ಸಚಿವ ಸ್ಥಾನಕ್ಕೆ ರಾಜೀನಾಮೆ: ಅಡ್ಡಗೋಡೆ ಮೇಲೆ ದೀಪ ಇಟ್ಟ ಸಿ.ಟಿ ರವಿ
ಬೆಂಗಳೂರು, ಆಗಸ್ಟ್ 27: ತಮಗೆ ಮಹತ್ವದ ಖಾತೆ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ನೀಡದ ಕಾರಣಕ್ಕೆ ಬೇಸರಗೊಂಡು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನಕ್ಕೆ ಆಯ್ಕೆಯಾದ ದಿನವೇ ಸಿ.ಟಿ. ರವಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿರುವ ಸಿ.ಟಿ ರವಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ತಮ್ಮ ಸ್ಥಾನವನ್ನು ಸಚಿವಗಿರಿ ಸಿಗದೆ ಅಸಮಾಧಾನ ಹೊಂದಿರುವ ಶಾಸಕರು ಮತ್ತು ಇತರೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನೀಡಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಸಿ. ಟಿ. ರವಿ ರಾಜೀನಾಮೆ?; ಸರ್ಕಾರಿ ಕಾರು ವಾಪಸ್!
ಪಕ್ಷದ ಮೇಲೆ ಸಿ.ಟಿ. ರವಿ ಸಿಟ್ಟಿಗೆದ್ದಿದ್ದಾರೆ. ಪಕ್ಷವನ್ನೂ ಬಿಡಲು ಅವರು ಸಿದ್ಧರಾಗಿದ್ದಾರೆ ಎಂಬ ವದಂತಿಗಳು ಕೂಡ ಹರಡಿವೆ. ಅವರು ಈ ವಿಚಾರದ ಬಗ್ಗೆ ತಡರಾತ್ರಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ತಮ್ಮ ಪಕ್ಷ ನಿಷ್ಠೆ ಎಂದಿಗೂ ಬದಲಾಗುವುದಿಲ್ಲ. ತಾವು ಅಸಮಾಧಾನಿತ ಅಲ್ಲ. ಹಾಗೆಂದು ಸ್ವಾಭಿಮಾನಕ್ಕೆ ಧಕ್ಕೆ ಆದಾಗ ಸಹಿಸಿಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸತತ ಟ್ವೀಟ್‌ಗಳನ್ನು ಮಾಡಿರುವ ಅವರು ಎಲ್ಲಿಯೂ ತಾವು ರಾಜೀನಾಮೆ ನೀಡಿದ್ದರ ಕುರಿತು ಮಾಹಿತಿ ನೀಡಿಲ್ಲ. ಅಲ್ಲದೆ, ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸುದ್ದಿಯನ್ನು ಕೂಡ ಅಲ್ಲಗಳೆದಿಲ್ಲ. ಆದರೆ, ಅವರ ಟ್ವೀಟ್‌ಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿರುವುದು ಸ್ಪಷ್ಟವಾಗಿದೆ.

ಇದ್ದರೂ ಬಿಜೆಪಿ, ಸತ್ತರೂ ಬಿಜೆಪಿ
'ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಬಿಜೆಪಿ, ಸತ್ತರೂ ಬಿಜೆಪಿ. ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ ನಿಷ್ಠೆಯನ್ನು ಮೀರುವ ದಿನ ಬಂದರೆ ಅದು ನನ್ನ ಜೀವನದ ಕೊನೆಯ ದಿನ' ಎಂದು ಸಿ.ಟಿ. ರವಿ ತಮ್ಮ ಪಕ್ಷ ನಿಷ್ಠೆಯನ್ನು ಹೇಳಿಕೊಂಡಿದ್ದಾರೆ.

ಪಕ್ಷ ಅನೇಕ ಹುದ್ದೆಗಳನ್ನು ನೀಡಿದೆ
'1988ರಲ್ಲಿ ಒಂದು ಬೂತ್ ಕಮಿಟಿ ಅಧ್ಯಕ್ಷನಾಗಿದ್ದ ನನಗೆ ಭಾರತೀಯ ಜನತಾ ಪಕ್ಷ ಅದೆಷ್ಟು ಹುದ್ದೆ ನೀಡಿದೆ. ನನ್ನ ಕುಟುಂಬದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಯಾರು ಇರಲಿಲ್ಲ. ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದೆ ಬಿಜೆಪಿ' ಎಂದು ಪಕ್ಷವು ತಮಗೆ ಮಹತ್ವದ ಗೌರವ ಹಾಗೂ ಸ್ಥಾನಮಾನಗಳನ್ನು ನೀಡಿದೆ ಎಂದು ಸ್ಮರಿಸಿದ್ದಾರೆ.
ವಿಶ್ವಾಸದ ಮೈತ್ರಿ ಅಲ್ಲ, ಸಂಚಿನ ಕೂಟ; ಸಿ.ಟಿ.ರವಿ ವ್ಯಂಗ್ಯ

ಸ್ವಾಭಿಮಾನಕ್ಕೆ ಧಕ್ಕೆ ಆದರೆ...
'ನಾನು ಯಾರ ಮುಂದೆಯೂ ಮಂತ್ರಿಸ್ಥಾನವನ್ನೇ ಕೇಳಿರಲಿಲ್ಲ. ಇನ್ನು ಖಾತೆಯ ಬಗ್ಗೆ ಯಾಕೆ ಕೇಳಲಿ?' ಎಂದು ಒಂದು ಸಾಲಿನ ಟ್ವೀಟ್ ಮಾಡಿದ್ದಾರೆ.
'ನಾನು ಅಸಾಮಾಧಾನಿತನು ಅಲ್ಲ ಬಂಡಾಯಗಾರನೂ ಅಲ್ಲ. ನನ್ನ ನಿಷ್ಠೆ ಕೇವಲ ಬಿಜೆಪಿಗೆ. ಆದರೆ ನಾನು ಸಿದ್ದಾಂತ ನಿಷ್ಠ ಸ್ವಾಭಿಮಾನಿ. ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನನ್ನೊಳಗಿನ ಹೋರಾಟಗಾರ ಎದ್ದು ನಿಲ್ಲುತ್ತಾನೆ. ನಾನೇನು ಮಾಡಲಿ, ನಾನು ಜನರ ನಡುವಿನಿಂದ ಬೆಳೆದು ಬಂದ ಹೋರಾಟಗಾರ' ಎಂದು ಪರೋಕ್ಷವಾಗಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂಬ ಅಸಾಮಾಧಾನವನ್ನು ಹಂಚಿಕೊಂಡಿದ್ದಾರೆ.

ಅವಕಾಶವಾದಿ ರಾಜಕಾರಣ ಮಾಡಿಲ್ಲ
'ಕೆಲವು ನ್ಯೂಸ್ ಚಾನೆಲ್ ಗಳು ನನ್ನ ಪಕ್ಷನಿಷ್ಠೆ ಬಗ್ಗೆಯೇ ಸಂಶಯ ಪಡುತ್ತಿವೆ. ಅಯ್ಯೋ ಪಾಪ. ಅಧಿಕಾರಕ್ಕಾಗಿ ಮಂಡಿಯೂರುವವನೂ ಅಲ್ಲ. ಜನ ಪ್ರೀತಿಗಳಿಸಲು ಅಧಿಕಾರವೇ ಬೇಕೆಂದು ಇಲ್ಲ.
ನನ್ನ ಕಡೆ ಸಂಶಯದ ಬೆಟ್ಟು ತೋರಿಸುವವರೇ, ನಾನು ಎಂದೂ ಅವಕಾಶವಾದ ರಾಜಕಾರಣ ಮಾಡಿಲ್ಲ ಮತ್ತು ಅಧಿಕಾರದಲ್ಲಿ ಇರುವವರನ್ನು ಓಲೈಸಿಕೊಂಡು ಲಾಭಗಳಿಸುವ ರಾಜಕಾರಣವನ್ನು ಮಾಡಿಲ್ಲ' ಎಂದು ತಾವು ಅಧಿಕಾರಕ್ಕಾಗಿ ಆಸೆ ಪಡುವ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾರ್ಯಕರ್ತನ ಸಂಭ್ರಮದಲ್ಲಿ ಭಾಗಿಯಾಗೋಣ
'ನಾಳೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್ ಕುಮಾರ್ ಕಟೀಲ್
ಅವರು ಜವಾಬ್ದಾರಿ ಸ್ವೀಕರಿಸುತ್ತಿದ್ದಾರೆ. ನಾನು ಅಲ್ಲಿಗೆ ಬರುತ್ತೇನೆ. ನೀವೂ ಬನ್ನಿ, ಒಬ್ಬ ಕಾರ್ಯಕರ್ತನ ಸಂಭ್ರಮದಲ್ಲಿ ನಾವು ಭಾಗಿಯಾಗೋಣ' ಎಂದು ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಾಗಿದೆ ಎಂಬ ವರದಿಗಳಿಗೆ ಉತ್ತರವಾಗಿ ಹೇಳಿಕೆ ನೀಡಿದ್ದಾರೆ.