ಸಚಿವ ಅಶ್ವತ್ಥ್ ನಾರಾಯಣ್ ಅಶ್ವಸ್ಥನಾಗಿದ್ದಾನೆ: ಇಂತವರೆಲ್ಲ ರಾಜಕೀಯದಲ್ಲಿ ಇರಲು ಲಾಯಕ್ಕಾ?: ಸಿದ್ದರಾಮಯ್ಯ
ಅಭಿವೃದ್ಧಿಯನ್ನ ಬಿಟ್ಟು ನಳಿನ್ ಕುಮಾರ್ ಕಟೀಲ್ ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತಾ ಬಿಜೆಪಿಗರಿಗೆ ಹೇಳುತ್ತಾನೆ. ಟಿಪ್ಪು ಸುಲ್ತಾನ್ ವರ್ಸಸ್ ಅಬ್ಬಕ್ ಅಂತ ಅಮಿತ್ ಷಾ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಕೊಪ್ಪಳ,ಫೆಬ್ರವರಿ18: ಸಚಿವ ಅಶ್ವತ್ಥ್ ನಾರಾಯಣ್ ಅಶ್ವಸ್ಥನಾಗಿದ್ದಾನೆ. ಟಿಪ್ಪು ಸುಲ್ತಾನ್ ನನ್ನು ಮುಗಿಸಿದಂತೆ ಸಿದ್ದರಾಮಯ್ಯನನ್ನು ಮುಗಿಸಿ ಅಂತಾ ಹೇಳುತ್ತಾನೆ, ಇಂತವರೆಲ್ಲ ರಾಜಕೀಯದಲ್ಲಿ ಇರಲು ಲಾಯಕ್ಕಾ? ಇಂತವರನ್ನು ಸೋಲಿಸಿ ಮನೆಗೆ ಕಳುಹಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಕೊಪ್ಪಳದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಚರ್ಚೆಯಾಗ ಬೇಕಿರುವುದು ಅಭಿವೃದ್ಧಿ. ಆದರೆ, ಅದನ್ನು ಬಿಟ್ಟು ಕಟೀಲ್, ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತಾ ಬಿಜೆಪಿಗರಿಗೆ ಹೇಳುತ್ತಾನೆ. ಟಿಪ್ಪು ಸುಲ್ತಾನ್ ವರ್ಸಸ್ ಅಬ್ಬಕ್ ಅಂತ ಅಮಿತ್ ಷಾ ಹೇಳುತ್ತಾನೆ. ಯಾವುದೇ ಕಾರಣಕ್ಕೂ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬರಬಾರದು ಎಂದು ಕರೆ ನೀಡಿದರು.

ರಾಜ್ಯವನ್ನು ಹಾದಿ ತಪ್ಪಿ ಸುತ್ತಿರುವ ಕೋಮುವಾದಿ ಬಿಜೆಪಿ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿ. ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಬಿಜೆಪಿ, ಜೆಡಿಎಸ್ ನ ಹಲವರು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಬಗ್ಗೆ ಜನತೆಗೆ ಭ್ರಮ ನಿರಸನವಾಗಿದೆ. ಕೋಮುವಾದಿ ಬಿಜೆಪಿ ದೂರವಿಡಲು ಕಳೆದ ಬಾರಿ ನಾವು 80 ಸ್ಥಾನ ಪಡೆದಿದ್ದರೂ 37 ಸ್ಥಾನ ಪಡೆದಿದ್ದ ಜೆಡಿಎಸ್ ಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದೇವು. ಆದರೆ, ಜೆಡಿಎಸ್ ಕೂಡ ಹೇಳಿ ಕೊಳ್ಳುವಂತ ಕೆಲಸ ಮಾಡಲಿಲ್ಲ. ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ದ್ವೇಷದ ರಾಜಕಾರಣ,
ಸಾಮರಸ್ಯವನ್ನು ಹಾಳು ಮಾಡುತ್ತಿದೆ ಎಂದು ಕಿಡಿಕಾರಿದರು.
ಜನ ಪರಸ್ಪರ ಹೊಡೆದಾಡಿದರೇ ನಮಗೆ ಮತ ಸಿಗುತ್ತದೆ ಎನ್ನುವುದು ಬಿಜೆಪಿಗರ ಆಶಯವಾಗಿದೆ. ರಾಜಕಾರಣ ಮಾಡೋದು ಜನರ ಸೇವೆಗಾಗಿ, ಸ್ವಾರ್ಥಕ್ಕಾಗಿ ಅಲ್ಲ. ಆದರೆ, ಬಿಜೆಪಿಗರು ಸಮಾಜ ಸೇವೆ ಮರೆತಿದ್ದಾರೆ. ಚುನಾವಣಾ ಇನ್ನೇನು ಎರಡೇ ತಿಂಗಳು ಇರೋದು. ಯಲಬುರ್ಗಾದಲ್ಲಿ ರಾಯರಡ್ಡಿ ಸೋಲುತ್ತಾರೆ ಎಂದರೇ ಉಯಿಸಿಕೊಳ್ಳಲು ಸಾಧ್ಯವಾಗಲ್ಲ. ಕರ್ನಾಟಕದಲ್ಲಿ ಯಾರಾದರೂ ಕ್ಷೇತ್ರಕ್ಕೆ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದರೇ ಅದು ರಾಯರಡ್ಡಿ ಮಾತ್ರ. ಆದರೂ ಯಾಕೆ ನೀವೆಲ್ಲ ಅವರನ್ನು ಸೋಲಿಸಿದ್ರಿ ಅಂತ ಗೊತ್ತಾಗಲಿಲ್ಲ. ರಾಯರಡ್ಡಿ ಕೂಡ ಮತ್ತೆ ಗೆಲ್ತಾರೆ, ಅವರಿಗೆ ಮತ್ತೆ ಒಳ್ಳೆಯ ಭವಿಷ್ಯವಿದೆ. ನಾವೆಲ್ಲ ಸೇರಿ ಕರ್ನಾಟಕದಲ್ಲಿ ಒಳ್ಳೆಯ ಸರಕಾರ ಕೋಡೋಣ ಎಂದು ಹೇಳಿದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಭವಿಷ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯ ಅಭಿವೃದ್ಧಿಯತ್ತ ಮತ್ತೆ ಹೆಜ್ಜೆ ಹಾಕಲಿದೆ. ಮಾರ್ಚ್ 17, 18 ರಂದು ಮತ್ತೆ ಯಲಬುರ್ಗಾ ಕ್ಕೆ ಸಿದ್ದರಾಮಯ್ಯ ಬರಲಿದ್ದಾರೆ. ವೀರನಗೌಡ ಬಳೂಟಗಿ ಅವರು ಪುನಹ ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅವರಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ ಎಂದರು.












Click it and Unblock the Notifications