ವರುಣಾದಲ್ಲಿ ಯತೀಂದ್ರ ಅವರ ಗೆಲುವು ಸುಲಭವೇ?
ಮೈಸೂರು, ಫೆಬ್ರವರಿ 7 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರು ಜಿಲ್ಲೆಯ ವರುಣಾ. ಇತ್ತೀಚೆಗೆ ರಚನೆಯಾದ ವರುಣಾ ಕ್ಷೇತ್ರ ಕಂಡಿರುವುದು ಎರಡು ಚುನಾವಣೆಯನ್ನು ಮಾತ್ರ. ರಾಜ್ಯದ ಮುಖ್ಯಮಂತ್ರಿ ಕ್ಷೇತ್ರದ ಹಾಲಿ ಶಾಸಕರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾಗಿ ಮೈಸೂರಿನ ಬನ್ನೂರು ಕ್ಷೇತ್ರವನ್ನು ತೆಗೆದು ಹಾಕಿ, ಬನ್ನೂರಿನ ಹಲವು ಭಾಗ, ಮೈಸೂರು ತಾಲೂಕಿನ ಕೆಲ ಭಾಗ, ವರುಣ ಸರ್ಕಲ್, ನಂಜನಗೂಡಿನ ಕೆಲ ಭಾಗ, ಟಿ.ನರಸೀಪುರ ತಾಲೂಕಿನ ಕೆಲ ಭಾಗಗಳನ್ನು ಒಳಗೊಂಡಂತೆ ವರುಣಾ ವಿಧಾನಸಭಾ ಕ್ಷೇತ್ರವನ್ನು ರಚನೆ ಮಾಡಲಾಯಿತು.
ಸಿದ್ದರಾಮಯ್ಯ ಅವರು 2006ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಐತಿಹಾಸಿಕ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 250 ಮತಗಳ ಅಂತರದಿಂದ ಗೆದ್ದರು.
ಬಳಿಕ ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಾವಣೆ ಮಾಡುವ ನಿರ್ಧಾರವನ್ನು ಕೈಗೊಂಡರು. 2008 ಹಾಗು 2013 ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.
2013ರಲ್ಲಿ ಇದು ನನ್ನ ಕೊನೆ ಚುನಾವಣೆ ಎಂದಿದ್ದರು. ಈಗ ಸಿದ್ದರಾಮಯ್ಯ ಅವರ ವರಸೆ ಬದಲಾಗಿದೆ. ವರುಣ ಕ್ಷೇತ್ರವನ್ನು ತಮ್ಮ ಕಿರಿಯ ಪುತ್ರ ಯತೀಂದ್ರಗೆ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರದಿಂದ ಈ ಬಾರಿ ಕಣಕ್ಕಿಳಿಯಲಿದ್ದಾರೆ...

ರಾಕೇಶ್ ಸಿದ್ದರಾಮಯ್ಯ
ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ವರುಣಾ ಕ್ಷೇತ್ರದ ಉಸ್ತುವಾರಿಯನ್ನು ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ವಹಿಸಿಕೊಂಡಿದ್ದರು. ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದ ರಾಕೇಶ್, ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. 2016ರಲ್ಲಿ ರಾಕೇಶ್ ಅಕಾಲಿಕವಾಗಿ ಮರಣ ಹೊಂದಿದ ನಂತರ ಕ್ಷೇತ್ರದ ಜವಾಬ್ದಾರಿಯನ್ನು ಯತೀಂದ್ರ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದಾರೆ. ವೈದ್ಯಕೀಯ ವೃತ್ತಿಯನ್ನು ಬಿಟ್ಟು ಚುನಾವಣಾ ರಾಜಕಾರಣಕ್ಕೆ ಅವರು ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಕಳೆದೊಂದು ವರ್ಷದಿಂದ ಕ್ಷೇತ್ರದ ಬಹುತೇಕ ಎಲ್ಲ ಸರ್ಕಾರಿ ಹಾಗು ಖಾಸಗಿ ಕಾರ್ಯಕರ್ಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಜಕಾರಣಕ್ಕೆ ಸೂಕ್ತವಲ್ಲ
ಯತೀಂದ್ರ ಅವರದ್ದು ಅತ್ಯಂತ ಮೃದು ಸ್ವಭಾವದ ವ್ಯಕ್ತಿತ್ವ. ಎಂ.ಡಿ. ಇನ್ ಪ್ಯಾಥಾಲಜಿ ಮುಗಿಸಿ ತಮ್ಮದೇ ಖಾಸಗಿ ಡಯಗ್ನಾಸ್ಟಿಕ್ ಸಂಸ್ಥೆಯೊಂದನ್ನು ನಡೆಸುತ್ತಿದ್ದವರು. ತಂದೆ ಮುಖ್ಯಮಂತ್ರಿಯಾದರೂ, ಅಣ್ಣ ಹಾಗು ತಂದೆಯ ರಾಜಕಾರಣದ ಪ್ರಭಾವವಿದ್ದರೂ, ತಾವಾಯ್ತು ತಮ್ಮ ವೈದ್ಯಕೀಯ ವೃತ್ತಿಯಾಯ್ತು ಎಂಬಂತಿದ್ದರು. ಕೌಟುಂಬಿಕ ಪರಿಸ್ಥಿತಿ ರಾಜಕಾರಣಕ್ಕೆ ತಂದು ನಿಲ್ಲಿಸಿದೆ. ಸಿದ್ದರಾಮಯ್ಯನವರ ಆಪ್ತ ವಲಯದಲ್ಲೇ ಅನೇಕ ಬಾರಿ ಯತೀಂದ್ರ ರಾಜಕಾರಣಕ್ಕೆ ಸೂಕ್ತವಲ್ಲವೆಂಬ ಚರ್ಚೆಗಳೂ ನಡೆದಿವೆ ಎಂಬ ಮಾತುಗಳಿವೆ.

ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಯಾರು?
ಸಿದ್ದರಾಮಯ್ಯನವರು ಕಳೆದೆರಡೂ ಚುನಾವಣೆಗಳಲ್ಲೂ ಒಳ್ಳೆಯ ಅಂತರದಿಂದಲೇ ಗೆದ್ದು ಬಂದಿದ್ದಾರೆ. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ, ಒಂದು ಕಾಲದ ಯಡಿಯೂರಪ್ಪನವರ ಆಪ್ತ ಸಹಾಯಕ ಕಾಪು ಸಿದ್ದಲಿಂಗಸ್ವಾಮಿಯ ವಿರುದ್ದ 29,641 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಬಾರಿಯ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಹೆಸರು ಕೇಳಿ ಬರುತ್ತಿದೆ. ಕಾಪು ಸಿದ್ದಲಿಂಗಸ್ವಾಮಿಯೇ ಸ್ಪರ್ಧಿಸುವ ಸಾಧ್ಯತೆ ಇದೆ.

ಜೆಡಿಎಸ್ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ
ಕ್ಷೇತ್ರದಲ್ಲಿ ಜೆಡಿಎಸ್ ಹೆಚ್ಚು ಪ್ರಬಲವಾಗಿಲ್ಲ, ಕೆಲವು ತಿಂಗಳ ಹಿಂದೆಯಷ್ಟೇ ಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯಾ ಪಕ್ಷಕ್ಕೆ ಮರಳಿದ್ದಾರೆ. ಅವರ ಹೆಸರು ಕೇಳಿ ಬಂದಿದ್ದು, ಇನ್ನೂ ಅಂತಿಮವಾಗಿಲ್ಲ.

ಜಾತಿವಾರು ಲೆಕ್ಕಾಚಾರ
ಲಿಂಗಾಯುತರು, ದಲಿತರು, ನಾಯಕರು, ಕುರುಬ ಸಮುದಾಯದವರು ಹಾಗೂ ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರದಲ್ಲಿ ಹೆಚ್ಚಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಂತೆ ಕಾಣುತ್ತಿದೆ.

ಡಾ. ಯತೀಂದ್ರ ಅವರಿಗೆ ಸಹಾಯಕ
ಮುಖ್ಯಮಂತ್ರಿಗಳ ಮಗ, ಕಾರ್ಯಕರ್ತರ ದೊಡ್ಡ ಪಡೆ, ಸಂಪನ್ಮೂಲದ ಕೊರತೆಯಿಲ್ಲದಿರುವುದು, ಸಿದ್ದರಾಮಯ್ಯ ಮೇಲಿನ ಅಭಿಮಾನ ಡಾ.ಯತೀಂದ್ರ ಅವರಿಗೆ ವರವಾಗುವ ಸಾಧ್ಯತೆ ಇದೆ. ಲಿಂಗಾಯತ ಮತದಾರರ ಮನದಲ್ಲಿ ಸಿದ್ದರಾಮಯ್ಯ ತಮ್ಮ ಸಮುದಾಯವನ್ನು ಒಡೆದು ಆಳುವ ನೀತಿ ತಾಳಿದ್ದಾರೆಂದು ವಿಶ್ಲೇಷಿಸಿ ಅಸಮಾಧಾನಗೊಂಡಿರುವುದು ಹಿನ್ನಡೆ ಆಗಬಹುದು.

ಬಿಜೆಪಿ ಅಭ್ಯರ್ಥಿ ಬಲವೇನು?
ಲಿಂಗಾಯತ ಅಭ್ಯರ್ಥಿ, ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಲ್ಲಾ ಸಮುದಾಯದವರು ಮತ ಹಾಕಿದ್ದರು. ಆದರೆ, ಈ ಬಾರಿ ಅಂತಹ ಸನ್ನಿವೇಶವಿಲ್ಲ ಹಾಗೂ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ಕಡೆಗಣಿಸಿ, ಮತ್ತೊಂದು ಕ್ಷೇತ್ರದೆಡೆಗೆ ಮುಖ ಮಾಡಿರುವುದು ಬಿಜೆಪಿಗೆ ಸಹಾಯವಾಗಬಹುದು.












Click it and Unblock the Notifications