ಅಹಿಂದ ಮಕ್ಕಳಿಗೆ ಪ್ರವಾಸ, ಸಿದ್ದುಗೆ ಪ್ರತಿಪಕ್ಷಗಳ ಗುದ್ದು!
ಬೆಂಗಳೂರು, ನ. 15 : ಶಾದಿಭಾಗ್ಯ ಮತ್ತು ಮೂಢನಂಬಿಕೆ ನಿಷೇಧ ಕಾಯ್ದೆಯ ನಂತರ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದಿರುವ ಶಾಲಾ ಮಕ್ಕಳಿಗೆ ಕರ್ನಾಟಕ ಪ್ರವಾಸ ದರ್ಶನ ಪ್ರವಾಸ ಕಾರ್ಯಕ್ರಮ ಮತ್ತೊಂದು ವಿವಾದ ಹುಟ್ಟುಹಾಕಿದೆ. ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಜಾರಿಗೆ ತರುತ್ತಿರುವ ಸರ್ಕಾರದ ಕ್ರಮವನ್ನು ವಿಪಕ್ಷಗಳು ವಿರೋಧಿಸಿವೆ.
ಸರ್ಕಾರದ ಆದೇಶದಂತೆ ಪ್ರವಾಸೋದ್ಯಮ ಇಲಾಖೆ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಮತ್ತು ಸರ್ಕಾರಿ ವಸತಿ ಶಾಲೆಗಳ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ 'ಕರ್ನಾಟಕ ದರ್ಶನ' ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಇದು ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಅಹಿಂದ ವರ್ಗದ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸದ ಕುರಿತು ನ.6 ರಂದು ಅಧಿಕೃತ ಅಧಿಸೂಚನೆ ಹೊರಡಿಸಿರುವ ಸರ್ಕಾರ, ಇದಕ್ಕಾಗಿ ಪ್ರಸಕ್ತ ಸಾಲಿನ ಅನುದಾನದಲ್ಲಿ ಒಟ್ಟು 3.15 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಅಂದರೆ, ಒಟ್ಟು 4 ದಿನಗಳ ಪ್ರವಾಸಕ್ಕೆ ಪ್ರತಿ ವಿದ್ಯಾರ್ಥಿಗೆ ಸರ್ಕಾರದಿಂದ 3,500 ರೂ. ವೆಚ್ಚ ಮಾಡಲು ನಿರ್ಧರಿಸಿದೆ.
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕೆಜೆಪಿ ಈ ಪ್ರವಾಸ ಭಾಗ್ಯ ಯೋಜನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇದರ ವಿರುದ್ಧ ಇದೇ ತಿಂಗಳ 25ರಿಂದ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಪ್ರವಾಸ ಭಾಗ್ಯದ ಕುರಿತ ಮತ್ತಷ್ಟು ಮಾಹಿತಿ

ಯಾರಿಗೆ ಪ್ರವಾಸ
ಸರ್ಕಾರದ ಆದೇಶದಂತೆ ಪ್ರವಾಸೋದ್ಯಮ ಇಲಾಖೆ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಮತ್ತು ಸರ್ಕಾರಿ ವಸತಿ ಶಾಲೆಗಳ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ 'ಕರ್ನಾಟಕ ದರ್ಶನ' ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ.

ಎಷ್ಟು ಮಕ್ಕಳು
ಈ ಯೋಜನೆಗಾಗಿ ಸರ್ಕಾರ ಪ್ರತಿ ಜಿಲ್ಲೆಗೆ 10.50 ಲಕ್ಷ ರೂ.ಗಳನ್ನು ನಿಗದಿಪಡಿಸಿದೆ. ಒಟ್ಟು 30 ಜಿಲ್ಲೆಗಳಿಂದ 9,000 ಸರ್ಕಾರಿ ಶಾಲೆಗಳ ಮತ್ತು ಸರ್ಕಾರಿ ವಸತಿ ಶಾಲೆಗಳಲ್ಲಿನ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳು ಪ್ರವಾಸ ಹೋಗಬಹುದು.

ಪ್ರವಾಸ ವೆಚ್ಚ ಎಷ್ಟು?
ಕರ್ನಾಟಕ ಸರ್ಕಾರ ಅಹಿಂದ ಮಕ್ಕಳ ಕರ್ನಾಟಕ ಪ್ರವಾಸಕ್ಕಾಗಿ ಪ್ರಸಕ್ತ ಸಾಲಿನಲ್ಲಿ 3.15 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಒಟ್ಟು 4 ದಿನಗಳ ಪ್ರವಾಸಕ್ಕೆ ಪ್ರತಿ ವಿದ್ಯಾರ್ಥಿಗೆ ಸರ್ಕಾರದ ವತಿಯಿಂದ 3,500 ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ.

ಬಿಜೆಪಿ ವಿರೋಧ
ಮಕ್ಕಳ ಪ್ರವಾಸ ಭಾಗ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಸುರೇಶ್‌ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತೂಂದು ದುಸ್ಸಾಹಸಕ್ಕೆ ಕೈಹಾಕಿದೆ. ಬ್ರಿಟಿಷರನ್ನೂ ನಾಚಿಸುವಂತೆ ಸಿದ್ದರಾಮಯ್ಯ ಅವರೂ ಸಮಾಜವನ್ನು ಒಡೆದು ಹಾಕಿ ಆಳುವುದೇ ತಮ್ಮ ನೀತಿಯೆಂದು ಭಾವಿಸುವ ಮೂಲಕ ಮುಗ್ಧ ಮನಸ್ಸಿನ ಶಾಲಾ ಮಕ್ಕಳನ್ನು ಬಲಿ ಪಡೆಯುತ್ತಿದ್ದಾರೆ. ಈ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ದ್ವೇಷಾಸೂಯೆಗೆ ಪ್ರೇರಣೆ
ಶಾದಿಭಾಗ್ಯ ಯೋಜನೆ ವಿಸ್ತರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹ ಯೋಜನೆಯನ್ನು ಖಂಡಿಸಿದ್ದಾರೆ. ಧರಣಿ ಸ್ಥಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇವಲ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಶಾಲಾ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡುವ ಈ ಯೋಜನೆ ಮಕ್ಕಳಲ್ಲಿ ಭೇದ ಭಾವ ಮೂಡಿಸುವುದರ ಜತೆಗೆ ದ್ವೇಷ ಮತ್ತು ಅಸೂಯೆಗೂ ಪ್ರೇರೇಪಣೆ ನೀಡುತ್ತದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications