ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ: ಗುಂಡೂರಾವ್ ಹೇಳಿಕೆಗೆ ಬೊಮ್ಮಾಯಿ ತಿರುಗೇಟು
ಬೆಂಗಳೂರು, ಜೂನ್ 06 : ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರ ಇದೀಗ ಎಮರ್ಜೆನ್ಸಿವರೆಗೂ ಬಂದು ನಿಂತಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್‌ನಿಂದಾಗಿ ರಾಜ್ಯದಲ್ಲಿ ತುರ್ತುಪರಿಸ್ಥಿತಿ ಬರಬಹುದು ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದರು. ಸದ್ಯ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ವಾಗ್ವಾದ ಮುಂದುವರಿದಿದೆ.
ಕಾಂಗ್ರೆಸ್ ಸರ್ಕಾರದ ಗೋಹತ್ಯೆ ನಿಷೇಧ ವಿಚಾರ ಮತ್ತು ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತಾನಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗೋಹತ್ಯೆ ನಿಷೇಧ, ಪಠ್ಯ ಪುಸ್ತಕ ಪರಿಷ್ಕೃರಣೆ, ಸರ್ಕಾರದ ವಿರುದ್ಧ ಮಾತನಾಡಿದ್ರೆ ಜೈಲಿಗೆ ಹಾಕುತ್ತೇವೆ ಎಂದು ಕೆಲ ಸಚಿವರು ಹೇಳಿದ್ದಾರೆ. ನಮ್ಮ ಅಭಿಪ್ರಾಯಕ್ಕೆ ಸಹಮತ ಇಲ್ಲದವರ ಧ್ವನಿಯನ್ನು ಹತ್ತಿಕ್ಕುವ ಪ್ರವೃತ್ತಿಯಲ್ಲಿ ಮಾತನಾಡುತ್ತಿದ್ದಾರೆ. ಇದೆಲ್ಲ ನೋಡಿದರೆ ಅತೀ ಶೀಘ್ರದಲ್ಲಿ ಕರ್ನಾಟಕದಲ್ಲಿ ಎಮರ್ಜೆನ್ಸಿ ಬರುತ್ತದೆಯೇನೋ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದ ದಿನೇಶ್ ಗುಂಡೂರಾವ್ ಅವರು, ಬೊಮ್ಮಾಯಿಯವರೇ ಯಾವ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೀರಿ?. ತನ್ನ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ತನಿಖಾ ಏಜೇನ್ಸಿಗಳನ್ನು, ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಾಕ್ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವ ನಿಮ್ಮ ಮೋದಿ ಸರ್ಕಾರದ ನಡೆ ನಿಮಗೆ ತುರ್ತುಪರಿಸ್ಥಿತಿ ಎಂದು ಅನ್ನಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಂಗದ ಪರಿಶೀಲನೆಯಲ್ಲಿ ಎಲ್ಲ ನಡೆಯುತ್ತದೆ
ಈ ಕುರಿತು ಮರುಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಕೇಂದ್ರದಲ್ಲಿ ಇಷ್ಟು ದಿನ ಅಪರಾಧಗಳನ್ನು ಮಾಡಿ ರಾಜಕೀಯ ರಕ್ಷಣೆಯನ್ನು ಯುಪಿಎ ಕಾಲದಲ್ಲಿ ಪಡೆಯುತ್ತಿದ್ದರು. ಈಗ ಕೇಂದ್ರ ಸರ್ಕಾರ ಅಪರಾಧ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡಿದೆ. ಇವೆಲ್ಲವೂ ಕೂಡ ನ್ಯಾಯಾಂಗದ ಪರಿಶೀಲನೆಯಲ್ಲಿ ನಡೆಯುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಇಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಹದಿನೈದು ದಿನಗಳು ಕಳೆದಿಲ್ಲ ಬರಿ ಮಾತನಾಡಿದರೆ ಜೈಲಿಗೆ ಹಾಕುತ್ತೇವೆ ಎಂದು ಮಂತ್ರಿಗಳ ಬಾಯಲ್ಲಿ ಬರುತ್ತಿರುವುದು, ವಿರೋಧಿಗಳನ್ನು ನಿಮ್ಮ ಅಧಿಕಾರ ಬಲದಿಂದ ದಮನ ಮಾಡುವ ತಂತ್ರ 1975 ರ ಎಮರ್ಜನ್ಸಿಯನ್ನು ನೆನಪಿಸುತ್ತದೆ.
ಆರಂಭದಲ್ಲಿಯೇ ಅಧಿಕಾರದ ಮದದಿಂದ ಜನ ಕೊಟ್ಟ ಅಧಿಕಾರ ವಿರೋಧಿಗಳ ದಮನಕ್ಕಾಗಿ ಇದೆ ಎಂದು ತಾವು ಭಾವಿಸಿದ್ದರೆ ಖಂಡಿತವಾಗಿಯೂ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಅವರು ಕಾಂಗ್ರೆಸ್ ನಾಯಕರನ್ನು ಎಚ್ಚರಿಸಿದರು.
ಪಶುಸಂಗೋಪನಾ ಸಚಿವರ ಸೇರಿದಂತೆ ಕಾಂಗ್ರೆಸ್ ನಾಯಕರು ಗೋಹತ್ಯೆ ನಿಷೇಧ ಕಾಯ್ದೆ, ಬಿಜೆಪಿಯ ಪಠ್ಯ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಮುಂತಾದವರು ವಾಪಸ್, ರದ್ದು ಚಿಂತನೆ ಕುರಿತು ಮಾತನಾಡಿದ್ದಾರೆ. ಈ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications