ಬಿಟ್ ಕಾಯಿನ್ ಹಗರಣ: ಶ್ರೀಕಿ ಸಹೋದರನ ಲುಕ್ ಔಟ್ ನೋಟಿಸ್ ರದ್ದು
ಬೆಂಗಳೂರು, ಅಕ್ಟೋಬರ್ 17; ಕರ್ನಾಟಕದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಿಟ್ ಕಾಯಿನ್ ಹಗರಣದಲ್ಲಿ ಪ್ರಮುಖ ಆರೋಪಿ ಎನ್ನಲಾದ ಶ್ರೀಕಿ ಸಹೋದರ ಸುದರ್ಶನ್ ರಮೇಶ್ ವಿರುದ್ಧ ಹೊರಡಿಸಿದ್ದ ಲುಕ್‌ಔಟ್ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ತನ್ನ ವಿರುದ್ಧ ಹೊರಡಿಸಿರುವ ಎಲ್‌ಒಸಿ ರದ್ದುಪಡಿಸುವಂತೆ ಕೋರಿ ಸುದರ್ಶನ್ ರಮೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಕೇಂದ್ರ ಗೃಹ ಇಲಾಖೆಯ ಬ್ಯುರೊ ಆಫ್ ಇಮಿಗ್ರೇಷನ್ ಸುದರ್ಶನ್ ವಿರುದ್ಧ ಹೊರಡಿಸಿರುವ ಲುಕ್ ಔಟ್ ಸುತ್ತೋಲೆಯನ್ನು (ಎಲ್‌ಒಸಿ) ಅನುಷ್ಠಾನಗೊಳಿಸಲಾಗದು ಹಾಗೂ ಅವರ ಪಾಸ್‌ಪೋರ್ಟ್ ರದ್ದುಪಡಿಸಲಾಗಿದೆ ಎಂದು ನೀಡಲಾಗಿರುವ ಹಿಂಬರಹವನ್ನು ಬ್ಯುರೊ ಆಫ್ ಇಮಿಗ್ರೇಷನ್ ತೆಗೆದು ಹಾಕಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ತನಿಖೆಯ ಸಂದರ್ಭದಲ್ಲಿ ಆಕ್ಷೇಪಾರ್ಹವಾದ ವಿಚಾರಗಳು ಕಂಡುಬಂದಲ್ಲಿ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದರೆ ಅರ್ಜಿದಾರರು ಹಾಜರಾಗಬೇಕು. ಈಮೇಲ್ ಐಡಿ, ಸಂಪರ್ಕ ವಿವರ ಮತ್ತು ಶಾಶ್ವತ ವಸತಿ ವಿಳಾಸವನ್ನು ಅರ್ಜಿದಾರರು ನೀಡಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಅನುಮಾನದ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಎಲ್‌ಒಸಿ ಮುಂದುವರಿಯುವುದು ಕಾನೂನು ದುರ್ಬಳಕೆಯಾಗಲಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಾದವೇನು?; ಅರ್ಜಿದಾರರ ಪರ ವಕೀಲರು, ಅರ್ಜಿದರರನ್ನು ವಿನಾಕಾರಣ ವಿಚಾರಣೆಗೆ ಹಾಜರಾಗುವಂತೆ ಮನವಿ ಮಾಡಲಾಗುತ್ತಿದೆ. ಈ ಬೆಳವಣಿಗೆ ನ್ಯಾಯಾಂಗ ನಿಯಮಗಳ ಉಲ್ಲಂಘನೆಯಾದಂತಾಗಿದೆ. ತನಿಖೆಗೆ ಸಹಕರಿಸಿದರೂ, ಸ್ವಯಂ ದೋಷಾರೋಪಣೆ ಹೇಳಿಕೆಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಎಲ್‌ಒಸಿ ಆದೇಶವನ್ನು ರದ್ದು ಮಾಡಬೇಕು ಎಂದು ಕೋರಿದ್ದರು.
ಕೇಂದ್ರ ಸರ್ಕಾರದ ಪರವಾಗಿ ವಾದಮಂಡಿಸಿದ ಸಹಾಯಕ ಸಾಲಿಸೇಟರ್ ಜನರಲ್, ಅರ್ಜಿದಾರರ ವಿರುದ್ಧದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ವಿಚಾರಣೆ ಬರುವಂತೆ ಕೋರಲಾಗಿದೆ. ಜತೆಗೆ, ಅರ್ಜಿದಾರರ ಸಹೋದರನ ವಿರುದ್ಧ ಗಂಭೀರವಾದ ಆರೋಪವಿದೆ. ಇದೇ ಕಾರಣದಿಂದ ಅರ್ಜಿದಾರರ ವಿರುದ್ಧ ಎಲ್‌ಒಸಿ ನೀಡಲಾಗಿದೆ. ಈ ಸುತ್ತೋಲೆ ಹಿಂಪಡೆದಲ್ಲಿ ಅರ್ಜಿದಾರರ ವಿದೇಶಕ್ಕೆ ತೆರಳಲಿದ್ದು, ತನಿಖೆಗೆ ಸಹಕರಿಸದೇ ಇರಬಹುದು. ಹೀಗಾಗಿ ಎಲ್‌ಒಸಿ ರದ್ದು ಮಾಡಲಾಗದು ಎಂದು ಮನವಿ ಮಾಡಿದ್ದರು. ಅಲ್ಲದೆ, ಅರ್ಜಿದಾರರ ಖಾತೆಯಿಂದ ವಿದೇಶಿ ಮೊತ್ತ ವರ್ಗಾವಣೆಯಾಗಿದೆ. ಈ ಸಂಬಂಧ ಮಾಹಿತಿ ಸಂಗ್ರಹಿಸಲು ಇ-ಮೇಲ್ ಐಡಿ ಸೇರಿದಂತೆ ಮತ್ತಿತರರ ಮಾಹಿತಿ ನೀಡುತ್ತಿಲ್ಲ. ಆದ ಕಾರಣ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಸುದರ್ಶನ್ ರಮೇಶ್ 2021ರಂದು ನೆದರ್‌ಲ್ಯಾಂಡ್‌ನಿಂದ ಭಾರತಕ್ಕೆ ಬಂದಿದ್ದರು. ಸುದರ್ಶನ್‌ಗೆ ಪಿಎಂಎಲ್‌ಎ ಸೆಕ್ಷನ್ 50ರ ಅಡಿ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನ ವಿಚಾರಣೆಗೆ ಹಾಜರಾಗಿದ್ದರು. ಅಂದು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು.
13/1/2022ರಂದು ನೆದರ್‌ಲ್ಯಾಂಡ್‌ಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದಾಗಿ ಇಮಿಗ್ರೇಷನ್ ಅಧಿಕಾರಿಗಳು ಸುದರ್ಶನ್ ಅವರನ್ನು ತಡೆದಿದ್ದು, ಅವರ ಪಾಸ್‌ಪೋರ್ಟ್‌ಗೆ ಕ್ಯಾನ್ಸಲ್ ಹಿಂಬರಹ ನೀಡಲಾಗಿತ್ತು. ಆದರೆ, ಎಲ್‌ಒಸಿ ಪ್ರತಿಯನ್ನು ಅರ್ಜಿದಾರರಿಗೆ ನೀಡಿರಲಿಲ್ಲ. ಈ ಮಧ್ಯೆ, ಪಿಎಂಎಲ್‌ಎ ಅಡಿ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications