ಬಿಜೆಪಿ ಲಿಂಗಾಯತ ವಿರೋಧಿ, ಜೋಶಿ ದರ್ಬಾರ್; ಕಾಂಗ್ರೆಸ್ ಟ್ವೀಟ್ ಬಾಣ
ಬೆಂಗಳೂರು, ಮೇ 05; ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಹೆಚ್ಚಾಗಿ ಚರ್ಚೆ ಆಗುತ್ತಿರುವ ವಿಚಾರ ಲಿಂಗಾಯತರ ಪರ ಯಾರು, ವಿರೋಧಿಗಳು ಯಾರು? ಎಂಬುದು. ಬಹಿರಂಗ ಪ್ರಚಾರಕ್ಕೆ ಮೇ 8ರ ತನಕ ಅವಕಾಶವಿದ್ದು, ಮೇ 10ರಂದು ಮತದಾನ ನಡೆಯಲಿದೆ.
ಕರ್ನಾಟಕ ಕಾಂಗ್ರೆಸ್ ಬಿಜೆಪಿ ಲಿಂಗಾಯತ ವಿರೋಧಿ ಎಂದು ಶುಕ್ರವಾರ ಸರಣಿ ಟ್ವೀಟ್ ಮೂಲಕ ಟೀಕೆ ಮಾಡಿದೆ. 'ಜೋಶಿ ದರ್ಬಾರ್‌ಗಾಗಿ ಲಿಂಗಾಯತ ನಾಯಕರೆಲ್ಲರನ್ನೂ ಮುಗಿಸಿದ್ದೇ?' ಎಂದು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಟ್ವೀಟ್ ಮಾಡಿದೆ.

ಮೊದಲ ಟ್ವೀಟ್‌ನಲ್ಲಿ, 'ಬಿಜೆಪಿಗೆ BSYಅವರ ಅಗತ್ಯ ಇನ್ನು ಕೆಲವೇ ದಿನ, ನಂತರ ಉತ್ಸವ ಮೂರ್ತಿಯಾಗಿದ್ದವರನ್ನು ವಿಸರ್ಜನಾ ಮೂರ್ತಿಯನ್ನಾಗಿಸುತ್ತದೆ. ಬೊಮ್ಮಾಯಿಯವರ ಕೌಂಟ್ ಡೌನ್ ಕೂಡ ಶುರುವಾಗಿದೆ. ಮೋದಿ ಮುಖ ನೋಡಿ ಮತ ಕೊಡಿ ಎನ್ನುತ್ತಿರುವ ಬಿಜೆಪಿ ಮುಂದೆ ಇಲ್ಲಿ ತೋರಿಸುವ ಮುಖ ಯಾವುದು ಜೋಷಿಯದ್ದೋ, ಸಂತೋಷರದ್ದೋ?. ಜೋಶಿ ದರ್ಬಾರ್‌ಗಾಗಿ ಲಿಂಗಾಯತ ನಾಯಕರೆಲ್ಲರನ್ನೂ ಮುಗಿಸಿದ್ದೇ?' ಎಂದು ಬಿಜೆಪಿಯನ್ನು ಕೇಳಿದೆ.
ಮತ್ತೊಂದು ಟ್ವೀಟ್‌ನಲ್ಲಿ, 'ಲಿಂಗಾಯತರ ಅಗತ್ಯವಿಲ್ಲ ಎಂಬುದನ್ನು ಬಿಜೆಪಿ ಕ್ರಿಯೆಯಲ್ಲೂ ತೋರಿಸಿದೆ. ಸವದಿ, ಶೆಟ್ಟರ್, BSY ಸೇರಿದಂತೆ ಹಲವು ಲಿಂಗಾಯತ ನಾಯಕರನ್ನು ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕಾಗಿಯೇ ಅಲ್ಲವೇ?. ಯಡಿಯೂರಪ್ಪ ಕಟ್ಟಿದ ಹುತ್ತದಲ್ಲಿ ಹಾವೊಂದು ಸಂತೋಷದಿಂದ ಸಾಮ್ರಾಜ್ಯ ಸ್ಥಾಪಿಸಲು ಹವಣಿಸುತ್ತಿರುವುದು ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯಲಿದೆ' ಎಂದು ಟೀಕೆ ಮಾಡಿದೆ.
ಇನ್ನೊಂದು ಟ್ವೀಟ್‌ನಲ್ಲಿ 'ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರ ವಿಥ್ ಬಿ.ಎಲ್ ಸಂತೋಷ್" ಬಿಜೆಪಿಯ ಟ್ವಿಟರ್ ಸ್ಪೇಸ್‌ನ ಈ ಹೆಸರು ರಹಸ್ಯವನ್ನು ಸೂಚಿಸುತ್ತಿದೆ. ಸಿಎಂ ಹುದ್ದೆಯ ಆಸೆಯಲ್ಲಿರುವ ಸಂತೋಷರಿಗೆ ಸ್ಪರ್ಧಿಸಲು 224ರಲ್ಲಿ ಒಂದು ಕ್ಷೇತ್ರವೂ ಸಿಗಲಿಲ್ಲವೇ?. ಇದುವರೆಗೂ ಒಂದೂ ಬಹಿರಂಗ ಪ್ರಚಾರಕ್ಕೆ ಹೋಗಲಿಲ್ಲ ಏಕೆ? @blsanthosh ಅವರೇ, ತಾವು ಚಿರಂಜೀವಿಯೇ?' ಎಂದು ಕೇಳಿದೆ.
ಯಡಿಯೂರಪ್ಪ ಕಡೆಗಣನೆ; ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಡೆಗಣಿಸಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಟಿಕೆಟ್ ನೀಡದೆ ಲಿಂಗಾಯತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಪದೇ ಪದೇ ಟೀಕೆ ಮಾಡುತ್ತಿದೆ. ಸಂತೋಷ ಕೂಟ ಎಂಬ ಪದ ಬಳಕೆ ಮಾಡಿ ಜೋಶಿ, ಬಿ. ಎಲ್. ಸಂತೋಷ್ ವಿರುದ್ಧ ಟೀಕೆ ಮಾಡುತ್ತಿದೆ.
ಈ ಹಿಂದೆಯೂ ಕಾಂಗ್ರೆಸ್ ಟ್ವೀಟ್ ಮಾಡಿ, 'ಜೋಶಿ, ಸಂತೋಷರ ಮುಖ ತೋರಿಸಿದರೆ ನಾಲ್ಕು ಮತಗಳು ಸಿಗುವುದಿಲ್ಲ ಎಂಬ ವಾಸ್ತವ ಸಂಗತಿ ಅರಿವಾಗುತ್ತಲೇ BSYರನ್ನು ಉತ್ಸವ ಮೂರ್ತಿ ಮಾಡಲು ಹೊರಟಿರುವ ಇದೇ ಬಿಜೆಪಿ ಹಿಂದೆ BSYರನ್ನು ಹೇಗೆಲ್ಲಾ ನಡೆಸಿಕೊಂಡಿತ್ತು ಎಂಬುದನ್ನು ಜನತೆ ನೋಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ BSY ಎಂಬ ಉತ್ಸವ ಮೂರ್ತಿಯನ್ನ ವಿಸರ್ಜನಾ ಮೂರ್ತಿ ಮಾಡಲಿದೆ ಬಿಜೆಪಿ' ಎಂದು ಭವಿಷ್ಯ ನುಡಿದಿತ್ತು.
ಬಿಜೆಪಿ ಸಹ ಹಲವು ಬಾರಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ. 'ಕಾಂಗ್ರೆಸಿನ ವೀರಶೈವ ಲಿಂಗಾಯತ ವಿರೋಧಿ ನಡೆಗಳು ಜನತೆಗೆ ಗೊತ್ತಿಲ್ಲದೆ ಏನಿಲ್ಲ. ದಶಕಗಳಿಂದಲೂ ಕಾಂಗ್ರೆಸ್ ವೀರಶೈವ ಲಿಂಗಾಯತ ಸಮುದಾಯವನ್ನು ತನ್ನ ವೋಟ್ ಬ್ಯಾಂಕ್ ಎಂದು ಬಳಸಿ ಬಿಸಾಡುತ್ತಾ ಬಂದಿದೆ. ಅದಕ್ಕೆ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ' ಎಂದು ಬಿಜೆಪಿ ಟ್ವೀಟ್ ಮಾಡಿತ್ತು.
'ನಾಡು ಕಂಡ ಸಜ್ಜನ ರಾಜಕಾರಣಿ, ವೀರಶೈವ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಅವರನ್ನು ಮಾನವೀಯತೆಯ ನೆಲೆಗಟ್ಟನ್ನು ಮೀರಿ, ಅಂದಿನ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದಲೇ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿಗಾದಿಯಿಂದ ಕಿತ್ತು ಹಾಕಿದರು. ಇದು ಕರ್ನಾಟಕದ ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದಂತಹ ಘನ ಘೋರ ಅಪಮಾನ' ಎಂದು ಹೇಳಿತ್ತು.
'1991ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ, ಕಾಂಗ್ರೆಸ್ ಇಲ್ಲಿಯವರೆಗೂ ಯಾವೊಬ್ಬ ವೀರಶೈವ ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ' ಎಂದು ಬಿಜೆಪಿ ತಿರುಗೇಟು ಕೊಟ್ಟಿತ್ತು.












Click it and Unblock the Notifications