ಬಿ.ಎಲ್. ಸಂತೋಷ್ ಆಡಿದ 'ಆ ಮಾತು' ಮಹತ್ವದ ರಾಜಕೀಯ ಬದಲಾವಣೆಯ ಎಚ್ಚರಿಕೆ?
ಪ್ರತೀ ಬಾರಿ ಮುಖ್ಯಮಂತ್ರಿಗಳು ದೆಹಲಿಗೆ ಹೊರಟಾಗ ಸಚಿವ ಸ್ಥಾನದ ಆಕಾಂಕ್ಷಿಗಳು ಧುತ್ತೆಂದು ಎದ್ದು ಕೂರುತ್ತಾರೆ. ಇಂತಹ ಯಾವುದೇ ಬೆಳವಣಿಗೆಗಳಿಗೆ ವರಿಷ್ಠರು ಸೊಪ್ಪು ಹಾಕದೇ ಇದ್ದಾಗ ಮತ್ತದೇ ಬೇಸರದ ಮಾತು. ಕೆಲವು ತಿಂಗಳಿನಿಂದ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವುದು ಇಷ್ಟೇ..
ಈಗ, ಮತ್ತೆ ಈ ಆಕಾಂಕ್ಷಿಗಳು ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಯಾಕೆಂದರೆ, ಸದ್ಯದ ಮಟ್ಟಿಗೆ ಬಿಜೆಪಿಯಲ್ಲಿ ಡಿಷಿಸನ್ ಮೇಕರ್ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಪ್ರವಾಸಕ್ಕೆ ಬರುತ್ತಿರುವುದು. ಅಮಿತ್ ಶಾ ಇಲ್ಲಿಗೆ ಬಂದಾಗ, ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅದಕ್ಕೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಧ್ವನಿಗೂಡಿಸಿದ್ದಾರೆ ಕೂಡಾ..
ಚುನಾವಣಾ ವರ್ಷವಾಗಿರುವುದರಿಂದ ಅಮಿತ್ ಶಾ ಅಳೆದು ತೂಗಿ ನಿರ್ಧರಿಸಬೇಕಾಗಿರುವುದು ಸ್ವಾಭಾವಿಕ. ಹಾಗಾಗಿಯೇ, ರಾಜ್ಯ ಬಿಜೆಪಿಯ ದೊಡ್ಡ ನಾಯಕರು ವರದಿಯನ್ನು ಕೊಟ್ಟರೂ, ತಮ್ಮದೇ ಮೂಲಗಳಿಂದ ಅಮಿತ್ ಶಾ ವರದಿಯನ್ನು ತರಿಸಿಕೊಳ್ಳುತ್ತಾರೆ. ಜೊತೆಗೆ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮಾತಿಗೆ ಹೆಚ್ಚಿನ ತೂಕ ಕೂಡಾ ಇದೆ ಎನ್ನುವುದು ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಇದರಿಂದಾಗಿ, ಸಂತೋಷ್ ಆಡುವ ಮಾತಿಗೆ ಹೆಚ್ಚಿನ ಮನ್ನಣೆಯೂ ಇದೆ, ಬೆಲೆಯೂ ಇದೆ. ಮೈಸೂರಿನಲ್ಲಿ ಸಂತೋಷ್ ಆಡಿರುವ ಮಾತು, ಅಮಿತ್ ಶಾ ರಾಜ್ಯ ಪ್ರವಾಸಕ್ಕೆ ಬರುತ್ತಿರುವುದು ಒಂದಕ್ಕೊಂದು ತಾಳೆಯಾಗುತ್ತಾ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅವರು ಆಡಿರುವ ಮಾತು ವರಿಷ್ಠರ ಮುಂದಿನ ರಾಜಕೀಯ ನಡೆಯಾಗುವ ಸಾಧ್ಯತೆಯಿದೆಯಾ ಎಂದು ಪ್ರಶ್ನಿಸುವಂತಾಗಿದೆ.

ದೆಹಲಿಯ ಹಿರಿಯ ಮುಖಂಡರ ಹಲವು ಬಾರಿ ಸ್ಪಷ್ಟನೆ
ಬಿಜೆಪಿಯ ಉಸ್ತುವಾರಿ ಮತ್ತು ದೆಹಲಿಯ ಹಿರಿಯ ಮುಖಂಡರು ಹಲವು ಬಾರಿ ಸ್ಪಷ್ಟನೆಯನ್ನು ನೀಡಿದ್ದರೂ, ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಕೆಳಗಿಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಲೇ ಇದೆ. ಇದೇ ರೀತಿ, ಸಂಪುಟ ವಿಸ್ತರಣೆಯ ವಿಚಾರದಲ್ಲಂತೂ ಲೆಕ್ಕವಿಲ್ಲದಷ್ಟು ಅಂತೆಕಂತೆ ಕಥೆಗಳು ಹುಟ್ಟತ್ತಲೇ ಇದೆ. ಈಗ, ಅಮಿತ್ ಶಾ ಆಗಮಿಸುತ್ತಿರುವುದರಿಂದ, ಏನೇನೋ ರಾಜಕೀಯ ಸಮೀಕರಣ, ಬಿಜೆಪಿ ಪಡಶಾಲೆಯಲ್ಲಿ ಮತ್ತು ಕಾರ್ಯಕರ್ತರ ವಲಯದಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕ ಎನ್ನುವಂತಿದೆ ಬಿ.ಎಲ್.ಸಂತೋಷ್ ಆಡಿದ ಮಾತು.

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್
"ಗುಜರಾತ್ ನಲ್ಲಿ ನಾವು ಮಾಡಿದ ಪ್ರಯೋಗ ಯಶಸ್ಸನ್ನು ಪಡೆಯಿತು, ಹೊಸ ಮುಖಗಳನ್ನು ಪರಿಚಯಿಸಿದ್ದರಿಂದಲೇ ಅಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಅಲ್ಲಿ ಕುಟುಂಬ ರಾಜಕಾರಣವನ್ನು ಹೊರಗಿಟ್ಟು ಚುನಾವಣೆಯನ್ನು ನಡೆಸಿದ್ದೇವೆ, ದೆಹಲಿ ಮತ್ತು ಗುಜರಾತ್ ಪಾಲಿಕೆ ಚುನಾವಣೆಯಲ್ಲೂ ಇದೇ ನಿಯಮವನ್ನು ಪಾಲಿಸಲಾಯಿತು. ಇದು ಪಕ್ಷದ ದೃಷ್ಟಿಕೋನದಿಂದ ಸರಿಯಾಗಿ ವರ್ಕೌಟ್ ಆಗಿದೆ" ಇದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೈಸೂರಿನಲ್ಲಿ ಆಡಿದ ಮಾತು.

ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ
"ಎರಡು ಬಾರಿ ಗೆದ್ದವರನ್ನು ನಿವೃತ್ತಿ ಮಾಡಿದ್ದೇವೆ, ಹೊಸ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ. ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿಯಾಗಿದೆ. ಬಿಜೆಪಿಯಲ್ಲಿ ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ನಡೆಸುತ್ತೇವೆ. ಕಾಲ ಕಾಲಕ್ಕೆ ತಕ್ಕಂತೆ ಸಮಾಜದ ಬದಲಾವಣೆಗೆ ಸ್ಪಂದಿಸಿ ಪರಿಷ್ಕರಣೆಯಾಗದಿದ್ದಲ್ಲಿ ಅಂತಹ ಪಕ್ಷ ನಾಶವಾಗಲಿದೆ, ಬದಲಾವಣೆಗೆ ತಕ್ಕಂತೆ ಬಿಜೆಪಿ ಬದಲಾಗುತ್ತದೆ" ಎಂದು ಸಂತೋಷ್ ಹೇಳಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿಲ್ಲದಿಲ್ಲ
ಸಂತೋಷ್ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿಲ್ಲದಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಈ ರೀತಿ ಹೇಳಿಕೆ ನೀಡಿರುವುದು, ಅದೂ ಅಮಿತ್ ಶಾ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಇವರ ಹೇಳಿಕೆ ಭಾರೀ ಕುತೂಹಲ ಹುಟ್ಟಿಸಿದೆ. ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ನಾಯಕತ್ವದಲ್ಲಿ ಮತ್ತು ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆಯಾ ಎನ್ನುವುದನ್ನು ಅರಿತುಕೊಳ್ಳಲು ಹೆಚ್ಚಿನ ಸಮಯದ ಅವಶ್ಯಕತೆಯಿಲ್ಲ.












Click it and Unblock the Notifications