ಬಿಜೆಪಿ ನಾಯಕ ಎ.ಟಿ.ರಾಮಸ್ವಾಮಿ ದಿಢೀರ್ ರಾಜೀನಾಮೆ
ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದು ರಾಜೀನಾಮೆ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಮಸ್ವಾಮಿ ಅವರು ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ದಿಢೀರನೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ವಿಚಾರ ಸಂಚಲನ ಸೃಷ್ಟಿಸಿದೆ.
ಬಿವೈ ವಿಜಯೇಂದ್ರ ಅವರಿಗೆ ಬರೆದಿರುವ ಪತ್ರದಲ್ಲಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ರಾಮಸ್ವಾಮಿ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದಾರೆ? ಹಾಗೂ ಮುಂದಿನ ನಡೆ ಏನು? ಎಂಬುದನ್ನೂ ಪತ್ರದಲ್ಲಿ ತಿಳಿಸಿದ್ದು, ತಮ್ಮನ್ನು ಪರಿಸರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಅವರು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವ ಮಾತುಗಳು ಕೂಡ ಕೇಳಿಬರುತ್ತಿವೆ.

ರಾಜೀನಾಮೆ ಪತ್ರದಲ್ಲೇನಿದೆ?
ರಾಮಸ್ವಾಮಿ ಅವರು ವಿಜಯೇಂದ್ರಗೆ ಬರೆದಿರುವ ಪತ್ರದಲ್ಲಿ, ವಿಶ್ವ ತಾಪಮಾನ ವಿಪರೀತ ಏರಿಕೆಯಿಂದ ಹವಾಮಾನದ ಅಸಮತೋಲನ ಉಂಟಾಗಿದ್ದು, ಇದರಿಂದ ನೆರೆ, ಬರ, ಚಂಡಮಾರುತ, ಭೂಕಂಪಗಳು ಹೆಚ್ಚಾಗಿವೆ. ನಾವು ಕುಡಿಯುತ್ತಿರುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ಎಲ್ಲವೂ ವಿಷಪೂರಿತವಾಗಿದೆ. ಬೆಟ್ಟ-ಗುಡ್ಡ, ಅರಣ್ಯ ನಾಶದಿಂದ ನದಿ ಜಲಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟವೂ ಕುಸಿದು ಹೋಗಿದೆ. ಇದರಿಂದ ಜೀವ ಸಂಕುಲಗಳಿಗೆ ಸಂಕಷ್ಟ ಎದುರಾಗಿದೆ. ಈಗಲಾದರೂ ನಾವು ಜನ ಜಾಗೃತಿ ಮೂಡಿಸಿ ಪರಿಸರ ಸಂರಕ್ಷಣೆಯ ಕೆಲಸ ಮಾಡಬೇಕು ಎಂದು ರಾಮಸ್ವಾಮಿ ಹೇಳಿದ್ದಾರೆ.
ನಾವು ಪರಿಸರವನ್ನು ಉಳಿಸಿದರೆ, ಜೀವ ಸಂಕುಲ ಉಳಿಯುತ್ತವೆ. ಇಂತಹ ಸನ್ನಿವೇಶದಲ್ಲಿ ರಾಜಕೀಯಕ್ಕಿಂತ ಪರಿಸರ ಸಂರಕ್ಷಣೆಯೇ ಮುಖ್ಯ ಎಂದು ಭಾವಿಸಿದ್ದೇನೆ. ಹಾಗಾಗಿ ನನ್ನ ಪೂರ್ಣ ಸಮಯವನ್ನು ಕೃಷಿಯ ಜೊತೆಗೆ ಪರಿಸರ ಸಂರಕ್ಷಣೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದೇನೆ. ಈಗಾಗಲೇ ನಾನು ನಿಮ್ಮೊಂದಿಗೆ ಈ ವಿಚಾರವಾಗಿ ಮಾತನಾಡಿದ್ದೇನೆ. ಇದೀಗ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇಲ್ಲಿವರೆಗೆ ತಾವೆಲ್ಲರೂ ತೋರಿದ ಪ್ರೀತಿ ವಿಶ್ವಾಸಕ್ಕೆ ನಾನು ಕೃತಜ್ಞ ಎಂದು ರಾಮಸ್ವಾಮಿ ತಿಳಿಸಿದ್ದಾರೆ.
ಜೆಡಿಎಸ್ ಮೈತ್ರಿಯಿಂದ ಅಸಮಾಧಾನ
ಕಳೆದ ವಿಧಾನಸಭೆ ಚುನಾವಣೆಯ ವೇಳೆ ರಾಮಸ್ವಾಮಿ ಅವರು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕರಾಗಿದ್ದ ಇವರು ದೆಹಲಿಯಲ್ಲೇ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ನಾನು ಅತ್ಯಂತ ಸಂತೋಷದಿಂದ ಬಿಜೆಪಿ ಸೇರಿದ್ದೇನೆ. ಮೋದಿ, ಅಮಿತ್ ಶಾ, ನಡ್ಡಾ ಅವರನ್ನು ಭೇಟಿಯಾಗುತ್ತಿರುವುದು ಸಂತಸ ಮೂಡಿದೆ. ಇಡೀ ವಿಶ್ವದಲ್ಲೇ ಭಾರತವು ಪಗ್ರತಿಯಲ್ಲಿ ದಾಪುಗಾಲು ಇಡುತ್ತಿದೆ. ಬಿಜೆಪಿ ನಾಯಕರು ಮೌಲ್ಯಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ಇದೇ ಕಾರಣಕ್ಕೆ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡ ವಿಚಾರವಾಗಿ ರಾಮಸ್ವಾಮಿ ಅವರು ಭಾರೀ ಅಸಮಾಧಾನಗೊಂಡಿದ್ದರು, ಅಲ್ಲದೆ ಇತ್ತೀಚೆಗೆ ಬಿಜೆಪಿಯಿಂದಲೂ ಅಂತರ ಕಾಯ್ದುಕೊಂಡಿದ್ದರು.












Click it and Unblock the Notifications