Lok Sabha Elections 2024: ಲೋಕಸಮರದಲ್ಲಿ ಕಮಲ ದಳ ಮೈತ್ರಿ; ಮಂಡ್ಯದಲ್ಲಿ ಯಾರಿಗೆ ಟಿಕೆಟ್?; ಸುಮಲತಾ ಮುಂದಿನ ನಡೆ ಏನು?
ಬೆಂಗಳೂರು, ಜುಲೈ 05:ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಸದ್ಯ ಸೋಲಿನಿಂದ ಚೇತರಿಸಿಕೊಂಡಿದ್ದು, ಅಧಿಕಾರದಲ್ಲಿರುವ ಕಾಂಗ್ರೆಸ್ ಗೆ ಠಕ್ಕರ್ ನೀಡಲು ಹಲವು ತಂತ್ರಗಳ ಮೂಲಕ 2024 ರ ಲೋಕಸಭಾ ಚುನಾವಣೆಗೆ ಮೈತ್ರಿಗೆ ಸಜ್ಜಾಗಿವೆ.
ಹೌದು, ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಎಚ್ಚರಿಕೆಯ ಹೆಜ್ಜೆಯನ್ನ ಇಟ್ಟಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಸಿದ್ದವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಎಚ್‌ಡಿ ಕುಮಾರಸ್ವಾಮಿ ಹಾಗೂ ನಾವು ಭವಿಷ್ಯದಲ್ಲಿ ಜೊತೆಯಾಗಿ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೊಟ್ಟ ಹೇಳಿಕೆ ಮೂಲಕ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಬಗ್ಗೆ ಸುಳಿವನ್ನು ನೀಡಿದ್ದಾರೆ.

ಇತ್ತ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿಯಾದರೆ ಜೆಡಿಎಸ್ ಗೆ 5 ರಿಂದ 6 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟು. ಇನ್ನುಳಿದ ಕ್ಷೇತ್ರದಲ್ಲಿ ಜೆಡಿಎಸ್ ಸಂಪೂರ್ಣ ಬೆಂಬಲವನ್ನು ಬಿಜೆಪಿ ನೀಡಲಿದೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳ ಮೇಲೆ ಒಂದು ಕಣ್ಣಿಟ್ಟಿರುವ ಬಿಜೆಪಿ, ಹಲವು ತಂತ್ರಗಳ ಮೂಲಕ ಜೆಡಿಎಸ್ ಜೊತೆಗೆ ಮೈತ್ರಿಯಾದರೇ ದಳಪತಿಗಳ ಮೂಲಕ ದಾಳ ಉರುಳಿಸಲು ಪ್ಲಾನ್ ನಡೆಸಿದೆ.
ಈಗಾಗಲೇ ಬಿಜೆಪಿ ಜೊತೆ ಒಳಮೈತ್ರಿ ಎಂಬ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ದೇವೇಗೌಡರ ಸೌಹಾರ್ದ ಸಂಬಂಧ ಇದಕ್ಕೆ ಇನ್ನಷ್ಟು ಪುಷ್ಟಿ ಕೊಡುತ್ತದೆ. ಕೇಂದ್ರ ನಾಯಕರ ಮೂಲಕ ದೇವೇಗೌಡರ ಜೊತೆ ಸಂಪರ್ಕ ಸಾಧಿಸಲು ಸಮಯ ಸಿಕ್ಕಾಗಲೆಲ್ಲಾ ಪ್ರಯತ್ನ ನಡೆಸಿದ್ದು, ಅನೇಕ ಪ್ರಮುಖ ಕಾರ್ಯಕ್ರಮ ಗಳಿಗೆ ದೇವೇಗೌಡರಿಗೆ ಒಂದು ಆಹ್ವಾನ ಇದ್ದೇ ಇರುತ್ತದೆ. ದೇವೇಗೌಡರು ಕೂಡಾ ಮಿಸ್ ಮಾಡದೇ ಮೋದಿ ಆಹ್ವಾನಿಸಿದ ಕಾರ್ಯಕ್ರಮ ಗಳಲ್ಲಿ ಭಾಗಿ ಆಗಿರುವ ಹಲವು ಉದಾಹರಣೆಗಳಿವೆ.

ಇತ್ತ ದೆಹಲಿ ಬಿಜೆಪಿ ನಾಯಕರನ್ನ ಸಹ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಜೆಡಿಎಸ್ ಕೇಳಿದ 5 ರಿಂದ 6 ಕ್ಷೇತ್ರಗಳನ್ನ ಬಿಜೆಪಿ ಬಿಟ್‌ಟುಕೊಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದೆ ಎನ್ನಲಾಗಿದ್ದು, ಈ ಬಾರಿಯೂ ಸಹ ಮಂಡ್ಯ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಲಿದೆ. 2019 ರ ಚುನಾವಣೆಯಲ್ಲಿ ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವಿನ ಸಮರ ನಡೆದಿದ್ದು, ಈ ಬಾರಿ ಮಂಡ್ಯ ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣೀಟ್ಟಿದೆ. ಕಳೆದುಕೊಂಡ ಕ್ಷೇತ್ರವನ್ನ ಮತ್ತೆ ಪಡೆಯಬೇಕು ಎಂಬ ತವಕದಲ್ಲಿ ದಳಪತಿಗಳು ಪ್ಲಾನ್ ನಡೆಸಿದ್ದಾರೆ.
ಮಂಡ್ಯದಲ್ಲಿ ಕುಮಾರಸ್ವಾಮಿ ಕುಟುಂಬದ ಪ್ರಬಲ ರಾಜಕೀಯ ಎದುರಾಳಿ ಸುಮಲತಾ ಈಗಾಗಲೇ ಬಿಜೆಪಿ ಗೆ ಬೆಂಬಲ ಸೂಚಿಸಿ, ಅದರ ಜೊತೆಗೇ ಇರುವ ಸುಮಲತಾ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಬೇಕಾಗುತ್ತದೆ. ಅಕಸ್ಮಾತ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿಖಿಲ್ ಕುಮಾರಸ್ವಾಮಿ ಮತ್ತೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆದರೆ, ಮಂಡ್ಯ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಲಿದೆ.
ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಮಂಡ್ಯದಲ್ಲಿ ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೇ ಇತ್ತ ಹಾಲಿ ಸಂಸದೆ ಆಗಿರುವ ಸುಮಲತಾ ನಡೆ ಏನು ಎನ್ನುವ ಪ್ರಶ್ನೆ ಉದ್ಭವವಾಗಿದೆ. ಹಾಲಿ ಸಂಸದರಾಗಿ ಉತ್ತಮವಾಗಿ ತಮ್ಮ ಅವಧಿಯನ್ನ ಪೂರ್ಣಗೊಳಿಸಿರುವ ಸುಮಲತಾ ಮುಂದಿನ 2024 ರ ಚುನಾವಣೆಗೂ ತಯಾರಿಯನ್ನ ನಡೆಸಿದ್ದು, ಲೋಕಸಮರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾದರೇ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ಜೆಡಿಎಸ್ ಅಭ್ಯರ್ಥಿ ಪರ ಸುಮಲತಾ ಪ್ರಚಾರ ನಡೆಸಬೇಕಾಗುತ್ತದೆ.
ಇತ್ತ ಬಿಜೆಪಿ ಹೈಕಮಾಂಡ್ ಸುಮಲತಾ ಅವರಿಗೆ ಟಿಕೆಟ್ ನೀಡದೇ ಇದ್ದಲಿ, ಹೊಸ ಜವಾಬ್ದಾರಿಯನ್ನ ನೀಡುವ ಸಾಧ್ಯತೆ ಇದೆ. ಈ ಹಿಂದೆ ಮಂಡ್ಯ ಸಂಸದರಾದ ಸುಮಲತಾ ಅವರು ಬೆಂಗಳೂರಿನಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತಗಳು ಕೇಳಿಬಂದಿದ್ದು, ಈ ಬಾರಿ ಚುನಾವಣೆಗೆ ಟಿಕೆಟ್ ಕೈ ತಪ್ಪಿದರೇ ಸುಮಲತಾ ಜೆಡಿಎಸ್ ಪರ ಪ್ರಚಾರ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದ್ದು, ಮಂಡ್ಯ ಗೌಡ್ತಿ ನಡೆ ಏನು ಎನ್ನುವುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications