Gold smuggling case: ರನ್ಯಾ ರಾವ್ ಕೇಸ್: ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್ ದಾಖಲು
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಪ್ರಭಾವಿ ಸಚಿವರ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಆ ಪ್ರಭಾವಿಗಳ ಹೆಸರನ್ನು ಸದನದಲ್ಲೇ ಬಹಿರಂಗಪಡಿಸುತ್ತೇನೆ ಎಂದು ತೊಡೆ ತಟ್ಟಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೇ ಇದೀಗ ಕೇಸ್ ದಾಖಲಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಶಾಸಕ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರನ್ಯಾ ರಾವ್ ಅವರ ವಿಚಾರವಾಗಿ ಇತ್ತೀಚೆಗೆ ಯತ್ನಾಳ್ ನೀಡಿದ್ದ ಹೇಳಿಕೆಗಳೇ ಅವರಿಗೆ ಆಪತ್ತು ತಂದಿದೆ.
ಇತ್ತೀಚೆಗೆ ಮಾಧ್ಯಮಗಳ ಮುಂದೆ ಈ ಕೇಸ್ ವಿಚಾರವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದರು. ಈ ವೇಳೆ ರನ್ಯಾ ರಾವ್ ಬಗ್ಗೆ ತೀಕ್ಷ್ಣವಾಗಿ ಮಾತನಾಡಿದ್ದರು. "ರನ್ಯಾ ದೇಹದೆಲ್ಲೆಡೆ ಚಿನ್ನ ಹೊಂದಿದ್ದಳು. ರಂಧ್ರ ಇರುವ ಕಡೆಯೆಲ್ಲ ಚಿನ್ನ ಬಚ್ಚಿಟ್ಟಿದ್ದಳು" ಎಂದು ಯತ್ನಾಳ್ ಹೇಳಿದ್ದರು ಎಂದು ಆರೋಪಿಸಲಾಗಿದೆ. ಈ ರೀತಿ ನಟಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರನ್ಯಾ ಅವರ ಆಪ್ತರು ಪೊಲೀಸರಿಗೆ ದೂರು ನೀಡಿದ್ದಾರೆ.

ಯತ್ನಾಳ್ ಅವರು ರನ್ಯಾ ರಾವ್ ಅವರ ಬಗ್ಗೆ ಅವಾಚ್ಯ ಪದ ಬಳಸಿದ್ದಾರೆ. ಈ ಮೂಲಕ ನಟಿಯ ತೇಜೋವಧೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆ ಯತ್ನಾಳ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 79ರಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ರನ್ಯಾ ರಾವ್ ಕೇಸ್ ವಿಚಾರವಾಗಿ ಮಾತನಾಡಿದ ಬೆನ್ನಲ್ಲೇ ಅವರ ಮೇಲೂ ಕೇಸ್ ಬಿದ್ದಿದೆ.
ರನ್ಯಾ ರಾವ್ ಕೇಸ್‌ನಲ್ಲಿ ಇಬ್ಬರು ಪ್ರಭಾವಿ ಸಚಿವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಇದು ರಾಜಕೀಯ ಗುದ್ದಾಟಕ್ಕೂ ಕಾರಣವಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ರನ್ಯಾ ರಾವ್ ಜೊತೆ ನಂಟು ಹೊಂದಿರುವ ಸಚಿವರು ಯಾರೆಂದು ಗೊತ್ತಿದೆ ಎಂದು ಬಾಂಬ್ ಸಿಡಿಸಿದ್ದರು.

ಈ ಕೇಸ್‌ನಲ್ಲಿ ರಾಜಕಾರಣಿಗಳ ಪಾತ್ರದ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಈ ಬಗ್ಗೆ ಸದನದಲ್ಲೇ ಸುಧೀರ್ಘವಾಗಿ ಮಾತನಾಡುತ್ತೇನೆ. ರನ್ಯಾ ರಾವ್ ಜೊತೆ ಯಾವ ಸಚಿವರು ಸಂಪರ್ಕದಲ್ಲಿದ್ದರು ಎಂಬುದು ಕೂಡ ಗೊತ್ತಿದೆ. ಈ ಬಗ್ಗೆ ಮಾಧ್ಯಮಗಳ ಮುಂದೆ ನಾನು ಮಾತನಾಡಲ್ಲ, ಆದರೆ ಸದನದಲ್ಲೇ ಆ ರಾಜಕಾರಣಿಗಳ ಹೆಸರನ್ನು ಬಹಿರಂಗಪಡಿಸುತ್ತೇನೆ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದರು.
ರನ್ಯಾ ರಾವ್ ಜೊತೆಗೆ ಸಂಪರ್ಕದಲ್ಲಿರೋ ಇಬ್ಬರು ಸಚಿವರು ಯಾರೆಂದು ಗೊತ್ತಿದೆ. ಆ ಹೆಸರುಗಳನ್ನು ಸದನದಲ್ಲೇ ಬಹಿರಂಗಪಡಿಸುತ್ತೇನೆ. ಇದನ್ನು ಇಲ್ಲೆಲ್ಲ ಹೇಳಲ್ಲ, ಯಾಕಂದ್ರೆ ಇದು ಸದನದ ರಹಸ್ಯ. ರನ್ಯಾ ರಾವ್‌ಗೆ ಪ್ರೋಟೋಕಾಲ್ ಕೊಟ್ಟಿದ್ದು ಯಾರೆಂದು ಗೊತ್ತಿದೆ. ನಾವು ಈಗಾಗಲೇ ಈ ಮಾಹಿತಿ ಸಂಗ್ರಹಿಸಿದ್ದೇವೆ. ಆ ಚಿನ್ನವನ್ನು ಎಲ್ಲಿಂದ ತಂದರು? ಎಲ್ಲಿಟ್ಟಿದ್ದರು? ಎಂಬುದೂ ಗೊತ್ತು ಯತ್ನಾಳ್ ಹೇಳಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕರು ಕೂಡ ಯತ್ನಾಳ್‌ಗೆ ಸವಾಲ್ ಹಾಕಿ ಸಚಿವರ ಹೆಸರು ಬಹಿರಂಗಪಡಿಸುವಂತೆ ಹೇಳಿದ್ದರು.












Click it and Unblock the Notifications