ವಿದ್ಯಾರ್ಥಿಗಳಿಂದ ಟಾಯ್ಲೆಟ್ ಕ್ಲೀನ್; ಶಾಕಿಂಗ್ ಹೇಳಿಕೆ ಕೊಟ್ಟ ಸಂಸದ
ಕಲಿಕೆಗೆಂದು ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ ಎನ್ನುವ ಆರೋಪವಿದೆ. ಕೆಲ ಶಿಕ್ಷಕರ ವಿರುದ್ಧ ಈ ವಿಚಾರವಾಗಿ ಪೋಷಕರು ಆಕ್ರೋಶ ಹೊರಹಾಕಿದ್ದೂ ಉಂಟು. ಇದು ಚರ್ಚೆಗೂ ಗ್ರಾಸವಾಗಿದ್ದು, ಶಾಲಾ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸವುದು ಸರಿನಾ? ತಪ್ಪಾ? ಎಂದೆಲ್ಲ ವಾದ ನಡೆಯುತ್ತಿಲೇ ಇದೆ.
ಕೆಲವರು ವಿದ್ಯಾರ್ಥಿಗಳ ಕೈಯಲ್ಲಿ ಈ ರೀತಿ ಮಾಡಿಸಿದರೆ, ಶಿಸ್ತು ಕಲಿತುಕೊಳ್ಳುತ್ತಾರೆ ಎಂದು ಮಾತನಾಡಿದರೆ, ಇನ್ನು ಕೆಲವರು ಶಿಸ್ತು ಕಲಿಸಲು ಟಾಯ್ಲೆಟ್ ತೊಳೆಸಬೇಕಿಲ್ಲ ಎಂದು ವಿರೋಧ ಮಾಡುವವರೂ ಇದ್ದಾರೆ. ಮಕ್ಕಳು ಶಾಲೆಗಳಿಗೆ ಬರುವುದು ಶಿಕ್ಷಣ ಪಡೆಯಲೇ ಹೊರತು, ಚಾಕರಿ ಮಾಡಲು ಅಲ್ಲ ಎಂದು ದೂರುವವರನ್ನೂ ನೋಡಿದ್ದೇವೆ.

ಈಗ ಇದೇ ವಿಚಾರವಾಗಿ ಬಿಜೆಪಿ ಸಂಸದರೊಬ್ಬರು ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳು ಶಾಲೆಗಳಲ್ಲಿ ಟಾಯ್ಲೆಟ್ ತೊಳೆದರೆ ತಪ್ಪೇನಿದೆ? ಜಪಾನ್‌ನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನ ವಿದ್ಯಾರ್ಥಿ ಜೀವನದಲ್ಲಿ ನನ್ನ ವಸತಿ ನಿಲಯವನ್ನು ನಾನೇ ಗುಡಿಸಿ, ಸ್ವಚ್ಛಗೊಳಿಸುತ್ತಿದ್ದೆ ಎಂದು ನೆನೆದಿದ್ದಾರೆ. ಇತ್ತೀಚೆಗೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವೀಡಿಯೊಗಳನ್ನು ನಾನು ನೋಡಿದ್ದೇನೆ. ಅವರ ವಿರುದ್ಧ ಕ್ರಮ ಕೂಡ ಕೈಗೊಳ್ಳಲಾಗುತ್ತಿದೆ ಎಂದೂ ಹೇಳಿದ್ದಾರೆ.

ಶಾಲಾ ವಿದ್ಯಾರ್ಥಿಗಳ ಕೈಗೆ ಪೊರಕೆ ನೀಡುವುದು ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದ ʼಸ್ವಚ್ಛತೆಯ ಕೆಲಸ ಕೀಳುʼ ಎಂಬ ಭಾವನೆಯೂ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ. ಹಾಗಾಗಿ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಕೂಡ ಅವಶ್ಯಕʼ ಎಂದೂ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಹಿಂದೆ ಶಿವಮೊಗ್ಗದಲ್ಲಿ ಶಾಲಾ ಮುಖ್ಯ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಕೈಯಲ್ಲಿ ಶೌಚಾಲಯವನ್ನು ಸ್ವಚ್ಚಗೊಳಿಸಿದ ಘಟನೆ ನಡೆದಿತ್ತು. ಈ ಅಮಾನವೀಯ ಘಟನೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೂಡ ನಡೆದಿತ್ತು. ಇದು ವ್ಯಾಪಕ ಜನಾಕ್ರೋಶಕ್ಕೂ ಕಾರಣವಾಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಶಾಲಾ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಚಗೊಳಿಸಲಾಗಿತ್ತು. ಭದ್ರಾವತಿ ತಾಲೂಕಿನ ಕೋಮಾರನಹಳ್ಳಿ ಗ್ರಾ.ಪಂಚಾಯಿತಿಯ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶಂಕರಪ್ಪ ಹಾಗೂ ಇತರೆ ಶಿಕ್ಷಕರು ವಿದ್ಯಾರ್ಥಿಗಳ ಕೈಯಲ್ಲಿ ಶೌಚಾಲಯ ಸ್ವಚ್ಚಗೊಳಿಸಿದ್ದರು ಎಂದು ವರದಿಯಾಗಿತ್ತು.
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಚಗೊಳಿಸಲಾಗಿತ್ತು. ಆಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಟಾಯ್ಲೆಟ್ ಕ್ಲೀನಿಂಗ್ ಮಾಡಿಸಲಾಗಿತ್ತು. ಪೋಷಕರಿಗೆ ವಿಷಯ ಗೊತ್ತಾಗಿ, ಶಾಲೆಯ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಪೋಷಕರು ಅಸಮಾಧಾನಗೊಂಡು ಶಾಲೆಯ ಮುಂದೆ ಜಮಾಯಿಸಿ ಈ ಬಗ್ಗೆ ದೂರು ಕೂಡ ನೀಡಿದ್ದರು.












Click it and Unblock the Notifications