ಡಿಕೆ ಶಿವಕುಮಾರ್ ಮುಂದೆ ಕಣ್ಣೀರಿಟ್ಟ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಪುತ್ರಿ: ಕಾರಣವೇನು?
ಬೆಂಗಳೂರು, ಏಪ್ರಿಲ್ 09: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಈ ನಡುವೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಅವರ ಪುತ್ರಿ ಕಾಂಗ್ರೆಸ್ ಸೇರ್ಪಡೆ ಕುರಿತು ರಾಜಕೀಯ ವಯಲದಲ್ಲಿ ಸಾಕಷ್ಟು ಚರ್ಚೆ ಶುರುವಾಗಿದೆ.
ಈಗಾಗಲೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಡಿ ಕೆ ಸುರೇಶ್ ಅವರ ಜೊತೆಗೆ ಹಲವು ಬಾರಿ ಮಾತುಕತೆ ನಡೆಸಿರುವ ಬಿಜೆಪಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಸೋಮವಾರ ಕೆ ಶಿವರಾಂ ಅವರ ಪತ್ನಿ ವೀಣಾ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾದರು. ಈ ನಿಟ್ಟಿನಲ್ಲಿ ಏಕಾಏಕಿ ಕೆಪಿಸಿಸಿ ಕಚೇರಿ ಬಳಿ ಬಂದು ಡಿ ಕೆ ಶಿವಕುಮಾರ್ ಅವರ ಮುಂದೆ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.

ನನ್ನನ್ನು ಪಕ್ಷಕ್ಕೆ ಸೇರಿದಿಕೊಳ್ಳಿ ನಿಟ್ಟಿನಲ್ಲಿ ನಿಶಾ ಡಿಕೆ ಶಿವಕುಮಾರ್ ಮುಂದೆ ಕಣ್ಣೀರಿಟ್ಟಿದ್ದಾರೆ. ಆದರೆ ಈ ಪ್ರಸ್ತಾಪವನ್ನ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ತಿರಸ್ಕರಿಸಿದ್ದಾರೆ. ಈ ವೇಳೆ ಪಕ್ಷ ಸೇರ್ಪಡೆ ಕುರಿತು ನಿಶಾ ಯೋಗೇಶ್ವರ್ ಚರ್ಚೆಗೆ ಮುಂದಾದಗ ತಲೆಯಲ್ಲಿ ಏನೋ ಇದೆ, ನೋಡುತ್ತೇನೆ ಹೋಗಮ್ಮಾ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ, ನಿಶಾ ಯೋಗೇಶ್ವರ್ ಮಾತ್ರ ತಮ್ಮನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದು ಕಣ್ಣೀರಿಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ನಿಶಾ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದು, ನಾನು ಸದ್ಯಕ್ಕೆ ಯಾವ ಪಕ್ಷದಲ್ಲಿಯೂ ಇಲ್ಲ, ನಾನು ಯಾವುದೇ ಪಕ್ಷವನ್ನ ಸೇರಿಲ್ಲ. ಕಾಂಗ್ರೆಸ್ ಸೇರಲು ಪ್ರಯತ್ನ ಮಾಡಿದ್ದೇನೆ. ಈ ಬಗ್ಗೆ ಮುಂದೆ ನಾನು ಉತ್ತರ ಕೊಡುತ್ತೇನೆ ಎಂದಿದ್ದರು.
ಈ ಹಿಂದೆ ವಿಡಿಯೋದಲ್ಲಿ ನಿಶಾ ಯೋಗೇಶ್ವರ್ ಹೇಳಿದ್ದೇನು?
ನಾನು ಎಲ್ಲಿ ಹೋದರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಕ್ಕೆ ಅಭಿನಂದನೆ ಅಂತ ಹೇಳ್ತಿದ್ದಾರೆ, ಆದರೆ ಇದು ನಿಜ ಅಲ್ಲ. ನಾನು ನನ್ನ ಜನರನ್ನು ಕತ್ತಲೆಯಲ್ಲಿಡೋದಕ್ಕೆ ಇಷ್ಟ ಪಡೋದಿಲ್ಲ. ಅದಕ್ಕೆ ಈ ಸ್ಪಷ್ಟನೆಯನ್ನು ನೋಡ್ತಿದ್ದೇನೆ. ನಾನು ಯಾವುದೇ ಪಕ್ಷಕ್ಕೂ ಸೇರ್ಪಡೆಯಾಗಿಲ್ಲ, ಯಾವುದೇ ಪಾರ್ಟಿಯಲ್ಲೂ ನಾನು ಇಲ್ಲ. ನೀವು ನನ್ನನ್ನು ಯಾವುದೇ ಪಕ್ಷದ ಕಚೇರಿ ಅಥವಾ ಅಭ್ಯರ್ಥಿ, ಪಕ್ಷದ ಪರ ಪ್ರಚಾರ ಮಾಡೋದನ್ನು ನೋಡಿಲ್ಲ.
ನಾನು ಜನರ ನಡುವೆ ಇದ್ದೇನೆ ಅಷ್ಟೇ. ನಾನು ಪಕ್ಷಕ್ಕೆ ಸೇರ್ಪಡೆಯಾಗಲು ಹಲವು ಕಡೆಯಿಂದ ಪ್ರಯತ್ನ ಮಾಡಿದ್ದೆ, ಸದ್ಯಕ್ಕೆ ನಾನು ಯಾವುದೇ ಪಕ್ಷದಲ್ಲೂ ಇಲ್ಲ. ನಿಮಗೆ ಹಲವು ಪ್ರಶ್ನೆಗಳು ನನ್ನನ್ನು ಕೇಳಬೇಕು ಅನಿಸಬಹುದು ಅದೇ ರೀತಿ ನನ್ನ ಬಳಿಯೂ ಸಾವಿರಾರು ಪ್ರಶ್ನೆಗಳಿವೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ, ನಿಮ್ಮ ಕಾಳಜಿಗೆ ನಾನು ಸದಾ ಅಭಾರಿಯಾಗಿರುತ್ತೇನೆ ಎಂದು ನಿಶಾ ತಿಳಿಸಿದ್ದಾರೆ.
ರಾಜಕಾರಣಕ್ಕಾಗಿ ತಂದೆ-ಮಗಳನ್ನು ದೂರ ಮಾಡಲ್ಲ: ಡಿಕೆಶಿ
ನಿಶಾ ಯೋಗೇಶ್ವರ್ ನಮ್ಮ ಮನೆ ಮಗಳಂತೆ. ಆಕೆ ನಮ್ಮ ಬಳಿ ಬಂದು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಅವರ ತಾಯಿ ನನಗೆ ಪರಿಚಯ. ಅವರಿಗೆ ರಕ್ಷಣೆ ಇಲ್ಲ. ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ಸ್ವೀಕಾರ ಮಾಡಿ ಎಂದು ಕೇಳಿದಳು. ರಾಜಕಾರಣಕ್ಕಾಗಿ ತಂದೆ ಮಗಳ ಬೇರೆ ಮಾಡುವುದು ಸರಿಯಲ್ಲ. ಆಕೆಗೆ ಮದುವೆ ಮಾಡಬೇಕು, ಧಾರೆ ಎರೆದು ಅಕ್ಷತೆ ಹಾಕಬೇಕು. ಅದನ್ನು ತಂದೆಯೇ ಮಾಡಬೇಕು. ಹೀಗಾಗಿ ರಾಜಕೀಯಕ್ಕಾಗಿ ಅವರನ್ನು ಬೇರೆ ಮಾಡಲು ಇಷ್ಟವಿಲ್ಲ. ಆಕೆ ಬಂದು ತಮ್ಮ ಕಷ್ಟ ಹೇಳಿಕೊಂಡಿದ್ದಾಳೆ. ಆಕೆ ಪ್ರಬುದ್ಧ ಯುವತಿ. ಆಕೆಗೆ ರಾಜಕಾರಣದಲ್ಲಿನ ಆಯ್ಕೆಗೆ ಸ್ವಾತಂತ್ರ್ಯವಿದೆ. ಆಕೆ ಇನ್ನೂ ಯೋಗೇಶ್ವರ್ ಅವರ ಕುಟುಂಬದ ಮೇಲೆ ಅವಲಂಬಿತವಾಗಿದ್ದಾರೆ.
ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ರಾಜಕೀಯಕ್ಕೆ ಅಪ್ಪ ಮಗಳನ್ನು ದೂರ ಮಾಡಿದರು ಎಂದು ಜನ ಪ್ರಶ್ನೆ ಮಾಡಬಹುದು. ಯೋಗೇಶ್ವರ್ ಜತೆ ಇರುವ ಬಿಜೆಪಿ ಕಾರ್ಯಕರ್ತರೇ ಆಕೆಗೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. ಆಕೆ ವಿವಾಹವಾಗಿ ಬೇರೆ ಕುಟುಂಬಕ್ಕೆ ಸೇರಿದ್ದರೆ, ನಾವು ಇಷ್ಟು ಆಲೋಚನೆ ಮಾಡುತ್ತಿರಲಿಲ್ಲ. ಹೀಗಾಗಿ ನಾನು ನನ್ನ ಸಹೋದರ ಈ ವಿಚಾರವಾಗಿ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ. ನಿಶಾ ಅವರು ಮಾಧ್ಯಮಗಳಿಗೆ ಕೊಟ್ಟ ಹೇಳಿಕೆ ಗಮನಿಸಿದೆ. ಆಕೆ ದೊಡ್ಡ ಧೈರ್ಯ ಮಾಡಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನ ಮಾಡಿದರೆ, ಆಕೆಯನ್ನು ಹೊರದಬ್ಬಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.












Click it and Unblock the Notifications