'ಶೋಭಾ ಕರಂದ್ಲಾಜೆ ಚಿಕನ್-ಮಟನ್ ಶಾಪ್': ಫ್ಯಾನ್ ಅಂಗಡಿ ಫುಲ್ ವೈರಲ್
ಬೆಂಗಳೂರು, ಅಕ್ಟೋಬರ್ 17: ಇಷ್ಟದ ಸಿನಿಮಾ ತಾರೆಯರ ಹೆಸರಿನಲ್ಲಿ ಮಳಿಗೆ ತೆರೆಯುವುದನ್ನು ನೋಡಿದ್ದೇವೆ. ಇಲ್ಲೊಬ್ಬ ಅಭಿಮಾನಿ ಸಂಸದೇ ಶೋಭಾ ಕರಂದ್ಲಾಜೆ ಅವರ ಹೆಸರಿನಲ್ಲಿ ಮಾಂಸದ ಅಂಗಡಿ ತೆರೆಯುವ ಮೂಲಕ ಅಭಿಮಾನ ಮೆರೆದಿದ್ದಾರೆ ಅಷ್ಟೇ ಅಲ್ಲದೇ, ಅವರ ಹೆಸರು, ಭಾವಚಿತ್ರವನ್ನು ಅಭಿಮಾನಿ ಟ್ಯಾಟೋ ಹಾಕಿಸಿಕೊಂಡಿದ್ದಾರೆ.
ಹೌದು, ಇತ್ತೀಚೆಗಷ್ಟೇ ಈ ಮಾಂಸದಂಗಡಿ ತೆರೆದಿರುವ ಕೊಪ್ಪಳ ಜಿಲ್ಲೆಯ ಕುಕನೂರಿನ ವ್ಯಾಪಾರಿ ಖಾದರಿ ಬಾಬಣ್ಣ ಕಲಾಲ ಎಂಬುವವರು ಸಂಸದೆ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಸ್ಥಳೀಯ ನಿವಾಸಿಯಾದ ಇವರು ಚಿಕನ್ ಮಟನ್ ಅಂಗಡಿಗೆ ಶೋಭಾ ಕರಂದ್ಲಾಜೆ ಅವರ ಹೆಸರಿಟ್ಟು ಗಮನ ಸೆಳೆಯುತ್ತಿದ್ದಾರೆ. ಅಂಗಡಿಯ ಫೋಟೋ ಸಖರ್ ವೈರಲ್ ಆಗುತ್ತಿದೆ.

ವ್ಯಾಪಾರಿ ಕಲಾಲ ಅವರು ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರ ಅಭಿಮಾನಿಯಾಗಿದ್ದಾರೆ. 2008ರಲ್ಲಿ ಕೊಪ್ಪಳ್ಳಕ್ಕೆ ಚುನಾವಣಾ ಪ್ರಚಾರಕ್ಕಾಗಿ ಶೋಭಾ ಕರಂದ್ಲಾಜೆ ಅವರು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಅವರ ರಾಜಕೀಯ ಭಾಷಣ ಕೇಳಿದ್ದ ವ್ಯಾಪಾರಿ ಅಂದಿನಿಂದ ಅವರ ಅಭಿಮಾನಿಯಾಗಿದ್ದಾರೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಇದೇ ವ್ಯಾಪಾರಿ ಕಳೆದ ಐದು ವರ್ಷಗಳ ಹಿಂದೆ ತನ್ನ ಕೈ ಮೇಲೆ ಶೋಭಾ ಕರಂದ್ಲಾಜೆ ಅವರು ಫೋಟೋವನ್ನು ಟ್ಯಾಟೋ ಆಗಿ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದರು. ಇದೀಗ ಹೊಸ ಅಂಗಡಿ ತೆರದಿದ್ದು, ಅದಕ್ಕೆ ಅವರ ಹೆಸರೇ ಇಟ್ಟಿರುವುದು ವಿಶೇಷವಾಗಿದೆ. ಅವರ ಅಂಗಡಿಯ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ವ್ಯಾಪಾರಿ ಖುಷಿ ಹಂಚಿಕೊಂಡಿದ್ದಾರೆ.

ಸಂಸದೆಯ ಭೇಟಿಗೆ ಅವಕಾಶ ಸಿಕ್ಕಿತ್ತು
ಈ ಹಿಂದೆ ಮಾಜಿ ಸಚಿವರೊಬ್ಬರ ಮನೆಗೆ ಅವರು ಭೇಟಿ ನೀಡಿದ್ದ ವೇಳೆ ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಅವರ ರಾಜಕೀಯ ಭಾಷಣ ನನಗೆ ಇಷ್ಟ. ಅವರ ಅಭಿಮಾನಿಯಾದ ನಾನು ನನ್ನಂಗಡಿಗೆ ಶೋಭಾ ಕರಂದ್ಲಾಜೆ ಎಂದು ಹೆಸರಿಟ್ಟಿದ್ದೇನೆ ಎಂದು ವ್ಯಾಪಾರಿ ಹರ್ಷ ವ್ಯಕ್ತಪಡಿಸಿದ್ದಾರೆ.
ನಟಿ, ನಟರಂತೆ ಅಭಿಮಾನಿಗಳು ರಾಜಕೀಯ ವ್ಯಕ್ತಿಗಳ ಮೇಲೆ ಅಪಾರ ಅಭಿಮಾನ ಹೊಂದುವುದು, ಅವರ ಹೆಸರು, ಫೋಟೋ ಮೈಮೇಲೆ ಅಚ್ಚೆ ಹಾಕಿಸಿಕೊಳ್ಳುವುದು ಹೊಸತೇನಲ್ಲ. ರಾಜಕೀಯ ನಾಯಕರ ಅಭಿಮಾನಿಗಳು ಕರ್ನಾಟಕದಲ್ಲಿ ತಕ್ಕ ಮಟ್ಟಿಗೆ ಕಡಿಮೆ ಎನ್ನಬಹುದು. ನೆರೆಯ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ರಾಜಕಾರಣಿಗಳಿಗೆ ಅಭಿಮಾನಿಗಳು ಪ್ರಮಾಣ ಹೆಚ್ಚು ಎನ್ನಬಹುದು.












Click it and Unblock the Notifications