ಅಹಿಂದ ಮತ ಸೆಳೆಯಲು ಸಿದ್ಧವಾಗುತ್ತಿದೆ ಬಿಜೆಪಿ
ಬೆಂಗಳೂರು, ಜ.15 : ಅಹಿಂದ ಸಮಾವೇಶ ಮಾಡಿ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಲು ಬಿಜೆಪಿ ಸಿದ್ಧವಾಗುತ್ತಿದೆ. ಹಿಂದುಳಿದ ವರ್ಗದವರು ಮತ್ತು ದಲಿತರನ್ನು ಪಕ್ಷದತ್ತ ಸೆಳೆಯಲು ಬಿಜೆಪಿ ಫೆಬ್ರವರಿಯಲ್ಲಿ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ತೀರ್ಮಾನಿಸಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ವಿವಿಧ ಜಿಲ್ಲೆಗಳ ಎಸ್.ಸಿ, ಎಸ್.ಟಿ ಘಟಕಗಳೊಂದಿಗೆ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಫೆಬ್ರವರಿ 23ರಂದು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಹಿಂದುಳಿದ ವರ್ಗದವರನ್ನು ಸೆಳೆಯಲು ಬಿಜೆಪಿ ನಿರ್ಧರಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಲು ಸಜ್ಜಾಗಿದೆ. [ಚುನಾವಣೆಗೆ ಯಡಿಯೂರಪ್ಪ ಸ್ಪರ್ಧೆ ಇಲ್ಲ]

ಕಳೆದವಾರ ಅಹಿಂದ ಸಮಾವೇಶ ನಡೆಸುವ ಮೂಲಕ ಸಿಎಂ ಸಿದ್ದರಾಮುಯ್ಯ ಚುನಾವಣಾ ಸಿದ್ಧತೆ ಆರಂಭಿಸಿದ್ದರು. ಸಮಾವೇಶದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸಿದ್ದರು. ಇದಕ್ಕೆಲ್ಲ ಚಿತ್ರದುರ್ಗದ ಸಮಾವೇಶದಲ್ಲಿ ಪ್ರತ್ಯುತ್ತರ ನೀಡಲು ಬಿಜೆಪಿ ನಿರ್ಧರಿಸಿದೆ. ಆದ್ದರಿಂದ ಎಲ್ಲಾ ಜಿಲ್ಲೆಗಳಿಂದ ಆಗಮಿಸುವವರಿಗೂ ಅನುಕೂಲವಾಗಲಿ ಎಂದು ಚಿತ್ರದುರ್ಗದಲ್ಲಿ ಸಮಾವೇಶ ಏರ್ಪಡಿಸಿದೆ.
ಚಿತ್ರದುರ್ಗದ ಸಮಾವೇಶದ ಕುರಿತು ಮಾಹಿತಿ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸುಮಾರು 5 ಲಕ್ಷ ಜನರು ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ಅಂದಾಜಿಸಲಾಗಿದೆ. ಎಲ್ಲಾ ಜಿಲ್ಲೆಯ ಜನರಿಗೆ ಅನುಕೂಲವಾಗಲಿ ಎಂದು ಚಿತ್ರದುರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಸಮಾವೇಶದಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ. ಜ.17ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ನಾಯಕರೊಂದಿಗಿನ ಸಭೆಯಲ್ಲಿ ಸಮಾವೇಶಕ್ಕೆ ಬರುವಂತೆ ಅವರಿಗೆ ಆಹ್ವಾನ ನೀಡುತ್ತೇವೆ ಎಂದು ಈಶ್ವರಪ್ಪ ಹೇಳಿದರು.
ಜ.20ರ ನಂತರ ಅಭ್ಯರ್ಥಿಗಳ ಆಯ್ಕೆ : ಬಿಜೆಪಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಿದೆ. ಉಳಿದ 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆನ್ನು ಜ.20ರ ನಂತರ ಆರಂಭಿಸಲಾಗುತ್ತದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಜ.20ರಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.












Click it and Unblock the Notifications