ಶಿವನಸಮುದ್ರ ಬಳಿ ಬಿಎಚ್ಇಎಲ್ ಸೌರ ವಿದ್ಯುತ್ ಘಟಕ
ಬೆಂಗಳೂರು, ಜು. 28 : ಬಿಎಚ್ಇಎಲ್ ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿ 10 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲಿದೆ. ಕರ್ನಾಟಕ ವಿದ್ಯುತ್ ನಿಗಮದೊಂದಿಗೆ ಈ ಬಗ್ಗೆ ಬಿಎಚ್ಇಎಲ್ ಒಪ್ಪಂದ ಮಾಡಿಕೊಂಡಿದೆ.
ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿಯ ಬೆಳಕವಾಡಿ ಗ್ರಾಮದಲ್ಲಿ ಈ 10 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ ನಿರ್ಮಾಣಗೊಳ್ಳಲಿದೆ. ಸುಮಾರು 68 ಕೋಟಿ ರೂ.ಗಳ ವೆಚ್ಚದಲ್ಲಿ ಬಿಎಚ್‌ಇಎಲ್ ಇದನ್ನು ನಿರ್ಮಿಸುತ್ತಿದ್ದು, ಮೂರು ವರ್ಷಗಳ ಅವಧಿಗೆ ಸ್ಥಾವರವನ್ನು ಸಂಸ್ಥೆಯೇ ಸಂರಕ್ಷಣೆ ಮಾಡಲಿದೆ.

ಬಿಎಚ್‌ಇಎಲ್ ಈಗಾಗಲೇ ರಾಯಚೂರಿನ ಬಳಿ 3 ಮೆಗಾವ್ಯಾಟ್ ಹಾಗೂ ಶಿವನಸಮುದ್ರದ ಬಳಿ 5 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಸದ್ಯ ಶಿವನಸಮುದ್ರ ಬಳಿ 10 ಮೆಗಾವ್ಯಾಟ್ ಸಾಮರ್ಥ್ಯದ ಮತ್ತೊಂದು ಸ್ಥಾವರ ಸ್ಥಾಪಿಸಲು ಮುಂದಾಗಿದೆ. [ಶಿವನಸಮುದ್ರ ಬಳಿ ತಲೆ ಎತ್ತಿದ ಸೌರ ವಿದ್ಯುತ್ ಘಟಕ]
2ರಿಂದ 10 ಮೆಗಾವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಸ್ಥಾವರ ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿರುವ ಬಿಎಚ್‌ಇಎಲ್ ಈಗಾಗಲೇ ನೆರೆಯ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತ್ರಿಪುರ ಹಾಗೂ ಉತ್ತರ ಪ್ರದೇಶದಲ್ಲಿ ಸೌರವಿದ್ಯುತ್ ಉತ್ಪಾದಿಸಿ ಪ್ರಮುಖ ಜಾಲಕ್ಕೆ ವರ್ಗಾವಣೆ ಮಾಡುತ್ತಿದೆ. [ಅಬ್ದುಲ್ ಕಲಾಂನಷ್ಟೇ ಬುದ್ದಿವಂತ ರೈತ ಕೃಷ್ಣಪ್ಪ]
ಸೌರ ವಿದ್ಯುತ್ ಘಟಕ ಸ್ಥಾಪನೆ ಕುರಿತು ಕರ್ನಾಟಕ ವಿದ್ಯುತ್ ನಿಗಮದೊಂದಿಗೆ ಬಿಎಚ್ಇಎಲ್ ಒಪ್ಪಂದ ಮಾಡಿಕೊಂಡಿದ್ದು, ಈ ಯೋಜನೆಯಲ್ಲಿ ಬಿಎಚ್‌ಇಎಲ್ ಕಾರ್ಯವ್ಯಾಪ್ತಿಯಲ್ಲಿ ಸೌರವಿದ್ಯುತ್ ಸ್ಥಾವರದ ವಿನ್ಯಾಸ, ಉತ್ಪಾದನೆ, ಸರಬರಾಜು, ಸ್ಥಾಪನೆ ಮತ್ತು ಕಾರ್ಯಾಚರಣೆ ಸೇರಿದೆ.
ಹೊಸ ಘಟಕಗಳ ಸ್ಥಾಪನೆ : 2012ರಲ್ಲಿ ಬಿಎಚ್ಇಎಲ್ ರಾಜ್ಯದ 10 ಕಡೆ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿತ್ತು. ಹಾವೇರಿ, ಬಾಗಲಕೋಟೆ, ತುಮಕೂರು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ತಲಾ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕಗಳು ನಿರ್ಮಾಣಗೊಳ್ಳಲಿವೆ.












Click it and Unblock the Notifications