RSS ಚಡ್ಡಿ ಸುಡುತ್ತೇವೆ ಎನ್ನುವ ಸಿದ್ದರಾಮಯ್ಯ ಹೇಳಿಕೆ, ಮತ್ತದರ ಸುತ್ತಮುತ್ತ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಚಡ್ಡಿಯನ್ನು ರಾಜ್ಯಾದ್ಯಂತ ಸುಡುತ್ತೇವೆ ಎನ್ನುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆ, ಬಿಜೆಪಿ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬಹುತೇಕ ಬಿಜೆಪಿಯ ಎಲ್ಲಾ ಪ್ರಮುಖ ಮುಖಂಡರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಪಟೂರಿನ ಮನೆಯಲ್ಲಿ ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ, NSUI ದಾಳಿ ನಡೆಸಿ ಪ್ರತಿಭಟನೆ ನಡೆಸಿತ್ತು. ಈ ಸಂಬಂಧ ಸಂಘಟನೆಯ ಪ್ರಮುಖರನ್ನು ಬಂಧಿಸಲಾಗಿತ್ತು.
ಸಂಘಟನೆಯು ತಮ್ಮ ಪ್ರತಿಭಟನೆಯ ವೇಳೆ ಚಡ್ಡಿಯನ್ನು ಸುಟ್ಟು ಹಾಕಿತ್ತು. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ನಮ್ಮ ಸಂಘಟನೆಯ ಯುವಕರು ಪ್ರತಿಭಟನೆಯ ವೇಳೆ ಸಾಂಕೇತಿಕವಾಗಿ ಚಡ್ಡಿಯನ್ನು ಸುಟ್ಟು ಹಾಕಿದ್ದರು. ಇದು ಸರಕಾರಕ್ಕೆ ದೊಡ್ಡ ಅಪರಾಧದ ರೀತಿಯಲ್ಲಿ ಕಾಣಿಸಿದೆ"ಎಂದು ಆಕ್ರೋಶ ಹೊರಹಾಕಿದರು.
"NSUI ಸಂಘಟನೆಯ ಮುಖಂಡರು ಮನೆಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿಲ್ಲ. ಇದು ಕಾನೂನು ವಿರೋಧಿ ಕೃತ್ಯ ಹೇಗಾಗುತ್ತದೆ? ಸುಟ್ಟಿರೋದು ಒಂದು ಚಡ್ಡಿಯನ್ನು, ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಚಡ್ಡಿ ಸುಡುವ ಅಭಿಯಾನ ಶುರು ಮಾಡಬೇಕಾಗುತ್ತದೆ"ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದರು. ಈ ಬಗ್ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ ಹೀಗಿತ್ತು:

ಕಾಂಗ್ರೆಸ್ಸಿನಲ್ಲಿಯೇ ಹುಚ್ಚನ ಮಾತಿಗೆ ಬೆಲೆಯಿಲ್ಲ - ಈಶ್ವರಪ್ಪ ವಾಗ್ದಾಳಿ
ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಕಿಡಿಕಾರಿರುವ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. "ಅವನೊಬ್ಬ ಅಯೋಗ್ಯ, ಹುಚ್ಚ. ನಿಮ್ಹಾನ್ಸ್ ರೋಡಿನಲ್ಲಿ ಹೋಗುವ ನಾಯಿಯು ಕೂಡಾ ಸಿದ್ದರಾಮಯ್ಯನಿಗೆ ಮರ್ಯಾದೆಯನ್ನು ಕೊಡುವುದಿಲ್ಲ. ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಂಡು ಸಂಸ್ಕಾರ ಬೆಳೆಸಿಕೊಂಡು ನರೇಂದ್ರ ಮೋದಿ ಈಗ ಪ್ರಧಾನಮಂತ್ರಿಯಾಗಿದ್ದಾರೆ ಎನ್ನುವುದನ್ನು ಮೊದಲು ಅರಿಯಲಿ. ಕಾಂಗ್ರೆಸ್ಸಿನಲ್ಲಿಯೇ ಈ ಹುಚ್ಚನ ಮಾತಿಗೆ ಬೆಲೆಯಿಲ್ಲ"ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಸಿದ್ದರಾಮಯ್ಯನವರ ವಿರುದ್ದ ಕಿಡಿ
"ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿನವರ ಚಡ್ಡಿಯನ್ನು ದೇಶದ ಜನ ಬಿಚ್ಚಿ ಕಳುಹಿಸಿದ್ದಾರೆ. ಇನ್ನು ಅವರೇನು ಆರ್‌ಎಸ್‌ಎಸ್ ಚಡ್ಡಿ ಬಗ್ಗೆ ಮಾತನಾಡುವುದು. ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಪ್ರಶ್ನಿಸಬೇಕಾಗಿದೆ. ದೇಶದಲ್ಲಿ ಜನರು ಕಾಂಗ್ರೆಸ್ ಅನ್ನು ಅಟ್ಟಾಡಿಸಿ ಓಡಿಸಿದ್ದಾರೆ. ಹಾಗಾಗಿ ಚಡ್ಡಿ ಸುಡುವ ಕಾರ್ಯಕ್ರಮ ಹಮ್ಮಿಕೊಂಡು ಓಡಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರ ಕಥೆಯೂ ಮುಗಿಯುತ್ತದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರಿದ್ದಾರೆ.

ಚಡ್ಡಿ ಇದ್ದಿದ್ದರಿಂದಲೇ ಈ ದೇಶದಲ್ಲಿ ಒಳ್ಳೆಯ ವಾತಾವರಣವಿದೆ
"ಚಡ್ಡಿ ಇದ್ದಿದ್ದರಿಂದಲೇ ಈ ದೇಶದಲ್ಲಿ ಒಳ್ಳೆಯ ವಾತಾವರಣವಿದೆ, ಇಲ್ಲದಿದ್ದರೆ ದೇಶದ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಸಿದ್ದರಾಮಯ್ಯನವರು ಎಲ್ಲಾ ವಿಚಾರದಲ್ಲಿ ರಾಜಕೀಯವನ್ನು ಮಾಡುತ್ತಾರೆ. ಆರ್‌ಎಸ್‌ಎಸ್ ಸಂಘಟನೆ ದೇಶಭಕ್ತರನ್ನು ಹುಟ್ಟುಹಾಕುತ್ತದೆ ಇದು ಅವರಿಗೆ ಜೀರ್ಣಿಸಲು ಸಾಧ್ಯವಾಗುತ್ತಿಲ್ಲ" ಎಂದು ಬಿಜೆಪಿ ಶಾಸಕ ರಘುಪತಿ ಭಟ್ ಅಭಿಪ್ರಾಯ ಪಟ್ಟಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ
"ಇಲ್ಲಿ ಸುಡಬೇಕಾಗಿರುವುದು ವಸ್ತ್ರವನ್ನಲ್ಲ, ನಮ್ಮಲ್ಲಿರುವಂತಹ ಕಲ್ಮಶ ಮನಸ್ಸನ್ನು. ನಮ್ಮ ಹೃದಯದಲ್ಲಿ ಇರುವಂತಹ ಸಂಘರ್ಷದ ಭಾವನೆಯನ್ನು, ಧರ್ಮದ ಹೆಸರಿನಲ್ಲಿ ನಾಡನ್ನು ಸುಡುತ್ತಿರುವಂತಹ ಕೆಲಸವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ. ಧಾರ್ಮಿಕ ನಂಬಿಕೆಯನ್ನು ಕೆರಳಿಸುವ ಕೆಲಸ ಎರಡೂ ಕಡೆಯಿಂದ ನಡೆಯುತ್ತಿದೆ. ಹಾಗಾಗಿ, ಇವರ ಭಾವನೆಯನ್ನು ಮೊದಲು ಸುಡಬೇಕಾಗಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications