ಬಾಡಿಗೆದಾರರಿಗೆ ಉಚಿತ ವಿದ್ಯುತ್ ಗಗನಕುಸುಮ: ಗೃಹಜ್ಯೋತಿ ಕಂಡಿಷನ್‌ಗೆ ಬಿಜೆಪಿ ಕೆಂಡ
ಬೆಂಗಳೂರು, ಜೂನ್ 09: ಬೆಂಗಳೂರಿನಂತಹ ನಗರಗಳಲ್ಲಿ ಕೆಲಸವರಸಿ ಬರುವ ಅನೇಕರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ. ಅಂತವರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಷರತ್ತು ವಿಧಿಸುವ ಮೂಲಕ ಉಚಿತ ವಿದ್ಯುತ್ ಗಗನ ಕುಸುಮವನ್ನಾಗಿ ಮಾಡಿದೆ ಎಂದು ಕರ್ನಾಟಕ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನದಿ ದಾಟಿದ ಮೇಲೆ ಅಂಬಿಗ ಯಾಕೆ ಎಂಬ ಧೋರಣೆಯಲ್ಲೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೆ. ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡ ಹೆಚ್ಚಿನವರು ಬಾಡಿಗೆ ಮನೆಗಳಲ್ಲಿ ವಾಸವಾಗಿರುತ್ತಾರೆ. ಅವರ ಉಚಿತ ವಿದ್ಯುತ್ ಸಿಗದಂತೆ ಸರ್ಕಾರ ಷರತ್ತು ವಿಧಿಸಿದೆ ಎಂದು ದೂರಿದೆ.

ಅಷ್ಟೇ ಅಲ್ಲ ಹೊಸದಾಗಿ ಮನೆ ಕಟ್ಟಿದವರಿಗೆ ಈ 'ಗೃಹಜ್ಯೋತಿ' ಯೋಜನೆ ಅಸ್ಪೃಶ್ಯದಂತಾಗಿದೆ. ಉಚಿತ ವಿದ್ಯುತ್ ಬಿಡಿ, ಮೊದಲಿಗೆ ವಿದ್ಯುತ್ ಪೂರೈಸಿ ಎಂದು ರಾಜ್ಯದ ಜನರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಹಿಟ್ಲರ್ ಸರ್ಕಾರ ದಿನಕ್ಕೊಂದು ಕಂಡಿಷನ್ ಹೇರುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಬಾಡಿಗೆದಾರರಿಗೆ ಉಚಿತ ವಿದ್ಯುತ್ ಬಗ್ಗೆ ಚರ್ಚೆ
ಕರ್ನಾಟಕದಲ್ಲಿ 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುವ ಗೃಹಜ್ಯೋತಿ ಯೋಜನೆಗೆ ಅರ್ಹರಾದವರು 2 ಕೋಟಿಯಷ್ಟಿದ್ದಾರೆ. 2 ಲಕ್ಷ ಗ್ರಾಹಕರು ಮಾತ್ರ 200 ಯೂನಿಟ್ ಗಿಂತ ಹೆಚ್ಚು ಬಳಸುತ್ತಾರೆ. ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಅರ್ಜಿ ಹಾಕಲು ಇತ್ತೀಚೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೂಚಿಸಿದ್ದಾರೆ.
ಸೇವಾ ಸಿಂಧು ಪೋರ್ಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅದರೊಂದಿಗೆ ಒಂದು ಪ್ರತ್ಯೇಕ ಮೊಬೈಲ್ ಆ್ಯಪ್ ಬಿಡುಗಡೆ ಮಾಡುತ್ತೇವೆ. ಸ್ವಂತ ಮನೆ ಇರಲಿ, ಬಾಡಿಗೆ ಮನೆ ಇರಲಿ ಕರಾರುಪತ್ರ ಬೇಕು ಎಂದು ಅವರು ಹೇಳಿದ್ದಾರೆ.

ನೂತನವಾಗಿ ಮನೆ ಕಟ್ಟಿದವರಿಗೆ ಹಾಗೂ ಕಳೆದ 3-4 ತಿಂಗಳಿನಿಂದ ಬಾಡಿಗೆ ಇರುವವರಿಗೆ ಗೃಹ ಜ್ಯೋತಿ ಯೋಜನೆ ಸದ್ಯಕ್ಕೆ ಸಿಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ಮೂಲಕ ಚುನಾವಣೆ ಪೂರ್ವದಲ್ಲಿ ಹೇಳಿದ್ದ ಮಾತುಗಳನ್ನು ನೀಡಿದ ಭರವಸೆಯನ್ನು ಮರೆತಂತಿದೆ. ಹೇಳಿದಂತೆ ಎಲ್ಲರಿಗೂ ಯೋಜನೆ ನೀಡದೆ ಮೋಸ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಬಾಡಿಗೆದಾರರಿಗೂ ಗೃಹಜ್ಯೋತಿ ಯೋಜನೆಯ ಲಾಭ ಸಿಗುವಂತೆ ಮಾಡಲಾಗುವುದು. ಈ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ಆದಷ್ಟು ಶೀಘ್ರವೇ ಆ ಬಗ್ಗೆ ಸ್ಪಷ್ಟನೆ ಕೊಡುತ್ತೇವೆ. ಇನ್ನು ಬೇರೆ ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ವಾಸಿಸುವವರಿಗೆ ಈ ಸೌಲಭ್ಯದ ಅಗತ್ಯ ಇದೆ ಎಂದು ಮನಗಂಡಿದ್ದೆವೆ. ಆದರೆ ಆಧಾರ್ ವಿಳಾಸ ಇಲ್ಲಿಯ ವಿಳಾಸಕ್ಕೆ ಬದಲಾಯಿಸಿಕೊಳ್ಳಬೇಕು. ಅದು ಇಲ್ಲಿದ್ದರೆ ಬಾಡಿಗೆ ಕರಾರುಪತ್ರ ಕಡ್ಡಾಯವಾಗಿ ಇರಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಸದ್ಯ ಈಗಾಗಲೇ ಬಿಜೆಪಿ, ಆಮ್ ಆದ್ಮಿ ಪಕ್ಷ ಸೇರಿದಂತೆ ವಿಪಕ್ಷಗಳ ನಾಯಕರು ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿಲ್ಲ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದು ಈಗ ಷರತ್ತು ವಿಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications