ಸಹೋದರರ ಸವಾಲ್: ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ?
ಕಲಬುರಗಿ, ಏಪ್ರಿಲ್ 17: ತಮ್ಮ ಸಹೋದರ ನಿತಿನ್ ಗುತ್ತೇದಾರ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಅವರು ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಂಗಳವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇತರ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಅವರು 'ಭ್ರಷ್ಟ' ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಅವರು, ಏಪ್ರಿಲ್ 19ರಂದು ಕಾಂಗ್ರೆಸ್ ಸೇರುವ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

ಇನ್ನೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿವೈ ವಿಜಯೇಂದ್ರ ಅವರು ಪಕ್ಷದ ನಾಯಕರಾದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಸಂಗಣ್ಣ ಕರಡಿ ಮತ್ತು ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ದೂರಿದ್ದಾರೆ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿಪರೀತ ಭ್ರಷ್ಟಾಚಾರ ಇತ್ತು. ಈ ಬಗ್ಗೆ ಅರುಣ್ ಸಿಂಗ್ ಅವರ ಗಮನಕ್ಕೆ ತಂದಿದ್ದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಗ್ಯಾರಂಟಿ ಯೋಜನೆಗಳಿಂದಲ್ಲ. ಬದಲಾಗಿ ಬಿಜೆಪಿ ಭ್ರಷ್ಟಾಚಾರದಿಂದ ಎಂದು ಆರೋಪಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದರು.
ಬಿಜೆಪಿ ಬಿಡಬೇಕೋ ಬೇಡವೋ ಎಂಬ ಬಗ್ಗೆ ಇದೇ 19ರಂದು ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಬಿಜೆಪಿ ಪಕ್ಷ ಬಿಡುವಂತೆ ಇಂದಿನ ಸಭೆಯಲ್ಲಿ ಕಾರ್ಯಕರ್ತರು ತಿಳಿಸಿದ್ದಾರೆ. ಕಾಂಗ್ರೆಸ್ ಸೇರುವಂತೆಯೂ ಹಲವರು ಸಲಹೆ ನೀಡಿದ್ದಾರೆ. ಬಹುತೇಕ ಕಾರ್ಯಕರ್ತರು ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದು , ಇದೇ 19ರಂದು ನನ್ನ ನಿರ್ಧಾ ರ ತಿಳಿಸುತ್ತೇನೆ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದರು.












Click it and Unblock the Notifications