ಸಿದ್ದರಾಮಯ್ಯಗೆ ಉತ್ತರ ಕೊಡುವ ಪರಿಸ್ಥಿತಿ ತಂದಿಟ್ಟ ಬಿಜೆಪಿ ಶಾಸಕ
ಸಾಮಾನ್ಯವಾಗಿ, ಸದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇದ್ದಾರೆಂದರೆ ಅವರನ್ನು ಮಾತಿನಲ್ಲಾಗಲಿ, ಅಂಕಿಅಂಶದ ವಿಚಾರದಲ್ಲಾಗಲಿ ಕಟ್ಟಿ ಹಾಕುವುದು ಕಷ್ಟ. ಸಿದ್ರಾಮಣ್ಣ ಮಾತನಾಡುತ್ತಾರೆ ಅಂದರೆ ಆಡಳಿತ ಪಕ್ಷದವರೂ ಸದನದಲ್ಲಿ ಹಾಜರಿರುವುದು ಗೊತ್ತಿರುವ ವಿಚಾರ.
ಹಾಲೀ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಬರೀ ಸಿದ್ದರಾಮಯ್ಯನವರ ಭಾಷಣಕ್ಕೆ ಮಾತ್ರವಲ್ಲದೇ, ಕಾಂಗ್ರೆಸ್ ನಾಯಕರ ಮಾತಿನ ಚಾಟಿಗೆ ಸಮರ್ಥವಾಗಿ ಉತ್ತರಿಸಿಕೊಂಡು ಬಂದು, ಕೆಲವೊಮ್ಮೆ ವಿರೋಧ ಪಕ್ಷದವರನ್ನು ಮುಜುಗರಕ್ಕೆ ದೂಡುತ್ತಿರುವವರು ಎಂದರೆ ಕುಡುಚಿ ಶಾಸಕ ಪಿ.ರಾಜೀವ್.
ಎರಡು ದಿನಗಳ ಕೆಳಗೆ ನಾನು ಸಿದ್ದರಾಮಯ್ಯನವರ ಅಭಿಮಾನಿ ಎಂದು ಅವರ ಧ್ವನಿಯನ್ನೇ ಅನುಕರಣೆ ಮಾಡಿದ್ದ ರಾಜೀವ್ ಅವರನ್ನು ಸುಮ್ನೆ ಕೂತ್ಕೊಳ್ಳಯ್ಯಾ ಎಂದು ಸಿದ್ದರಾಮಯ್ಯ ಗದರಿಸಿದ್ದರು. ಆದರೂ, ರಾಜೀವ್ ಅವರ ವಾಕ್ ಝರಿ ಮುಂದುವರಿಯುತ್ತಲೇ ಇತ್ತು.
ಅಧಿವೇಶನದ ಮಂಗಳವಾರದ (ಮಾರ್ಚ್ 15) ದಿನ, ರಾಜೀವ್ ಮತ್ತು ಸಿದ್ದರಾಮಯ್ಯನವರ ಮಾತಿನ ಚಕಮಕಿಗೆ ಕಾಂಗ್ರೆಸ್ಸಿನವರೇ ಸುಸ್ತು ಹೊಡೆದಿದ್ದಾರೆ. ಗೃಹ ನಿರ್ಮಾಣ ಸಂಬಂಧದ ಚರ್ಚೆಯ ವೇಳೆ, ಸದನದ ಹೊರಗೆ ಸಿದ್ದರಾಮಯ್ಯನವರು ಉತ್ತರ ನೀಡುವ ಪರಿಸ್ಥಿತಿಯನ್ನು ರಾಜೀವ್ ತಂದಿಟ್ಟಿದ್ದಾರೆ.

ಕಾಂಗ್ರೆಸ್ಸಿಗರನ್ನು ಹಲವು ಬಾರಿ ಇಕ್ಕಟ್ಟಿಗೆ ಸಿಲುಕಿಸಿರುವ ಕುಡುಚಿ ಶಾಸಕ ಪಿ.ರಾಜೀವ್
ಸಿದ್ದರಾಮಯ್ಯನವರನ್ನೂ ಸೇರಿದಂತೆ ಕಾಂಗ್ರೆಸ್ಸಿಗರನ್ನು ಹಲವು ಬಾರಿ ಇಕ್ಕಟ್ಟಿಗೆ ಸಿಲುಕಿಸಿರುವ ಬೆಳಗಾವಿ ಜಿಲ್ಲೆ ಕುಡುಚಿಯ ಶಾಸಕ ಪಿ.ರಾಜೀವ್, ಪ್ರಸಕ್ತ ಅಧಿವೇಶನದಲ್ಲೂ ಚಾಣಾಕ್ಷತನದಿಂದ ಸರಕಾರವನ್ನು ಸಮರ್ಥಿಸಿಕೊಳ್ಳುತಿದ್ದಾರೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಅದರಲ್ಲಿ ಒಂದು ವಸತಿ ಇಲಾಖೆಗೆ ಸಂಬಂಧಿಸಿದ ಚರ್ಚೆ. "ಸಿದ್ದರಾಮಯ್ಯನವರು ಬಿಜೆಪಿಯವರ ವಿರುದ್ದ ಅಂಕಿಅಂಶ ತಪ್ಪು ಹೇಳಿ ಆರೋಪ ಹೊರಿಸುತ್ತಿದ್ದರು. ನಮ್ಮದು ಡಬ್ಬಾ ಸರಕಾರವಲ್ಲ, ಡಬಲ್ ಗುಂಡಿಗೆ ಸರಕಾರ"ಎಂದು ಸಿದ್ದರಾಮಯ್ಯನವರ ಕಾಲೆಳೆದಿದ್ದರು. ಅಂಕಿಅಂಶ ತಪ್ಪು ಎಂದು ರಾಜೀವ್ ಹೇಳಿದ್ದರಿಂದ, ಸಿದ್ದರಾಮಯ್ಯನವರು ಇದಕ್ಕೆ ಉತ್ತರವನ್ನು ನೀಡಿದ್ದಾರೆ.
|
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ರಾಜೀವ್‌ಗೆ ಉತ್ತರ
"ನಾನು ನಮ್ಮ ಸರಕಾರದ ಅವಧಿಯಲ್ಲಿ ಹದಿನೈದು ಲಕ್ಷ ಮನೆಯನ್ನು ಕಟ್ಟಿಸಿದ್ದೆವು, ಅದಕ್ಕೆ ಮೀಸಲಿಟ್ಟ ಹಣವನ್ನೂ ಬಿಡುಗಡೆ ಮಾಡಿದ್ದೇವೆ. ನಮ್ಮ ಸರ್ಕಾರ ನಿರ್ಮಿಸಿದ್ದ ಮನೆಗಳ ಲೆಕ್ಕ ಸುಳ್ಳು ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಇಂದು ಸದನದಲ್ಲಿ ಸವಾಲು ಹಾಕಿದ್ದರು. ನಮ್ಮ ಸರ್ಕಾರ ಕಟ್ಟಿದ ಮನೆಗಳ ಲೆಕ್ಕ ಇಲ್ಲಿದೆ. ಇದು ರಾಜ್ಯ ಸರ್ಕಾರದ ಮಾಹಿತಿ. ನಾವು ನುಡಿದಂತೆ ನಡೆದವರು, @BJP4Karnataka ನಾಯಕರಂತೆ ಸುಳ್ಳಿನ ರಾಜರಲ್ಲ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ರಾಜೀವ್‌ಗೆ ಉತ್ತರವನ್ನು ಕೊಟ್ಟಿದ್ದಾರೆ.

ವಿಧಾನಮಂಡಲದ ಅಧಿವೇಶನದ ವೇಳೆಯೂ ಇದನ್ನು ಗಮನಿಸಬಹುದಾಗಿದೆ
2014ರಿಂದ ಈಚೆಗೆ ಹಿರಿಯ ಮುಖಂಡರ ಜೊತೆಗೆ ಪಕ್ಷದ ಯುವ ಮತ್ತು ಮಧ್ಯಮ ವಯಸ್ಸಿನ ಜನಪ್ರತಿನಿಧಿಗಳು ಸಾಕಷ್ಟು ಬಿಜೆಪಿ ವೇದಿಕೆಯನ್ನು ಆವರಿಸುತ್ತಿರುವುದಕ್ಕೆ ಹತ್ತು ಹಲವಾರು ನಿದರ್ಶನಗಳಿವೆ. ಹಾಲೀ, ವಿಧಾನಮಂಡಲದ ಅಧಿವೇಶನದ ವೇಳೆಯೂ ಇದನ್ನು ಗಮನಿಸಬಹುದಾಗಿದೆ. ಅಧಿಕೃತವಾಗಿ ಐದು ವರ್ಷದ ಹಿಂದೆಯಷ್ಟೇ ಬಿಜೆಪಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರೂ, ಪಕ್ಷವನ್ನು ಅದು ಕೇಂದ್ರ ಸರಕಾರವಾಗಿರಲಿ ಅಥವಾ ರಾಜ್ಯ ಸರಕಾರವಾಗಿರಲಿ ರಾಜೀವ್ ಸಮರ್ಥಿಸಿಕೊಳ್ಳುವ ರೀತಿಗೆ ವಿರೋಧ ಪಕ್ಷದವರೂ ಸುಸ್ತಾಗಿದ್ದುಂಟು.

ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರ ಭಾಷಣ ಎಂದರೆ ನನಗಿಷ್ಟ
ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರ ಭಾಷಣ ಎಂದರೆ ನನಗಿಷ್ಟ ಎಂದು ವಿರೋಧ ಪಕ್ಷದವರನ್ನು ಒಂದು ಕಡೆ ಹೊಗಳುವ ರಾಜೀವ್, ಇನ್ನೊಂದು ಕಡೆ ಅವರನ್ನು ಮಾತಿನಲ್ಲಿ ಕಟ್ಟಿಹಾಕುವ ಕೆಲಸವನ್ನೂ ಬಹಳಷ್ಟು ಬಾರಿ ಮಾಡಿದ್ದಾರೆ. 2013ರ ಅಸೆಂಬ್ಲಿ ಚುನಾವಣೆಯಲ್ಲಿ ಬಡವರ ರೈತರ ಶ್ರಮಿಕರ ಸಂಘದ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು, 2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಗೆದ್ದು ಸತತವಾಗಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ರಾಜೀವ್ ಮಾತಿನ ಶೈಲಿಗೆ, ರಾಜ್ಯ ಬಿಜೆಪಿಗೆ ಮತ್ತೋರ್ವ ವಾಕ್ಪಟು ಸಿಕ್ಕಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.











Click it and Unblock the Notifications