ಬಿಜೆಪಿ ಪ್ರಣಾಳಿಕೆ; ಮಲೆನಾಡು ಕರ್ನಾಟಕಕ್ಕೆ ಭರವಸೆಗಳು
ಬೆಂಗಳೂರು, ಮೇ 01; ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಪಕ್ಷ 'ಬಿಜೆಪಿ ಪ್ರಜಾ ಪ್ರಣಾಳಿಕೆ 2023' ಹೆಸರಿನಲ್ಲಿ ಹಲವಾರು ಭರವಸೆಗಳನ್ನು ಜನರಿಗೆ ನೀಡಿದೆ.
ಸೋಮವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ 'ಬಿಜೆಪಿ ಪ್ರಜಾ ಪ್ರಣಾಳಿಕೆ 2023' ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಬಿಜೆಪಿ ಡಾ. ಕೆ. ಸುಧಾಕರ್ ಅಧ್ಯಕ್ಷತೆಯಲ್ಲಿ ಈ ಬಾರಿಯ ಚುನಾವಣೆಗೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ರಚನೆ ಮಾಡಿತ್ತು. ಕೃಷಿ, ಕೈಗಾರಿಕೆ, ಶಿಕ್ಷಣ ಹೀಗೆ ವಿವಿಧ ಕ್ಷೇತ್ರಗಳ ಜೊತೆಗೆ ಪಕ್ಷ ಕರಾವಳಿ ಪ್ರದೇಶ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ ಹೀಗೆ ವಲಯವಾರು ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದೆ.
ಬಿಜೆಪಿ ಪ್ರಣಾಳಿಕೆಯಲ್ಲಿ ಮಲೆನಾಡು ಕರ್ನಾಟಕ ಭಾಗಕ್ಕೆ ಹಲವು ಭರವಸೆಗಳನ್ನು ನೀಡಲಾಗಿದೆ. ಮುಖ್ಯವಾಗಿ ಭಾಗದ ಪ್ರಮುಖ ಬೆಳೆಯಾದ ಅಡಕೆ ಮೇಲೆ ಬಿಜೆಪಿ ಗಮನ ನೀಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ 'ರಾಜ್ಯ ಅಡಕೆ ಮಂಡಳಿ' ರಚನೆ ಮಾಡಲಾಗುತ್ತದೆ ಎಂದು ಬಿಜೆಪಿ ಭರವಸೆ ಕೊಟ್ಟಿದೆ. ಕಾಫಿ ಬೋರ್ಡ್ ಮಾದರಿಯಲ್ಲಿ ಅಡಕೆ ಸಂಶೋಧನಾ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಹೇಳಿದೆ.

ಎರಡು ವಿಮಾನ ನಿಲ್ದಾಣ ನಿರ್ಮಾಣ; ಮಿಷನ್ ಕನೆಕ್ಟ್ ಕರ್ನಾಟಕದ ಅಡಿಯಲ್ಲಿ ಪ್ರಾದೇಶಿಕ ವಾಯುಯಾನ ಸಂಪರ್ಕ ಕಲ್ಪಿಸಲು ಉಡಾನ್ ಯೋಜನೆಯಡಿ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಶೃಂಗೇರಿಯಲ್ಲಿ ಅತ್ಯಾಧುನಿಕ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆದ್ಯತೆಯ ಮೇರೆಗೆ ಸ್ಥಾಪನೆ ಮಾಡುತ್ತೇವೆ ಎಂದು ಬಿಜೆಪಿ ಹೇಳಿದೆ.
ಮಿಷನ್ ಕನೆಕ್ಟ್ ಕರ್ನಾಟಕದ ಅಡಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಶಿವಮೊಗ್ಗ-ಶೃಂಗೇರಿ ಉತ್ತಮ ಚತುಷ್ಪಥ ರಸ್ತೆಯನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.
ಬಿಜೆಪಿ ತನ್ನ 5ನೇ ಭರವಸೆಯಲ್ಲಿ ಶಿವಮೊಗ್ಗದಲ್ಲಿ ಆರ್ಯವೇದ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದೆ.
ಸಾಧನೆಗಳು; ಬಿಜೆಪಿಯ ಪ್ರಣಾಳಿಕೆಯಲ್ಲಿ ಮಲೆನಾಡು ಕರ್ನಾಟಕ ಭಾಗದ ಸಾಧನೆಗಳನ್ನು ಸಹ ವಿವರಿಸಲಾಗಿದೆ. 8 ತಿಂಗಳ ಅಲ್ಪಾವಧಿಯಲ್ಲಿ 220 ಕೋಟಿ ವೆಚ್ಚದಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿದ್ದೇವೆ ಎಂದು ಪಕ್ಷ ಹೇಳಿದೆ.
ಕೊಡಗಿನ ವೀರ ಯೋಧ ಜನರಲ್ ತಿಮ್ಮಯ್ಯ ಅವರ ಸ್ಮರಣಾರ್ಥವಾಗಿ ಕೊಡಗಿನಲ್ಲಿ ಜನರಲ್ ತಿಮ್ಮಯ್ಯ ಮ್ಯುಸಿಯಂ ಸ್ಥಾಪಿಸಿದ್ದೇವೆ ಎಂದು ಪಕ್ಷ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಚಿಕ್ಕಮಗಳೂರು-ಬೇಲೂರು ಮಾರ್ಗ ಸೇರಿದಂತೆ 4 ರೈಲು ಮಾರ್ಗ ಯೋಜನೆಗಳಿಗೆ 960 ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ ಎಂದು ಪಕ್ಷದ ಸಾಧನೆ ತಿಳಿಸಲಾಗಿದೆ.
ಮಾನವ-ಆನೆ ಸಂಘರ್ಷವನ್ನು ತಡೆಯುವ ಉದ್ದೇಶದಿಂದ ತಡೆಬೇಲಿ ನಿರ್ಮಿಸಲು 100 ಕೋಟಿ ಮೀಸಲಿಟ್ಟಿದ್ದೇವೆ. ಚಿಕ್ಕಮಗಳೂರಿನಲ್ಲಿ 325 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದೇವೆ. 994 ಕೋಟಿ ವೆಚ್ಚದಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಪಕ್ಷ ಹೇಳಿದೆ.
4128 ಕೋಟಿ ವೆಚ್ಚದಲ್ಲಿ 92 ಕಿ. ಮೀ. ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ಬಿಜೆಪಿ ತನ್ನ ಸಾಧನೆ ಹೇಳಿಕೊಂಡಿದೆ.












Click it and Unblock the Notifications