ಕರ್ನಾಟಕದಲ್ಲಿ ಬೃಹತ್ 'ಸ್ಪೋಟ್ಸ್ ಸಿಟಿ' ನಿರ್ಮಾಣ, 'ಕ್ರೀಡಾ ವಿವಿ' ಸ್ಥಾಪನೆಗೆ ಸರ್ಕಾರದ ಆಸಕ್ತಿ
ಬೆಂಗಳೂರು, ಡಿಸೆಂಬರ್ 27: ಕರ್ನಾಟಕದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಪ್ಪತ್ತು ಎಕರೆ ವ್ಯಾಪ್ತಿಯ "ಸ್ಪೋರ್ಟ್ಸ್ ಸಿಟಿ" (ಕ್ರೀಡಾ ನಗರ) ನಿರ್ಮಿಸುವ ಪ್ರಸ್ತಾವನೆ ರಾಜ್ಯದ ಸರ್ಕಾರದ ಮುಂದೆ ಇದೆ. ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾಹಿತ ನೀಡಿದರು.
ಮಂಗಳವಾರ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ 2023ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಯುವಕರು ಸಹಿತ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಬೇಕು.

ಈ ಉದ್ದೇಶದಿಂದಲೇ ಯುವಕರಿಗೆ ಕ್ರೀಡೆಯನ್ನು ಉತ್ತೇಜಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಂಕಲ್ಪ ತೊಟ್ಟು ಶ್ರಮದಿಂದ ಕ್ರೀಡಾ ಅಭ್ಯಾಸ ನಡೆಸಬೇಕು. ರಾಜ್ಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತಂದು ಕೊಡಬೇಕು. ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಕ್ರೀಡೆಗಳಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹ, ನೆರವು ಕುರಿತು ತಿಳಿಸಿದರು.
ಕ್ರೀಡಾ ವಿವಿ ಸ್ಥಾಪನೆಗೆ ಆಸಕ್ತಿ
ಆಸ್ಟ್ರೇಲಿಯಾ, ಅಮೆರಿಕ, ಚೀನಾ ದೇಶಗಳಲ್ಲಿ ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರೆ, ಯುವಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಜಿಲ್ಲೆಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ
ಸುಸಜ್ಜಿತವಾದ ಬಾಸ್ಕೆಟ್ ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 5 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ 15ಕ್ಕು ಹೆಚ್ಚು ಸಿಂಥೆಟಿಕ್ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿದೆ. ತುಮಕೂರಿನಲ್ಲಿ 58 ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತವಾದ ಕ್ರೀಡಾಂಗಣವನ್ನು ಸರ್ಕಾರ ನಿರ್ಮಿಸಿದೆ. ಕಂಠೀರವ ಸ್ಟೇಡಿಯಂಗಿಂತ ಸುಸಜ್ಜಿತವಾಗಿದೆ. ಸುಮಾರು 800 ಅಥ್ಲೆಟಿಕ್‌ಗಳು ಭಾಗವಹಿಸಬಹುದು. ಇದೇ ಮಾದರಿಯ ಕ್ರೀಡಾಂಗಣಗಳನ್ನು ಬೇರೆ ಜಿಲ್ಲೆಗಳಲ್ಲಿಯು ನಿರ್ಮಿಸಲಾಗುವುದು ಎಂದು ಹೇಳಿದರು.

ರಾಜ್ಯದ ಯುವಕರನ್ನು ಕ್ರೀಡಾ ಕ್ಷೇತ್ರಕ್ಕೆ ಸೆಳೆಯಲು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇಕಡಾ 3ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದನ್ನು ರಾಜ್ಯದ ಎಲ್ಲ ಇಲಾಖೆಗಳ ನೇಮಕಾತಿಗೆ ಅನ್ವಯಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಬಿ.ನಾಗೇಂದ್ರ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ. ಗೋವಿಂದರಾಜು ಅವರು ಉಪಸ್ಥಿತರಿದ್ದರು.












Click it and Unblock the Notifications