ವರುಣಾ ಕ್ಷೇತ್ರದಲ್ಲಿ ನಟ ಶಿವರಾಜ್ ಕುಮಾರ್ ಪ್ರಚಾರಕ್ಕೆ ಬಿಜೆಪಿ ಭಾರೀ ವಿರೋಧ: ಪ್ರತಾಪ್ ಸಿಂಹ, ವಿ.ಸೋಮಣ್ಣ ಅಸಮಾಧಾನ
ಮೈಸೂರು, ಮೇ 04: ಮೈಸೂರು ಜಿಲ್ಲೆಯ ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಸ್ಯಾಂಡಲ್‌ವುಡ್ ಸ್ಟಾರ್ ದೊಡ್ಡಮನೆಯ ದೊಡ್ಮಗ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಬಗ್ಗೆ ಬಿಜೆಪಿ ವಲಯದಲ್ಲಿ ಅಮಸಮಾಧಾನ, ವಿರೋಧ ಕೇಳಿ ಬಂದಿದೆ.
ಗುರುವಾರ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಮತಯಾಚಿಸಿ ಡಾ.ಶಿವರಾಜ್ ಕುಮಾರ್ ಅವರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. 'ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ್ದು ವಿ.ಸೋಮಣ್ಣ, ಅವರನ್ನು ಮನಮೆಚ್ಚಿ ಶ್ಲಾಘಿಸಿದ್ದು ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ... ಅವರವ ಭಾವ ಭಕುತಿಗೆ...' ಎಂದು ಟ್ವೀಟ್ ಪೋಸ್ಟ್ ಮಾಡಿ ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಡಾ.ರಾಜಕುಮಾರ್ ಅವರ ಕುಟುಂಬವನ್ನು ರಾಜಕೀಯ ಹೊರತಾಗಿ ನಾವು ನೋಡುತ್ತೇವೆ. ಡಾ.ರಾಜ್ ಅವರು ರಾಜಕೀಯ ಸೋಂಕನ್ನು ಅಂಟಿಸಿಕೊಂಡವರಲ್ಲ. ದಿವಂಗತ ಡಾ.ಪುನೀತ್ ರಾಜಕುಮಾರ್ ಹೆಸರಿನಲ್ಲಿ ಸದ್ಯ ವರುಣಾ ಕ್ಷೇತ್ರ ಅಭ್ಯರ್ಥಿಯಾಗಿರುವ ಬಿಜೆಪಿಯ ವಿ.ಸೋಮಣ್ಣ ಅವರು ಆಸ್ಪತ್ರೆ ಕಟ್ಟಿದ್ದರು. ಆದರೆ ಇಂದು ಒಬ್ಬರ ವ್ಯಕ್ತಿಪರವಾಗಿ ಶಿವಣ್ಣ ಅವರು ಪ್ರಚಾರಕ್ಕಿಳಿದಿರುವುದು ಸರಿಯಲ್ಲ ಎಂದು ಪ್ರತಾಪ್ ಸಿಂಹ ಅವರು ಟಿವಿ ನೈನ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ!
— Pratap Simha (@mepratap) May 4, 2023
ಅವರವ ಭಾವ ಭಕುತಿಗೆ... pic.twitter.com/AwsuZHzmHA
ಇತ್ತ ವರುಣಾ ಕಣದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಸಹ ಕಾಂಗ್ರೆಸ್‌ನ ಸಿದ್ದರಾಮಯ್ಯ ಪರ ನಟ ಶಿವರಾಜ್ ಕುಮಾರ್ ಅವರು ಮತಯಾಚನೆ ಮಾಡಿದ್ದಕ್ಕೆ ಅಸಮಾಧಾನ ತೋಡಿಕೊಂಡಿದ್ದಾರೆ.
ವಿ.ಸೋಮಣ್ಣ ಅಸಮಾಧಾನ: ಸಿದ್ದು ವಿರುದ್ಧ ಕಿಡಿ
ಒಂದು ಕಡೆ ಸಿದ್ದರಾಮಯ್ಯ ಪರ ವರುಣಾದಲ್ಲಿ ಭರ್ಜರಿ ಪ್ರಚಾರ ಆರಂಭವಾಗುತ್ತಿದ್ದಂತೆ, ಇತ್ತ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದೆ. ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಒಂದೇ ದಿನ ಪ್ರಚಾರಕ್ಕೆ ಬರುತ್ತೇನೆ ಎಂದ ಸಿದ್ದರಾಮಯ್ಯ ಈಗ ಮತ್ತೆ ಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ಸೋಲಿನ ಕಾಣುತ್ತಿದೆ ಎಂದನಿಸುತ್ತದೆ. ಅದಕ್ಕೆ ಅವರು ಜನರನ್ನು ಸೇರಿಸಲು ಚಿತ್ರರಂಗದವರನ್ನು ಕರೆತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನಗೂ ಡಾ.ರಾಜ್ ಕುಟುಂಬಕ್ಕೂ ದಶಕಗಳ ನಂಟಿದೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ದೊಡ್ಡ ಆಸ್ಪತ್ರೆ ಕಟ್ಟಿಸಿದ್ದೇನೆ. ದುನಿಯಾ ವಿಜಯ್ ಮತ್ತು ರಮ್ಯಾ ಅವರಿಗೆ ಈ ಬಗ್ಗೆ ಗೊತ್ತಿಲ್ಲದಿರಬಹುದು ಆದರೆ ನಟ ಶಿವಣ್ಣ ಯಾಕೆ ಹೀಗೆ ಮಾಡಿದ್ದಾರೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೋಳಿ ಕೂಗಿದರೆ ಮಾತ್ರ ಬೆಳಕು ಹರಿಯುತ್ತದೆ ಎಂಬ ಹೇಳಿಕೆ ತಿರುಗೇಟು ನೀಡಿರುವ ವಿ.ಸೋಮಣ್ಣ ಅವರು, ಸಿದ್ದರಾಮಯ್ಯನವರು ಮನಸ್ಸು ಮಾಡಿದ್ದರೆ ವರುಣ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗುತ್ತಿತ್ತು. ಈವರೆಗೆ ವರುಣ ಕ್ಷೇತ್ರದಲ್ಲಿ ಒಂದು ಕಾಲೇಜು, ಆಸ್ಪತ್ರೆ ಇಲ್ಲ, ಸರಿಯಾದ ರಸ್ತೆಗಳಿಲ್ಲ. ಬಾದಾಮಿಯಲ್ಲೂ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಲಿಲ್ಲ ಎಂದು ಅವರು ತಿರುಗೇಟು ನೀಡಿದರು.












Click it and Unblock the Notifications