತನಾಡಿದ ಅವರು 'ನಾನು ದೇವರನ್ನು ಸಂಪೂರ್ಣವಾಗಿಯೇನೂ ತಿರಸ್ಕರಿಸಿಲ್ಲ. ಹಾಗಂತ ನನಗೆ ಮೌಢ್ಯಗಳ ಬಗ್ಗೆ ನಂಬಿಕೆಯೂ ಇಲ್ಲ. ನಾನು ದೇವಸ್ಥಾನಗಳಿಗೆ ಹೋಗುತ್ತೇನೆ.
ಆದರೆ ಅದನ್ನೇ ಕಸಬು ಮಾಡಿಕೊಂಡಿಲ್ಲ. 1983ರಲ್ಲಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಗೆದ್ದೆ. ಆದರೆ 1989 ಹಾಗೂ 1999ರಲ್ಲಿ ದೇವರ ಪೂಜೆ ಮಾಡಿ, ನಾಮಪತ್ರ ಹಾಕಿ ಸೋತೆ. ಹೀಗಾಗಿ ನನಗೆ ಯಾವುದೇ ಕಾಲದಲ್ಲಿ ನಂಬಿಕೆ ಇಲ್ಲ' ಎಂದು ವಿವರಿಸಿದರು.
ಗೆಲ್ಲಿಸುವವರು, ಸೋಲಿಸುವವರು ಮತದಾರರು. ಶಾಸ್ತ್ರ ಕೇಳಿ, ಪೂಜೆ ಮಾಡಿ ಎಲ್ಲರೂ ನಾಮಪತ್ರ ಹಾಕುತ್ತಾರೆ. ಆದರೆ ಗೆಲ್ಲೋದು ಮಾತ್ರ ಒಬ್ಬರೇ. ಮನೆಯಿಂದ ಹೊರಡುವಾಗ ಯಾವ ದಿಕ್ಕಿನಲ್ಲಿ ಹೋಗಬೇಕು. ವಿಧಾನಸೌಧಕ್ಕೆ ಯಾವ ಸಮಯದಲ್ಲಿ ಹೋಗಬೇಕು ಎಂದು ಕೇಳುವ ರಾಜಕಾರಣಿಗಳು ಇದ್ದಾರೆ.
ಕೆಲವರು ನನ್ನನ್ನು ಚಾಮರಾಜನಗರಕ್ಕೆ ಹೋಗಬೇಡಿ ಅಂದ್ರು. ಅಲ್ಲೇನಾದರೂ ಗುಮ್ಮ ಇದೆಯೇ. ಮೈಸೂರಿಗೆ, ಬೆಂಗಳೂರಿಗೆ, ಬೆಳಗಾವಿಗೆ ಹೋದಂತೆ ಚಾಮರಾಜನಗರಕ್ಕೂ ಹೋಗಿದ್ದೇನೆ. ಇದರಲ್ಲಿ ವಿಶೇಷ ಏನೂ ಇಲ್ಲ ಎಂದು ಅವರು ಹೇಳಿದರು.












Click it and Unblock the Notifications