Karnataka BJP: 'ಹಾದಿ ಬೀದಿಗೆ ಬಂದ ಬಿಜೆಪಿ ಜಗಳ, ಅಶೋಕ್ ಭವಿಷ್ಯಕ್ಕೆ ಬೆಲೆಯೇ ಇಲ್ಲ'
ಬೆಂಗಳೂರು, ಫೆಬ್ರವರಿ 06: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭವಿಷ್ಯವಾಣಿಗೆ ಯಾವುದೇ ಬೆಲೆ ಇಲ್ಲ, ಬಿಜೆಪಿ ಜಗಳ ಹಾದಿ ಬೀದಿಗೆ ಬಂದಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಬಿಜೆಪಿಯ ಆಂತರಿಕ ಜಗಳ ಹಾದಿ, ಬೀದಿಗೆ ಬಂದಿದ್ದು, ಅವಾಚ್ಯ ಶಬ್ದಗಳಲ್ಲಿ ಬೈದಾಡಿಕೊಳ್ಳುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಸಚಿವ ಈಶ್ವರ್ ಖಂಡ್ರೆ ಅವರು ಪ್ರಶ್ನಿಸಿದರು.
ವಿಕಾಸಸೌಧದಲ್ಲಿಂದು ಕಾವೇರಿ ಆಸ್ಪತ್ರೆ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್ ಸ್ವೀಕರಿಸಿ ಮಾತನಾಡಿದ ಅವರು, ದೆಹಲಿ ಚುನಾವಣೆ ಕುರಿತಂತೆ ಮತಗಟ್ಟೆ ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿ, ಈ ಹಿಂದೆಯೂ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಿವೆ. ಕಾಂಗ್ರೆಸ್ ಅಧಿಕಾರಕ್ಕಾಗಿ ರಚನೆಯಾದ ಪಕ್ಷವಲ್ಲ. ಅದು ಜನಸೇವೆಗಾಗಿ, ಸ್ವಾತಂತ್ರ್ಯಕ್ಕಾಗಿ ರೂಪುಗೊಂಡ ಆಂದೋಲನ. ನಾನು ಅಧಿಕಾರದಲ್ಲಿದ್ದರೂ ಜನ ಸೇವೆ ಮಾಡುತ್ತೇವೆ. ಪ್ರತಿಪಕ್ಷದಲ್ಲಿದ್ದರೂ ಜನರಿಗಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನಕ್ಕೆ ಕೊಡುಗೆಯಾಗಿ ಬಂದಿರುವ ಆಂಬ್ಯುಲೆನ್ಸ್, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೂ ಪ್ರಯೋಜನ ಒದಗಿಸಲಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದ ಗಾಂಧೀ ಪ್ರತಿಮೆ ಬಳಿ ಇಂದು ಬೆಂಗಳೂರಿನ ಕಾವೇರಿ ಆಸ್ಪತ್ರೆ ಸಮೂಹ ಬನ್ನೇರುಘಟ್ಟ ಉದ್ಯಾನಕ್ಕೆ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್ ವಾಹನವನ್ನು ಇಲಾಖೆಯ ಪರವಾಗಿ ಸ್ವೀಕರಿಸಿ, ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಅವರಿಗೆ ಹಸ್ತಾಂತರಿಸಿದರು.
ತುರ್ತು ಆರೋಗ್ಯ ಸಂದರ್ಭದಲ್ಲಿ ಸ್ಥಳೀಯ ಪಂಚಾಯ್ತಿ ವ್ಯಾಪ್ತಿಯ ನಿವಾಸಿಗಳಿಗೆ, ಉದ್ಯಾನದ ಸಿಬ್ಬಂದಿಗೆ ಮತ್ತು ಪ್ರವಾಸಿಗರಿಗೆ ಈ ಆಂಬ್ಯುಲೆನ್ಸ್ ನೆರವು ಲಭಿಸುವಂತಾಗಬೇಕು ಎಂದರು. ಬನ್ನೇರುಘಟ್ಟ ಬೆಂಗಳೂರು ಬಳಿಯೇ ಇರುವ ದೊಡ್ಡ ಕಾನನ ಪ್ರದೇಶವಾಗಿದ್ದು, 1970ರಲ್ಲಿ ಉದ್ಯಾನ ಸ್ಥಾಪಿಸಲಾಯಿತು, 1974ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಯಿತು. ಪ್ರಸ್ತುತ ಇಲ್ಲಿ ಮೃಗಾಲಯ, ಚಿಟ್ಟೆ ಪಾರ್ಕ್, ಕರಡಿ ಸಫಾರಿ, ಹುಲಿ ಸಫಾರಿ, ಸಿಂಹ ಸಫಾರಿ ಇದ್ದು, ಇತ್ತೀಚೆಗೆ ತಾವೇ ಚಿರತೆ ಸಫಾರಿಯನ್ನೂ ಉದ್ಘಾಟಿಸಿದ್ದು, ಇದು ಪ್ರವಾಸಿಗರಿಗೆ ಜನಾಕರ್ಷಣೆ ಕೇಂದ್ರವಾಗಿದೆ ಎಂದರು.
ರಾಷ್ಟ್ರೀಯ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಮತ್ತು ಇಲ್ಲಿನ ಸಿಬ್ಬಂದಿಗೆ ತುರ್ತು ಆರೋಗ್ಯ ಸೇವೆಯ ಅಗತ್ಯವಿದ್ದಾಗ ಆಸ್ಪತ್ರೆಗೆ ಕರೆ ತರಲು ಆಂಬ್ಯುಲೆನ್ಸ್ ವಾಹನದ ಅಗತ್ಯ ಮನಗಂಡು ಕಾವೇರಿ ಆಸ್ಪತ್ರೆಯವರು ಇಂದು ಒಂದು ಆಂಬ್ಯುಲೆನ್ಸ್ ಅನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ ನೀಡಿದೆ ಎಂದು ಅಭಿನಂದಿಸಿದರು.
ಕೊಡಗು, ಚಿಕ್ಕಮಗಳೂರು, ಹಾಸನ ಸುತ್ತಮುತ್ತ ಆನೆಗಳು ನಾಡಿನಲ್ಲೇ ಸಂಚರಿಸುತ್ತಿದ್ದು, ಸಾಮಾನ್ಯವಾಗಿ ಗುಂಪಿನ ನಾಯಕತ್ವ ವಹಿಸುವ ಹೆಣ್ಣಾನೆಗಳಿಗೆ ದೇಶೀ ನಿರ್ಮಿತ ರೇಡಿಯೋ ಕಾಲರ್ ಅಳವಡಿಸುವ ಮೂಲಕ ಆನೆ ಚಲನ ವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು. 6395 ಆನೆಗಳನ್ನು ಹೊಂದಿರುವ ಕರ್ನಾಟಕ ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಆನೆಗಳ ಸಂಖ್ಯೆಗೆ ಅನುಗುಣವಾಗಿ ವನ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ. ಅಮೂಲ್ಯವಾದ ಜೀವ ಉಳಿಸಲು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಸ್ಥಳೀಯರಿಗೆ ಮಾಹಿತಿ ನೀಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.












Click it and Unblock the Notifications