ಬಿಜೆಪಿಗೆ ತಾಕತ್ತಿದ್ದರೆ ಟೋಲ್ ಮುಕ್ತ ಹೆದ್ದಾರಿ ಮಾಡಲಿ: ಕಾಂಗ್ರೆಸ್ ಸವಾಲು
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನ 'ಬಿಟ್ಟಿ ಭಾಗ್ಯ' ಎಂದು ದೂರುತ್ತಿದ್ದ ಬಿಜೆಪಿಗೆ ಈಗ ಕಾಂಗ್ರೆಸ್ ಹೊಸ ಸವಾಲು ಹಾಕಿದೆ. ಬೆಂಗಳೂರು & ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ದರ ಹೆಚ್ಚಾದ ನಂತರ ವಾಹನ ಸವಾರರು & ಜನರ ಆಕ್ರೋಶ ಹೆಚ್ಚಾಗಿದೆ. ಈ ಹೊತ್ತಲ್ಲಿ ಟೋಲ್ ಮುಕ್ತ ಹೆದ್ದಾರಿ ಮಾಡಿ ಅಂತಾ BJPಗೆ ಸವಾಲು ಹಾಕಿದೆ ಕಾಂಗ್ರೆಸ್.
ಬೆಂಗಳೂರು ಮತ್ತು ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ದರವನ್ನು ದಿಢೀರ್ ಶೇ.22ರಷ್ಟು ಹೆಚ್ಚಿಸಲಾಗಿದೆ. ಕಾರು, ವ್ಯಾನ್, ಜೀಪ್ ಏಕಮುಖ ಸಂಚಾರಕ್ಕೆ ಟೋಲ್ ಬೆಲೆಯನ್ನ ಈಗ 165 ರೂಪಾಯಿಗೆ ಏರಿಕೆ ಮಾಡಿ ಬರೋಬ್ಬರಿ 30 ರೂಪಾಯಿ ಹೆಚ್ಚಳ ಮಾಡಲಾಗಿದೆ. ಲಘು ವಾಹನ & ಮಿನಿ ಬಸ್‌ಗಳ ಏಕಮುಖ ಟೋಲ್ 220 ರೂಪಾಯಿಯಿಂದ 270 ರೂಪಾಯಿಗೆ ಅಂದರೆ 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಜನರು ರೊಚ್ಚಿಗೆದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುವಾಗ BJPಗೆ ಸವಾಲು ಎಸೆದಿದೆ ಕಾಂಗ್ರೆಸ್.

ಟೋಲ್ ರಹಿತ ಹೆದ್ದಾರಿ ಮಾಡಲಿ!
ಗ್ಯಾರಂಟಿ ವಿಚಾರಕ್ಕೆ ಫೈಟ್ ಮಾಡುತ್ತಿದ್ದ ಬಿಜೆಪಿ & ಕಾಂಗ್ರೆಸ್ ನಾಯಕರಿಗೆ ಈಗ ಹೊಸ ವಿಚಾರ ಸಿಕ್ಕಂತಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು 'ಬಿಟ್ಟಿ ಭಾಗ್ಯ' ಎನ್ನುತ್ತಾ ದೂರುತ್ತಿದ್ದ ಬಿಜೆಪಿ ವಿರುದ್ಧ ಈಗ ಟೋಲ್ ದರ ಏರಿಕೆ ಅಸ್ತ್ರ ಸಿಕ್ಕಿದೆ. ದಿಢೀರ್ ಟೋಲ್ ಹೆಚ್ಚಳಕ್ಕೆ ಜನ ಆಕ್ರೋಶ ವ್ಯಕ್ತಪಡಿಸುವಾಗ ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡಿ, ಬಿಜೆಪಿಗೆ ತಾಕತ್ತಿದ್ರೆ ಟೋಲ್ ಮುಕ್ತ ಹೆದ್ದಾರಿ ಮಾಡಲು ಮೋದಿಯವರಲ್ಲಿ ಆಗ್ರಹಿಸಲಿ ಅಂತಾ ಸವಾಲು ಎಸೆದಿದೆ. ಹಾಗಾದ್ರೆ ಕಾಂಗ್ರೆಸ್ ಟ್ವೀಟ್‌ನಲ್ಲಿ ಏನಿದೆ? ಮುಂದೆ ಓದಿ.
ಕರ್ನಾಟಕ ಬಿಜೆಪಿ ತಾಕತ್ ಪ್ರಶ್ನೆ!
ಅಷ್ಟಕ್ಕೂ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೊದಲು ಬೆಂಗಳೂರು & ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಲಾಗಿತ್ತು. ಆದರೆ ಪದೇ ಪದೆ ಟೋಲ್ ಏರಿಕೆ ರಾಜ್ಯದ ಜನರಿಗೆ ಕೋಪ ತರಿಸಿದೆ. ಕಾಂಗ್ರೆಸ್ ಕೂಡ ಇದೇ ಅಸ್ತ್ರ ಹಿಡಿದು 'ಚುನಾವಣೆಗಾಗಿ ಟೋಲ್ ದರ ಏರಿಕೆಯನ್ನು ಮುಂದೂಡಿತ್ತು ಬಿಜೆಪಿ ಸರ್ಕಾರ, ಈಗ ಏಕಾಏಕಿ ಟೋಲ್ ದರ 22% ಏರಿಕೆಯಾಗಿದೆ. ಈ ಟೋಲ್ ಸುಲಿಗೆ ಬಗ್ಗೆ @BJP4Karnataka ಬಾಯಿ ಬಂದ್ ಆಗಿರುವುದೇಕೆ? ಈ ವಿಷಯದಲ್ಲಿ ಜನರ ಜೇಬಿನ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲವೇಕೆ? ಬಿಜೆಪಿಗೆ ತಾಕತ್ತಿದ್ದರೆ ಟೋಲ್ ಮುಕ್ತ ಹೆದ್ದಾರಿಗಳನ್ನು ಮಾಡಲು ಮೋದಿಯವರಲ್ಲಿ ಆಗ್ರಹಿಸಲಿ.' ಎಂದು ಸವಾಲು ಹಾಕಿದೆ.
ಚುನಾವಣೆಗಾಗಿ ಟೋಲ್ ದರ ಏರಿಕೆಯನ್ನು ಮುಂದೂಡಿತ್ತು ಬಿಜೆಪಿ ಸರ್ಕಾರ, ಈಗ ಏಕಾಏಕಿ ಟೋಲ್ ದರ 22% ಏರಿಕೆಯಾಗಿದೆ.
— Karnataka Congress (@INCKarnataka) June 13, 2023
ಈ ಟೋಲ್ ಸುಲಿಗೆ ಬಗ್ಗೆ @BJP4Karnataka ಬಾಯಿ ಬಂದ್ ಆಗಿರುವುದೇಕೆ?
ಈ ವಿಷಯದಲ್ಲಿ ಜನರ ಜೇಬಿನ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲವೇಕೆ?
ಬಿಜೆಪಿಗೆ ತಾಕತ್ತಿದ್ದರೆ ಟೋಲ್ ಮುಕ್ತ ಹೆದ್ದಾರಿಗಳನ್ನು ಮಾಡಲು ಮೋದಿಯವರಲ್ಲಿ… pic.twitter.com/r9kvEyklWO
ವಿದ್ಯುತ್ ಬೆಲೆ ಏರಿಕೆ ವಿಚಾರದಲ್ಲೂ ಕಿರಿಕ್
ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ 1 ತಿಂಗಳೂ ಕಳೆದಿಲ್ಲ, ಅದಾಗಲೇ ವಿದ್ಯುತ್ ಬೆಲೆ ಏರಿಕೆ ಆಗಿದೆ ಅಂತಾ ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಾವು ಬೆಲೆ ಏರಿಕೆ ಮಾಡಿಲ್ಲ. ಬೆಲೆ ಏರಿಕೆ ಮಾಡಿರೋದೆ ಬಿಜೆಪಿ. ತನ್ನ ಆಡಳಿತಾವಧಿ ಮುಗಿಸಿ ಹೋಗುವ ಮೊದಲು, ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ BJP ಸರ್ಕಾರ ವಿದ್ಯುತ್ ಬೆಲೆ ಏರಿಸಿದೆ ಅಂತಿದ್ದಾರೆ ಕಾಂಗ್ರೆಸ್ ನಾಯಕರು. ಈ ನಡುವೆ ಇವರಿಬ್ಬರ ಕಿತ್ತಾಟದಲ್ಲಿ ರಾಜ್ಯದ ಜನ ಪರದಾಡುವ ಸ್ಥಿತಿ ಬಂದಿದೆ. ಇದರ ಜೊತೆಗೆ ಟೋಲ್ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಬೇರೆ ಗಾಯದ ಮೇಲೆ ಬರೆ ಎಳೆಯುತ್ತಿದೆ.
ಹೀಗೆ ಒಂದಲ್ಲ ಒಂದು ವಿಚಾರ ಹಿಡಿದು ಬಿಜೆಪಿ & ಕಾಂಗ್ರೆಸ್ ಫೈಟ್ ಮಾಡುತ್ತಿವೆ. ಆದರೆ ರಾಜ್ಯದ ಜನ ಮಾತ್ರ ಪರದಾಡುತ್ತಿದ್ದಾರೆ. ಒಂದ್ಕಡೆ ವಿದ್ಯುತ್ ಬೆಲೆ ಏರಿಕೆಯಿಂದ ಜನರು ಪರದಾಡುತ್ತಿದ್ದರೆ, ದಿಢೀರ್ ಟೋಲ್ ಬೆಲೆ ಏರಿಕೆ ಮಾಡಿರುವುದು ಬಡ ಸವಾರರಿಗೆ ಚಿಂತೆ ತರಿಸಿದೆ. ಹೀಗಾಗಿ ಜನರು ಎರಡೂ ವಿಚಾರದ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಕಿತ್ತಾಡೋದು ಬಿಟ್ಟು ಸಮಸ್ಯೆಗಳನ್ನ ಬಗೆಹರಿಸಲಿ ಅಂತಾ ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ರಾಜ್ಯದ ಮತದಾರರು ಆಗ್ರಹ ಮಾಡುತ್ತಿದ್ದಾರೆ.












Click it and Unblock the Notifications