ಜನರ ಬಳಿ ಹೊರಟ ಬಿಜೆಪಿ ನಾಯಕರು; 3 ಹಂತದಲ್ಲಿ ರಾಜ್ಯ ಪ್ರವಾಸ
ಬೆಂಗಳೂರು, ಮಾರ್ಚ್ 30; ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಬೆಲೆ ಏರಿಕೆ ಮುಂತಾದ ವಿಚಾರಗಳು ಸದ್ದು ಮಾಡುತ್ತಿವೆ. ಇಂತಹ ಹೊತ್ತಿನಲ್ಲಿಯೇ ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ರಾಜ್ಯದ ಆಡಳಿತ ಪಕ್ಷ ಬಿಜೆಪಿ ಜನರ ಬಳಿಗೆ ಹೋಗಲು ಯೋಜನೆ ರೂಪಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೂರು ತಂಡಗಳಾಗಿ ಸಚಿವರು, ಶಾಸಕರ ಜೊತೆ ಮೂರು ಹಂತದಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಆ ಮೂಲಕ ಪಕ್ಷ ಸಂಘಟನೆ ಚುರುಕುಗೊಳಿಸಲಿದ್ದಾರೆ.
ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದು. ಮುಂದಿನ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡುವುದು ರಾಜ್ಯ ಪ್ರವಾಸದ ಉದ್ದೇಶವಾಗಿದೆ. ಏಪ್ರಿಲ್ ಎರಡನೇ ವಾರದಲ್ಲಿ ಮೊದಲ ಹಂತದ ರಾಜ್ಯ ಪ್ರವಾಸ ಆರಂಭವಾಗಲಿದ್ದು, ಯಡಿಯೂರಪ್ಪ ನೇತೃತ್ವದ ಬಿಜೆಪಿ ನಾಯಕರ ತಂಡ ಜನರ ಬಳಿಗೆ ಹೋಗಲಿದೆ.
ಕರ್ನಾಟಕ ಬಿಜೆಪಿಯ ರಾಜ್ಯ ಕಾರ್ಯಕಾರಣಿ ಸಭೆ ಏಪ್ರಿಲ್ 16 ಮತ್ತು 17ರಂದು ನಡೆಯಲಿದ್ದು ಸಭೆಯಲ್ಲಿ ಪಾಲ್ಗೊಳ್ಳುವ ಕೇಂದ್ರದ ನಾಯಕರು ರಾಜ್ಯ ನಾಯಕರಿಗೆ ಹಲವು ಸೂಚನೆಗಳನ್ನು ನೀಡಲಿದ್ದಾರೆ. ಈ ಸಭೆಯ ಬಳಿಕ ರಾಜ್ಯ ಪ್ರವಾಸದ ಸ್ಪಷ್ಟವಾದ ಮಾರ್ಗ ನಕ್ಷೆ ತಯಾರಾಗಲಿದೆ.

ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಭೇಟಿ
ಮಂಗಳವಾರ ನಳಿನ್ ಕುಮಾರ್ ಕಟೀಲ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ್ದರು. ಸಂಪುಟ ವಿಸ್ತರಣೆ ಬಗ್ಗೆ ನಡೆಯುತ್ತಿರುವ ಚರ್ಚೆ, ರಾಜ್ಯ ಪ್ರವಾಸ, ಗೃಹ ಸಚಿವ ಅಮಿತ್ ಶಾ ಭೇಟಿ, ಬಿಜೆಪಿ ಕಾರ್ಯಕಾರಣಿ ಮುಂತಾದ ವಿಚಾರಗಳ ಕುರಿತು ಚರ್ಚೆಯನ್ನು ನಡೆಸಿದರು.
ಈ ಭೇಟಿಯ ವೇಳೆ ಯಡಿಯೂರಪ್ಪ ಕೈಗೊಳ್ಳಬೇಕಿರುವ ರಾಜ್ಯ ಪ್ರವಾಸದ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಗಿದೆ. ಆದರೆ ರಾಜ್ಯ ಪ್ರವಾಸದ ದಿನಾಂಕವನ್ನು ನಿಗದಿ ಮಾಡಿಲ್ಲ. ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ಬಳಿಕ ದಿನಾಂಕ ನಿಗದಿಯಾಗುವ ನಿರೀಕ್ಷೆ ಇದೆ.

ಯಡಿಯೂರಪ್ಪ ಘೋಷಣೆ ಮಾಡಿದ್ದ ರಾಜ್ಯ ಪ್ರವಾಸ
2021ರ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ತಮ್ಮ ವಿದಾಯದ ಭಾಷಣದಲ್ಲಿ ಅವರು ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುವೆ. ರಾಜ್ಯದಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಮತ್ತೆ ಅಧಿಕಾರಕ್ಕೆ ತರುವೆ ಎಂದು ಘೋಷಣೆ ಮಾಡಿದ್ದರು.
ಆದರೆ ಬೇರೆ ಬೇರೆ ಕಾರಣದಿಂದಾಗಿ ಯಡಿಯೂರಪ್ಪ ರಾಜ್ಯ ಪ್ರವಾಸ ವಿಳಂಬವಾಗುತ್ತಲೇ ಸಾಗಿದೆ. ಇನ್ನೂ ವಿಳಂಬ ಮಾಡಿದರೆ ಚುನಾವಣೆ ಎದುರಾಗಲಿದೆ. ಆದ್ದರಿಂದ ಮೊದಲ ಹಂತದ ಪಾದಯಾತ್ರೆ ಆರಂಭಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.

3 ಹಂತಗಳಲ್ಲಿ ರಾಜ್ಯ ಪ್ರವಾಸ
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಸಾರಥ್ಯದಲ್ಲಿ ಮೂರು ಹಂತಗಳಲ್ಲಿ ರಾಜ್ಯದಲ್ಲಿ ಬಿಜೆಪಿ ನಾಯಕರು ಸಂಚಾರ ನಡೆಸಲಿದ್ದಾರೆ. ಅದರಲ್ಲೂ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಮೊದಲು ಸಂಚಾರ ನಡೆಸಲು ಚಿಂತನೆ ನಡೆಸಲಾಗಿದೆ.
ರಾಜ್ಯವನ್ನು ಮೂರು ವಿಭಾಗ ಮಾಡಿಕೊಂಡು ಮೂವರು ನಾಯಕರ ಸಾರಥ್ಯದಲ್ಲಿ ಬಿಜೆಪಿಯ ಸಚಿವರು, ಶಾಸಕರು ಜನರ ಬಳಿಗೆ ಬರಲಿದ್ದಾರೆ. ರಾಜ್ಯ ಯಾತ್ರೆಯ ಮಾದರಿ ಹೇಗಿರಲಿದೆ?. ಯಾವ ಶಾಸಕರು, ಸಚಿವರು ಯಾವ ತಂಡ ಸೇರಲಿದ್ದಾರೆ? ಎಂಬುದು ಬಿಜೆಪಿ ಕಾರ್ಯಕಾರಣಿ ಸಭೆ ಬಳಿಕ ಅಂತಿಮಗೊಳ್ಳಲಿದೆ.

ಸಾಲು-ಸಾಲು ಚುನಾವಣೆಗಳು
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. 2023ರ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಇದರ ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆಯಬೇಕಿದೆ. ಇದಕ್ಕೆ ಪ್ರಚಾರ ನಡೆಸಲು, ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡಲು ಬಿಜೆಪಿ ನಾಯಕರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.












Click it and Unblock the Notifications