ಮಂಡ್ಯ ದಾಂಧಲೆ: ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಸರ್ಕಾರ ರಚನೆ ತುರ್ತು ಅಗತ್ಯ ಎಂದ ಸಿ.ಟಿ ರವಿ
ಮಂಡ್ಯ, ಸೆಪ್ಟೆಂಬರ್ 12: ಮಂಡ್ಯದ ನಾಗಮಂಗಲ ಬದರಿಕೊಪ್ಪಲಿದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಯುವಕರ ಗುಂಪೊಂದು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿರುವ ನಿನ್ನೆ (ಸೆಪ್ಟೆಂಬರ್ 11) ಬುಧವಾರ ರಾತ್ರಿ ನಡೆದಿದೆ. ಅದ್ಧೂರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಬಂದ ವೇಳೆ ಕೆಲವು ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿನ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ.
ಕಲ್ಲು ತೂರಾಟ ಆರಂಭವಾಗುತ್ತಿದ್ದಂತೆ ಹಿಂದೂ-ಮುಸ್ಲಿಂ ಯುವಕರ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇನ್ನು ಈ ವೇಳೆ ಕೆಲವು ಕಿಡಿಗೇಡಿಗಳು ಲಾಂಗು, ತಲ್ವಾರ್‌ಗಳನ್ನು ಪ್ರದರ್ಶಿಸಿದ್ದಲ್ಲದೇ ರಸ್ತೆಯಲ್ಲೇ ಬರುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಕೂಡಲೇ ಪೊಲೀಸರು ಪುಂಡರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಲಭೆ ಪ್ರಕರಣ ಸಂಬಂಧಿಸಿದಂತೆ 50 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಮುನ್ನೆಚ್ಚರಿಕೆ ಕ್ರಮವಾಗಿ ಸೆಪ್ಟೆಂಬರ್ 14ರವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರಲಾಗಿದೆ. ಜೊತೆಗೆ ನಾಗಮಂಗಲದಾದ್ಯಂತ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಬ್ಬದ ಆಚರಣೆ ವೇಳೆ ಈ ರೀತಿಯ ಕಿಡಿಗೇಡಿ ಕೃತ್ಯ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ವಿಶ್ವ ಹಿಂದೂ ಪರಿಷತ್ ಸಂಘಟನೆ ಕಾರ್ಯಕರ್ತರು ಇಂದು ನಾಗಮಂಗಲ ಬಂದ್‌ಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಬಿಜೆಪಿ ಎಮ್‌ಎಲ್‌ಸಿ ಸಿ.ಟಿ ರವಿ ಪ್ರತಿಕ್ರಿಯಿಸಿದ್ದು, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ರಾಜ್ಯದಾದ್ಯಂತ ಮತಾಂಧರ ಅಟ್ಟಹಾಸ ಮಿತಿಮೀರಿದೆ. ಮತಾಂಧತೆಯ ಗುಮ್ಮ ಅವರ ನೆತ್ತಿಗೆ ಏರಿ ಹಿಂದೂಗಳು ಪ್ರತಿನಿತ್ಯ ನೋವನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
'ಇಂದು ಕಲ್ಲು ಭಯೋತ್ಪಾದಕರಿಂದ ವಿಘ್ನ ವಿನಾಶಕನ ಮೂರ್ತಿಯ ಮೇಲೆ ಕಲ್ಲು ತೂರಾಟ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ಮಚ್ಚು-ಲಾಂಗ್ ಹಿಡಿದುಕೊಂಡು ವಿನಾಯಕನ ಗಣೇಶನ ಮೇಲೆ ಕಲ್ಲು ತೂರಾಟ ನಡೆಸಿದ ಪುಂಡರ ಆಟಾಟೋಪಕ್ಕೆ ಹಲವರು ಗಾಯಾಳುಗಳಾಗಿದ್ದಾರೆ. ಇದಕ್ಕೆಲ್ಲ ಮದ್ದು ಅರೆಯಬೇಕಾದರೆ ರಾಜ್ಯದಲ್ಲೂ ಉತ್ತರಪ್ರದೇಶದ ಮಾದರಿಯ ಸರ್ಕಾರ ರಚನೆಯಾಗುವುದು ಇಂದಿನ ತುರ್ತು ಅಗತ್ಯ' ಎಂದು ಆಗ್ರಹಿಸಿದ್ದಾರೆ.












Click it and Unblock the Notifications