7 ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿ ಅಂತಿಮಗೊಳಿಸಲು ಬಿಜೆಪಿ ಕಸರತ್ತು

Recommended Video

      Lok Sabha Elections 2019 : ಈ 7 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನ ಅಂತಿಮಗೊಳಿಸಲು ಬಿಜೆಪಿ ಕಸರತ್ತು

      ಬೆಂಗಳೂರು, ಮಾರ್ಚ್ 15 : ಕರ್ನಾಟಕ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂದು ಪಣ ತೊಟ್ಟಿದೆ. ಮಾರ್ಚ್ 18ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ಆದರೆ, 7 ಕ್ಷೇತ್ರದಲ್ಲಿ ಪಕ್ಷಕ್ಕೆ ಪ್ರಬಲ ಅಭ್ಯರ್ಥಿಗಳು ಸಿಕ್ಕಿಲ್ಲ.

      ಶಿವಮೊಗ್ಗದಲ್ಲಿ ಗುರುವಾರ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ 18ಕ್ಕೆ ಬಿಡುಗಡೆ ಮಾಡಲಾಗುತ್ತದೆ' ಎಂದರು.

      'ಮಾರ್ಚ್ 17ರಂದು ನವದೆಹಲಿಯಲ್ಲಿ ಕೋರ್ ಕಮಿಟಿ ಸಭೆ ಇದೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಂತಿಮ ಚರ್ಚೆ ಮಾಡಲಾಗುತ್ತದೆ. ಬಳಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ' ಎಂದು ಯಡಿಯೂರಪ್ಪ ಹೇಳಿದರು.

      7 ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳು ಸಿಕ್ಕಿಲ್ಲ. ಸ್ಥಳೀಯ ನಾಯಕರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ನಿರ್ಧರಿಸಿದೆ. ಈ ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಹಾಲಿ ಕಾಂಗ್ರೆಸ್ ಸಂಸದರಿದ್ದಾರೆ.

      ಬಳ್ಳಾರಿ ಕ್ಷೇತ್ರ

      ಬಳ್ಳಾರಿ ಕ್ಷೇತ್ರ

      ಒಂದು ಕಾಲದಲ್ಲಿ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಅವರ ಪ್ರಭಾವವಿದ್ದ ಬಳ್ಳಾರಿಯಲ್ಲಿ ಈಗ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹರಸಾಹಸ ಪಡಬೇಕಾಗಿದೆ. ಕಾಂಗ್ರೆಸ್‌ನಿಂದ ಹಾಲಿ ಸಂಸದ ವಿ.ಎಸ್.ಉಗ್ರಪ್ಪ ಕಣಕ್ಕಿಳಿಯಲಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ 2.40 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜೆ.ಶಾಂತ ಸೋಲು ಕಂಡಿದ್ದರು. ಈ ಸೋಲು ಬಿಜೆಪಿಗೆ ಭಾರಿ ಹಿನ್ನಡೆ ಉಂಟುಮಾಡಿದೆ. ಉಗ್ರಪ್ಪ ಅವರಿಗೆ ಪ್ರತಿಸ್ಪರ್ಧೆ ನೀಡುವ ಅಭ್ಯರ್ಥಿಯಾಗಿ ಪಕ್ಷ ಹುಡುಕಾಟ ನಡೆಸುತ್ತಿದೆ.

      ಬೆಂಗಳೂರು ಗ್ರಾಮಾಂತರ ಕ್ಷೇತ್ರ

      ಬೆಂಗಳೂರು ಗ್ರಾಮಾಂತರ ಕ್ಷೇತ್ರ

      ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಪ್ರಭಾವವಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೂ ಬಿಜೆಪಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಹೆಸರು ಕೇಳಿಬರುತ್ತಿದೆ. ಆದರೆ, ಹಾಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ ಯಾರು? ಎಂಬುದು ಪ್ರಶ್ನೆಯಾಗಿದೆ.

      ಹಾಸನ ಲೋಕಸಭಾ ಕ್ಷೇತ್ರ

      ಹಾಸನ ಲೋಕಸಭಾ ಕ್ಷೇತ್ರ

      ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲಿದ್ದು, ಅವರು ಪ್ರಚಾರ ಆರಂಭಿಸಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ. ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಎ.ಮಂಜು ಬಿಜೆಪಿ ಸೇರಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಅದು ಅಂತಿಮಗೊಂಡಿಲ್ಲ.

      ಚಾಮರಾಜನಗರ ಕ್ಷೇತ್ರ

      ಚಾಮರಾಜನಗರ ಕ್ಷೇತ್ರ

      ಹಾಲಿ ಕಾಂಗ್ರೆಸ್‌ನ ಧ್ರುವನಾರಾಯಣ ಅವರು ಚಾಮರಾಜನಗರ ಕ್ಷೇತ್ರದ ಸಂಸದರು. ಇಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಯಾರು?. ಎಂ.ಶಿವಣ್ಣ, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರ ಹೆಸರು ಕೇಳಿಬರುತ್ತಿದೆ. ವಿ.ಶ್ರೀನಿವಾಸ ಪ್ರಸಾದ್ ಅವರು ಶನಿವಾರ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರವನ್ನು ಪಡೆದುಕೊಳ್ಳಲು ಬಿಜೆಪಿ ತಂತ್ರ ರೂಪಿಸುತ್ತಿದೆ.

      ಚಿತ್ರದುರ್ಗ ಕ್ಷೇತ್ರ

      ಚಿತ್ರದುರ್ಗ ಕ್ಷೇತ್ರ

      ಹಾಲಿ ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ ಚಿತ್ರದುರ್ಗ ಕ್ಷೇತ್ರದ ಸಂಸದರು. 2019ರ ಚುನಾವಣೆಗೂ ಅವರು ಅಭ್ಯರ್ಥಿಯಾಗಲಿದ್ದಾರೆ. ಅವರಿಗೆ ಪ್ರತಿಸ್ಪರ್ಧೆ ನೀಡುವ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ. ಮಾಜಿ ಸಂಸದ ಜನಾರ್ದನ ಸ್ವಾಮಿ ಅವರ ಹೆಸರು ಕೇಳಿಬರುತ್ತಿದೆ. ಅಭ್ಯರ್ಥಿ ಇನ್ನೂ ಅಂತಿಮಗೊಂಡಿಲ್ಲ.

      ರಾಯಚೂರು ಕ್ಷೇತ್ರ

      ರಾಯಚೂರು ಕ್ಷೇತ್ರ

      ಕಾಂಗ್ರೆಸ್‌ ನಾಯಕ, ಹಾಲಿ ಸಂಸದ ಬಿ.ವಿ.ನಾಯಕ್ ಅವರು ರಾಯಚೂರು ಕ್ಷೇತ್ರದಿಂದ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿಯಾಗಿ ಹುಡುಕಾಟ ನಡೆಸಿದೆ.

      ಕೋಲಾರ ಕ್ಷೇತ್ರ

      ಕೋಲಾರ ಕ್ಷೇತ್ರ

      ಕೋಲಾರ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಡಿ.ಎಸ್.ವೀರಯ್ಯ, ಚಿ.ನಾ.ರಾಮು, ನಾರಾಯಣ ಸ್ವಾಮಿ ಅವರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಅಭ್ಯರ್ಥಿ ಯಾರಾಗಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+