B.Sriramulu: ಶ್ರೀರಾಮುಲುಗೆ ರಾಜ್ಯಸಭೆ ಸ್ಥಾನದ ಮೇಲೆ ಕಣ್ಣು: ಹೈಕಮಾಂಡ್ ಬುಲಾವ್
ಬೆಂಗಳೂರು, ಜನವರಿ 31: ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ಅಸಮಾಧಾನ ಭುಗಿಲೆದ್ದಿರುವ ಭಿನ್ನಮತ ಯಾವುದೇ ಕಾರಣಕ್ಕೂ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಬಂಡೆದ್ದಿದೆ. ಅದರಲ್ಲೂ ವಿಜಯೇಂದ್ರ ವಿರುದ್ಧ ವಿವಿಧ ಸಮಾಜದ ಪ್ರಮುಖ ನಾಯಕರೇ ಬಂಡಾಯದ ಕಹಳೆಯನ್ನು ಊದಿರುವುದು ಬಿಜೆಪಿ ವರಿಷ್ಠರಿಗೆ ತಲೆನೋವು ತಂದಿದೆ. ಇತ್ತ ಶ್ರೀರಾಮುಲು ಪಕ್ಷ ಬಿಡುವ ಬಗ್ಗೆ ಮಾತ್ನಾಡಿರುವುದು ಬಿಜೆಪಿ ದೊಡ್ಡ ಸಂಕಷ್ಟ ಎದುರಾಗುವಂತೆ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಣ ತಿರುಗಿ ಬಿದ್ದಿದೆ. ಯತ್ನಾಳ್ ಬಳಿಕ ಶ್ರೀರಾಮುಲು ಸಹ ಜನಾರ್ದನ್ ರೆಡ್ಡಿ ಹಾಗೂ ಬಿ ವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನವನ್ನ ಹೊರಹಾಕಿದ್ದು, ಶ್ರೀರಾಮುಲು ಸದ್ಯ ಅಜ್ಞಾನ ಸ್ಥಳದಲ್ಲಿದ್ದಾರೆ. ಬಿಜೆಪಿಯಲ್ಲಿನ ಸದ್ಯದ ಪರಿಸ್ಥಿತಿಯಿಂದ ಎಲ್ಲ ಪ್ರಮುಖ ಸಮುದಾಯಗಳು ಕಮಲ ಪಡೆಯಿಂದ ದೂರ ಸರಿಯುತ್ತಿವೆ ಎಂಬ ಆತಂಕ ಕಮಲ ನಾಯಕರಿಗೆ ಶುರುವಾಗಿದೆ.

ಉಪಚುನಾವಣೆಯಲ್ಲಿನ ಸೋಲು ಹಾಗೂ ಸದ್ಯ ಬಿಜೆಪಿ ಕೋಟೆಯಲ್ಲಿ ಹುಟ್ಟಿಕೊಂಡಿರುವ ಬಣ ಬಡಿದಾಟ ಬಿವೈ ವಿಜಯೇಂದ್ರಗೆ ದೊಡ್ಡ ಹಿನ್ನಡೆ ಅಂತಾನೇ ಹೇಳಲಾಗ್ತಿದೆ. ಇದು ಕರ್ನಾಟಕ ಬಿಜೆಪಿ ನಾಯಕತ್ವದ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ. ಈ ನಡುವೆ ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಮುನಿಸಿನಿಂದ ಪಕ್ಷಕ್ಕೆ ಆಗಬಹುದಾದ ಹಾನಿ ತಪ್ಪಿಸಲು ವರಿಷ್ಠರು ಇಬ್ಬರಿಗೂ ಬುಲಾವ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿದ್ದು, ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಮುನಿಸು ಸದ್ಯ ಬಿಜೆಪಿಯಲ್ಲಿ ಹಲವು ನಾಯಕರಿಗೆ ಆತಂಕ ಹುಟ್ಟುವಂತೆ ಮಾಡಿದೆ. ಈಗಾಗಲೇ ಸಾಲು ಸಾಲು ಸೋಲು ಅನುಭವಿಸಿರುವ ಶ್ರೀರಾಮುಲು ಅವರು ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
2023 ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿರುವ ರಾಮುಲುಗೆ ಸದ್ಯ ಬಿಜೆಪಿಯಲ್ಲಿ ಯಾವುದೇ ಹುದ್ದೆ ಇಲ್ಲದೆ ಖಾಲಿ ಇದ್ದಾರೆ. ಈ ನಡುವೆ ಸ್ವಪಕ್ಷದ ವಿರುದ್ಧ ಗುಡುಗಿರುವ ಶ್ರೀರಾಮುಲು ಪಕ್ಷ ಬಿಡುವ ಕುರಿತು ಮಾತನಾಡಿದ್ದು, ಇದೀಗ ಬಿಜೆಪಿ ಹೈಕಮಾಂಡ್ನಿಂದ ಭೇಟಿಗೆ ಕರೆ ಬಂದಿದೆ. ದೆಹಲಿ ಚುನಾವಣೆ ಮುಗಿದ ಬಳಿಕ ದೆಹಲಿಗೆ ಬರುವಂತೆ ಶ್ರೀರಾಮುಲುಗೆ ವರಿಷ್ಠರು ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರೆಡ್ಡಿ ಜತೆಗಿನ ಮುನಿಸನ್ನೇ ತಮಗೆ ಲಾಭ ಆಗುವ ರೀತಿ ಬಳಕೆ ಮಾಡಿಕೊಳ್ಳಲು ಶ್ರೀರಾಮುಲು ಯತ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋರ್ ಕಮಿಟಿ ಸದಸ್ಯ ಸ್ಥಾನ ಬಿಟ್ಟರೇ ಶ್ರೀರಾಮುಲು ಅವರು ಯಾವುದೇ ಹುದ್ದೆಯಲ್ಲಿಲ್ಲ. ಹೀಗಾಗಿ ಇದನ್ನೆ ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯಸಭೆ ಸ್ಥಾನವನ್ನ ಪಡೆಯಲು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಆಂಧ್ರ ಕೋಟಾದಿಂದ ರಾಜ್ಯಸಭೆ ಸ್ಥಾನ ಕೇಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮತ್ತೊಮ್ಮೆ ಸಕ್ರಿಯರಾಗಿ ಪಕ್ಷ ಕಟ್ಟಲು ತಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಬೇಕು ಎಂದು ಅವರು ವರಿಷ್ಠರ ಬಳಿ ಅಹವಾಲು ತೋಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆಂಧ್ರ ಪ್ರದೇಶ ಕೋಟಾದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ವೈಎಸ್ಆರ್ಪಿ ವಿಜಯ ಸಾಯಿರೆಡ್ಡಿ ಕೆಲವು ದಿನಗಳ ಹಿಂದೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಆ ಸ್ಥಾನ ತೆರವಾಗಿದೆ. ಅವರ ಅವಧಿ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಹೀಗಾಗಿ ಆಂಧ್ರ ಕೋಟಾದಡಿ ರಾಜ್ಯಸಭೆಗೆ ಆಯ್ಕೆ ಮಾಡುವಂತೆ ರಾಮುಲು ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications