BJP ಶಾಸಕ ಸುರೇಶ್ ಗೌಡ ಪುತ್ರಿಯಿಂದ ಮಹಿಳಾ PSIಗೆ ಕಪಾಳಮೋಕ್ಷ; ದೇವಸ್ಥಾನದಲ್ಲಿ ಹೈಡ್ರಾಮಾ!
ಮಂಡ್ಯ: ಶ್ರೀರಂಗಪಟ್ಟಣದ ದೇವಸ್ಥಾನವೊಂದರಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದು ಬೆದರಿಕೆ ಹಾಕಿದ ಆರೋಪ ಕೇಳಿಬಂದಿರುವ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಅವರ ವಿಡಿಯೋ ಇದೀಗ ತಡವಾಗಿ ಬಹಿರಂಗವಾಗಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಹಾಗೂ ಮಹಿಳಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸವಿತಾ ಬಿ. ಪಾಟೀಲ್ ಅವರ ನಡುವೆ ನಡೆದಿದ್ದ ಘರ್ಷಣೆಯ ದೃಶ್ಯಗಳು ಘಟನೆ ನಡೆದ ಕೆಲವು ದಿನಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದರ್ಶನದ ಸರದಿ ವಿಚಾರಕ್ಕೆ ವಾಗ್ವಾದ
ಶ್ರೀರಂಗಪಟ್ಟಣದ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಅವರು ದರ್ಶನಕ್ಕೆ ಸರದಿಯಲ್ಲಿ ನಿಲ್ಲುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಐಶ್ವರ್ಯ ಅವರೊಂದಿಗೆ ವಾಗ್ವಾದ ನಡೆದಿದೆ. ವಿಡಿಯೋದಲ್ಲಿ ಐಶ್ವರ್ಯ ಅವರು ಪಿಎಸ್‌ಐ ಸವಿತಾ ಅವರೊಂದಿಗೆ ತೀವ್ರವಾಗಿ ವಾಗ್ವಾದ ನಡೆಸುತ್ತಿರುವುದು ಕಂಡುಬರುತ್ತದೆ. ಒಂದು ಹಂತದಲ್ಲಿ ಅವರು ಯಾರಿಗೋ ಫೋನ್ ಕರೆ ಮಾಡುತ್ತಿರುವ ದೃಶ್ಯವೂ ಸೆರೆಯಾಗಿದೆ. ವಾಗ್ವಾದದ ವೇಳೆ ಐಶ್ವರ್ಯ ಅವರು ಮಹಿಳಾ ಪೊಲೀಸ್ ಅಧಿಕಾರಿಗೆ ಕಪಾಳಕ್ಕೆ ಹೊಡೆದು ಬೆದರಿಕೆ ಹಾಕಿದ್ದಾರೆ.
ಘಟನೆಯ ಕುರಿತು ಮಹಿಳಾ ಪೊಲೀಸ್ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವಸ್ಥಾನದಲ್ಲಿ ಭಕ್ತರು ದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದ ವೇಳೆ, ಮಹಿಳಾ ಪೊಲೀಸ್ ಅಧಿಕಾರಿ ಸವಿತಾ ಅವರು ಐಶ್ವರ್ಯ ಅವರಿಗೆ ಸರದಿಯಲ್ಲಿ ನಿಂತು ದರ್ಶನ ಪಡೆಯುವಂತೆ ಸೂಚಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದ ತೀವ್ರಗೊಂಡ ಬಳಿಕ ಐಶ್ವರ್ಯ ಅವರು ಸವಿತಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ದೃಶ್ಯಗಳು ದೇವಸ್ಥಾನದ ಆವರಣದಲ್ಲಿದ್ದವರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಆಗಸ್ಟ್ 12ರಂದು ರಾತ್ರಿ ಸುಮಾರು 8.15ರ ವೇಳೆಗೆ ಭೀಮನ ಅಮಾವಾಸ್ಯೆ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ದೇವಿಯ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದ ಐಶ್ವರ್ಯ ಅವರು ತಕ್ಷಣ ಗರ್ಭಗುಡಿಗೆ ಪ್ರವೇಶಿಸಲು ಅವಕಾಶ ನೀಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ವಾಗ್ವಾದದ ಬಳಿಕ ಪರಸ್ಪರ ಕಪಾಳಮೋಕ್ಷ
ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಐಶ್ವರ್ಯ ಹಾಗೂ ಮಹಿಳಾ ಎಸ್‌ಐ ಸವಿತಾ ಬಿ. ಪಾಟೀಲ್ ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವುದು ಕಂಡುಬರುತ್ತದೆ. ವಾಗ್ವಾದ ಮುಂದುವರಿದಂತೆ ಐಶ್ವರ್ಯ ಅವರು ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಮಹಿಳಾ ಎಸ್‌ಐ ಕೂಡ ಐಶ್ವರ್ಯ ಅವರಿಗೆ ಹೊಡೆದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಸ್ಥಳದಲ್ಲಿದ್ದ ಇತರರು ಮಧ್ಯಪ್ರವೇಶಿಸಿ ಇಬ್ಬರನ್ನೂ ದೂರ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು
ಮಂಡ್ಯ ಮಹಿಳಾ ಪೊಲೀಸ್ ಠಾಣೆಗೆ ಸಂಬಂಧಿಸಿದ ಸಬ್‌ಇನ್‌ಸ್ಪೆಕ್ಟರ್ ಸವಿತಾ ಪಾಟೀಲ್ ಅವರು ಘಟನೆ ಕುರಿತು ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಐಶ್ವರ್ಯ ಅವರು ತಮ್ಮನ್ನು ಅವಾಚ್ಯವಾಗಿ ನಿಂದಿಸಿ, ಕಪಾಳಮೋಕ್ಷ ಮಾಡಿ, ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಐಶ್ವರ್ಯ ಅವರು ಪ್ರತಿದೂರು ನೀಡಲು ಮುಂದಾಗಿದ್ದರೂ ಪೊಲೀಸರು ಅದನ್ನು ಸ್ವೀಕರಿಸಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಶಾಸಕ ಸುರೇಶ್ ಗೌಡ ಕ್ಷಮೆಯಾಚನೆ
ಘಟನೆ ಕುರಿತು ಶಾಸಕ ಬಿ. ಸುರೇಶ್ ಗೌಡ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ತಮ್ಮ ಪುತ್ರಿಗೆ ಗರ್ಭಗುಡಿಗೆ ಪ್ರವೇಶಿಸಲು ಅವಕಾಶ ನೀಡದಿರುವುದರಿಂದ ವಿವಾದ ಆರಂಭವಾಯಿತು ಎಂದು ಅವರು ಹೇಳಿದ್ದಾರೆ. ತಮ್ಮ ಪುತ್ರಿ ದೇವಸ್ಥಾನದ ಗರ್ಭಗುಡಿಗೆ ಹೋಗಲು ಮನವಿ ಮಾಡಿದ್ದಳು. ಆದರೆ ಪೊಲೀಸರು ಅವಕಾಶ ನೀಡಲಿಲ್ಲ, ಅದೇ ವೇಳೆ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಒಳಗೆ ಹೋಗಲು ಅವಕಾಶ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಈ ವೇಳೆ ಪೊಲೀಸ್ ಅಧಿಕಾರಿ ತಮ್ಮ ಪುತ್ರಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಿರುವ ಶಾಸಕ, "ನನ್ನ ಮಗಳು ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋವನ್ನು ನಾನು ನೋಡಿಲ್ಲ. ಈ ಘಟನೆಗೆ ನಾನು ಕ್ಷಮೆಯಾಚಿಸುತ್ತೇನೆ, ನನಗೆ ವಿಷಾದವಿದೆ ಎಂದು ಹೇಳಿದ್ದಾರೆ.


Click it and Unblock the Notifications
